ಮಂಗಳೂರು:- ಕರ್ನಾಟಕ ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅದೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಜಿಲ್ಲೆಯ ಖಾಸಗೀ ಆಸ್ಪತ್ರೆಯಲ್ಲಿ ದೀರ್ಘಕಾಲದ ಮೂತ್ರಪಿಂಡ ಖಾಯಿಲೆಯ ರೋಗಿಗಳಿಗೆ ಡಯಾಲಿಸಿಸ್ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದ್ದು, ಇದರಿಂದ ಹಲವಾರು ಬಡ ರೋಗಿಗಳಿಗೆ ಬಹಳ ಪ್ರಯೋಜನವಾಗುತ್ತಿತ್ತು, ಆದರೆ ಸರಕಾರ ಇದೀಗ ದಿಡೀರಾಗಿ ಈ ಪ್ರಕ್ರಿಯೆಯನ್ನು ಸ್ಥಗಿತ ಗೊಳಿಸಿರುತ್ತದೆ. ಇದರಿಂದಾಗಿ ನಿರಂತರವಾಗಿ ಡಯಾಲಿಸಿಸ್ ಮಾಡಿಸಬೇಕಾದ ಬಡ ರೋಗಿಗಳಿಗೆ ತುಂಬಾ ಸಮಸ್ಯೆಯಾಗಿರುತ್ತದೆ.
ವಿಶೇಷವಾಗಿ ದ.ಕ ಜಿಲ್ಲೆಯು ಆರೋಗ್ಯ ಹಬ್ ಆಗಿದ್ದು ನಮ್ಮ ನೆರೆಯ ಹಲವಾರು ಜಿಲ್ಲೆಗಳಿಂದ ಹಾಗೂ ಪಕ್ಕದ ರಾಜ್ಯವಾದ ಕೇರಳದಿಂದ ದಿನನಿತ್ಯ ಹಲವಾರು ರೋಗಿಗಳು ಮಂಗಳೂರಿಗೆ ಬರುತ್ತಾರೆ. ಮೂತ್ರಪಿಂಡ ಸಮಸ್ಯೆ ಉಲ್ಬಣಿಸಿದ ರೋಗಿಗಳಿಗೆ ವಾರದಲ್ಲಿ ಎರಡರಿಂದ ಮೂರು ಸಲ ನಿರಂತರವಾಗಿ ಡಯಾಲಿಸಿಸ್ ಮಾಡಬೇಕಾಗುತ್ತದೆ. ಅದೂ ಕೂಡ ನಿಗದಿತ ಸಮಯದಲ್ಲಿ ಡಯಾಲಿಸಿಸ್ ಚಿಕಿತ್ಸೆಗೆ ಒಳಪಡದಿದ್ದಲ್ಲಿ ರೋಗಿಯು ಮರಣ ಹೊಂದುವ ಸಂಭವವಿದೆ. ಇವಾಗ ಜಿಲ್ಲೆಯ ವೆನ್ಲಾಕ್ ಆಸ್ಪತ್ರೆಯಲ್ಲಿ 12 ಡಯಾಲಿಸಿಸ್ ಯಂತ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಗರಿಷ್ಟ ಅಂದರೆ 45 ರೋಗಿಗಳಿಗೆ ಮಾತ್ರ ಡಯಾಲಿಸಿಸ್ ಮಾಡಲು ಸಾಧ್ಯವಾಗಿದೆ. ವೆನ್ಲಾಕ್ ಆಸ್ಪತ್ರೆಯ ಡಯಾಲಿಸಿಸ್ ವಿಭಾಗಕ್ಕೆ ನಮ್ಮ ನಿಯೋಗ ಬೇಟಿ ನೀಡಿದ ಸಂಧರ್ಭದಲ್ಲಿ ನಮಗೆ ಲಭಿಸಿದ ಮಾಹಿತಿಯಂತೆ ಹಲವಾರು ರೋಗಿಗಳು ಡಯಾಲಿಸಿಸ್ ಮಾಡಲು ಸಮಯ ಹಾಗೂ ದಿನ ಕಾದಿರಿಸಿದ್ದರೂ ಬಹಳ ವಿಳಂಬವಾಗಿ ಅವರಿಗೆ ಈ ಅನುಕೂಲ ಲಬಿಸುತ್ತಿದ್ದು, ಬಡ ರೋಗಿಗಳು ಹಾಗೂ ಅವರ ಕುಟುಂಬಸ್ತರು ಆತಂಕದಲ್ಲಿದ್ದಾರೆ.
ದಿನದಿಂದ ದಿನಕ್ಕೆ ಮೂತ್ರಪಿಂಡ ರೋಗಿಗಳ ಸಂಖ್ಯೆಯು ವೃದ್ದಿಸುತ್ತಿದ್ದು, ಈ ಖಾಯಿಲೆಯ ರೋಗಿಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದವರೇ ಹೆಚ್ಚಾಗಿದ್ದಾರೆ. ಗರಿಷ್ಠ ಸಂಖ್ಯೆಯಲ್ಲಿರುವ ಕಿಡ್ನಿ ವೈಫಲ್ಯವಾದ ರೋಗಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸರಕಾರವು ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಹೆಚ್ಚುವರಿಯಾಗಿ 50 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಬೇಕು. ಪ್ರಸ್ತುತ ಕೊರೋನಾ ಸೋಂಕು ವಿಪರೀತವಾಗಿ ಹರಡುತ್ತಿದ್ದು ಇದೀಗ ಜನರು ಕೊರೋನಾ 2ನೇ ಅಲೆಯ ಭೀತಿಯಲ್ಲಿದ್ದಾರೆ. ಕಿಡ್ನಿ ವೈಫಲ್ಯದ ರೋಗಿಗಳಿಗೆ ಕೊರೋನಾ ಬಾದಿಸುತ್ತಿದ್ದು ಒಳ ರೋಗಿಗಳಾಗಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ.
ಆದ್ದರಿಂದ ಖಾಸಗೀ ಆಸ್ಪತ್ರೆಗಳಲ್ಲಿ ಈಗಾಗಲೇ ಸರಕಾರ ಹಿಂಪಡೆದ ಉಚಿತ ಡಯಾಲಿಸಿಸ್ ವ್ಯವಸ್ಥೆಯನ್ನು ಕೂಡಲೇ ಪುನರಾರಂಭಿಸಿ ಕನಿಷ್ಠ ಪಕ್ಷ 6 ತಿಂಗಳು ಈ ವ್ಯವಸ್ಥೆಯನ್ನು ಮುಂದುವರಿಸಬೇಕು ಹಾಗೂ ಅದೇ ರೀತಿ ಪ್ರತೀ ತಾಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ 3 ರಿಂದ 4 ಯಂತ್ರಗಳು ಮಾತ್ರ ಇದ್ದು ಅದನ್ನು ಕನಿಷ್ಠ ಪಕ್ಷ 8 ಯಂತ್ರಗಳಿಗೆ ವಿಸ್ತರಿಸಬೇಕು ಹಾಗೂ ಜಿಲ್ಲೆಯಲ್ಲಿರುವ ಪ್ರತೀ ಸಮುದಾಯ ಆರೋಗ್ಯ ಕೇಂದ್ರದಲ್ಲೂ ಡಯಾಲಿಸಿಸ್ ಘಟಕಗಳನ್ನು ಅಳವಡಿಸಬೇಕು. ಹೀಗಾದಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿರುವ ರೋಗಿಗಳಿಗೆ ಅವರ ಸಮಯ ಹಾಗೂ ಸಾರಿಗೆ ವೆಚ್ಚ ಉಳಿತಾಯವಾಗಲಿದೆ. ಕೋವಿಡ್ ಕೇಸುಗಳು ಇದೀಗ ಮತ್ತೆ ಏರಿಕೆಯಾಗುತ್ತಿರುವ ಸಂಧರ್ಭದಲ್ಲಿ ರೋಗಿಗಳಿಗೂ ಇದು ಬಹಳ ಪ್ರಯೋಜನವಾಗಲಿದೆ. ಆದ್ದರಿಂದ ಸರಕಾರ ಹಾಗೂ ಜಿಲ್ಲೆಯ ಜನ ಪ್ರತಿನಿಧಿಗಲು ಈ ಬಗ್ಗೆ ವಿಶೇಷ ಗಮನ ಹರಿಸಿ ಬಡ ರೋಗಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ಆಗ್ರಹಿಸುತ್ತದೆ.
ಸರಕಾರದ ಮುಂದೆ ಪ್ರಮುಖ ಬೇಡಿಕೆಗಳು:
1. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕನಿಷ್ಠ 50 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಬೇಕು.
2. ಮಂಗಳೂರಿನ ಖಾಸಗೀ ಆಸ್ಪತ್ರೆಗಳಲ್ಲಿ ಸರಕಾರವು ಬಡ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆಯನ್ನು ನೀಡಬೇಕು.
3. ಪ್ರತೀ ತಾಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ 2 ರಿಂದ 4 ಡಯಾಲಿಸಿಸ್ ಯಂತ್ರಗಳಿದ್ದು ಅದನ್ನು ಕನಿಷ್ಟ 7 ರಿಂದ 8 ಯಂತ್ರಗಳಿಗೆ ವಿಸ್ತರಿಸಬೇಕು.
4. ಜಿಲ್ಲೆಯ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಡಯಾಲಿಸಿಸ್ ಸೌಲಭ್ಯವನ್ನು ಕಲ್ಪಿಸಬೇಕು.
(ಇದರಿಂದ ಗ್ರಾಮಾಂತರ ಪ್ರದೇಶದ ಬಡ ರೋಗಿಗಳಿಗೆ ಸಮಯ ಹಾಗೂ ಸಾರಿಗೆ ವೆಚ್ಚ ಉಳಿತಾಯವಾಗಲಿದೆ)
ಅಥಾವುಲ್ಲಾ ಜೋಕಟ್ಟೆ (ಅಧ್ಯಕ್ಷರು, ಎಸ್‌ಡಿಪಿಐ ದ.ಕ ಜಿಲ್ಲೆ), ಇಕ್ಬಾಲ್ (ಉಪಾಧ್ಯಕ್ಷರು, ಎಸ್‌ಡಿಪಿಐ ದ.ಕ ಜಿಲ್ಲೆ), ಅನ್ವರ್ ಸಾದತ್ ಬಜತ್ತೂರು (ಜಿಲ್ಲಾ ಕಾರ್ಯದರ್ಶಿ), ಜಮಾಲ್ ಜೋಕಟ್ಟೆ (ಜಿಲ್ಲಾ ಕಾರ್ಯದರ್ಶಿ), ಸೊಹೈಲ್ ಖಾನ್ (ಅಧ್ಯಕ್ಷರು, ಎಸ್‌ಡಿಪಿಐ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ) ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.