ಮಳವೂರು: ಪೊರ್ಕೋಡಿ ಕೆಂಜಾರ್ ಗ್ರಾಮದಲ್ಲಿ ಬ್ಯಾಂಕ್ ಸಾಲ ಮಾಡಿ ಸ್ವ ಉದ್ಯೋಗ ಮಾಡುವ ಮೂಲಕ ಹಾಗೂ ಇತರ ಹಲವಾರು ಕುಟುಂಬಗಳಿಗೆ ಕೆಲಸ ನೀಡಿ ಮಹಿಳಾ ಸ್ವಾಲಂಬಿ ಬದುಕು ಕಟ್ಟಿಕೊಟ್ಟ ಸಂಜೀವಿನಿ ಫುಡ್ಸ್ ಬೇಕರಿಯನ್ನು ಮುಚ್ಚಿಸಿದ್ದು ಮಾತ್ರವಲ್ಲದೆ ವಿನಾಕಾರಣ ತಪ್ಪು ಮಾಹಿತಿ ನೀಡಿದ ಮಳವೂರು ಪಂಚಾಯತ್ನ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನಾ ರವಿ ಒತ್ತಾಯಿಸಿದರು.

ಮಳವೂರು ಗ್ರಾಮ ಪಂಚಾಯತ್ ಮುಂಭಾಗ ಶುಕ್ರವಾರ ಸಂತ್ರಸ್ಥ ಮಹಿಳೆಯರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಾಲಿನ್ಯ ಆಗುತ್ತಿದೆ ಎಂದು ಮಹಿಳೆಯೊಬ್ಬರು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದಾಗ ಇದನ್ನು ಸ್ಥಳೀಯ ಪಂಚಾಯತಿಗೆ ಪರಿಶೀಲನೆ,ಹಿಂಬರಹಕ್ಕಾಗಿ ಅಧಿಕಾರಿಗಳು ಕಳಿಸಿಕೊಟ್ಟಿದ್ದರು. ಆದರೆ ಇಲ್ಲಿನ ಪಿಡಿಒ ವೆಂಕಟರಾಮನ್ ಪ್ರಕಾಶ್ ಪಂಚಾಯತ್ ನ ಸಭೆಯಲ್ಲಿ ಮಂಡಿಸದೆ, ಕನಿಷ್ಠ ಸ್ಥಳ ಪರೀಶಲನೆ ನಡೆಸಿ ಗ್ರಾಮದ ಪಂಚಾಯತ್ ಸದಸ್ಯನ,ಜನರ ಅಭಿಪ್ರಾಯ ಪಡೆಯದೆ ತಾನೇ ನಿಧರ್ಾರ ಕೈಗೊಂಡು ಮಾಲಿನ್ಯದ ಕುಂಟು ನೆಪ ನೀಡಿ ಮುಚ್ಚಿಸಿದ್ದಾರೆ. ಇದು ಪಂಚಾಯತ್ನ ಜನಪ್ರತಿನಿಧಿಗಳಿಗೆ ಗಮನಕ್ಕೂ ತಾರದೆ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ.

ಇದರಿಂದ ಹಲವಾರು ಕುಟುಂಬಗಳು ಇಂದು ಬೀದಿಗೆ ಬಿದ್ದಿವೆ. ಪಂಚಾಯತ್ ಸದಸ್ಯ ನಝೀರ್ ಎಂಬವರು ನಡೆಸುವ ಅಕ್ರಮ ಮರಳು ಸಾಗಾಟಕ್ಕೆ ಮಾಲಕಿ ವಾಣಿ ಆಕ್ಷೇಪ ಎತ್ತಿದ್ದೇ ಬೇಕರಿ ವಿರುದ್ದ ಕ್ರಮಕ್ಕೆ ಕಾರಣವಾಗಿದೆ.

ಮಾಜಿ ಜನಪ್ರತಿನಿಧಿ ರಾಜೇಶ್ ಕೊಂಚಾಡಿ ಅವರು ತಮ್ಮ ಉದ್ಯಮದ ಉದ್ದಾರಕ್ಕಾಗಿ ಬೇಕರಿ ಬಂದ್ ಗೆ ಕುಮ್ಮಕ್ಕು ನೀಡಿದ್ದಾರೆ. ಇತರ ಬೇಕರಿ ವ್ಯಾಪರಸ್ಥರಿಗೂ ತೊಂದರೆ ನೀಡಿದ್ದಾರೆ ಎಂದು ಪ್ರಸನ್ನಾ ರವಿ ಆರೋಪಿಸಿದರಲ್ಲದೆ  ಅಕ್ರಮ ಮರಳು ವ್ಯವಹಾರ ಮಾಡುವವರ ಜತೆ ಶಾಮೀಲಾಗಿ ಸಂಜೀವಿನಿ ಫುಡ್ಸ್ ಬೇಕರಿಯನ್ನು ಮುಚ್ಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ್ ಗೆ ಒತ್ತು ನೀಡಲು ಹೇಳಿದರೆ ಇಲ್ಲಿ ಸ್ವಾವಲಂಬಿ ಮಹಿಳೆಯರನ್ನು ಬೀದಿ ಪಾಲು ಮಾಡಲಾಗುತ್ತಿದೆ. ತಕ್ಷಣ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಧ್ಯ ಪ್ರವೇಶಿಸಿ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಬೇಕು. ಪಿಡಿಒ ಅವರನ್ನು ಅಮಾನತಿನಲ್ಲಿಟ್ಟು ಅವರ ವಿರುದ್ದ ತನಿಖೆಗೆ ಆದೇಶಿಸ ಬೇಕು ಎಂದು ಒತ್ತಾಯಿಸಿದರು.

ಪೊರ್ಕೋಡಿ ಗ್ರಾಮಸ್ಥರಾದ ಅರುಣ್ ಶೆಟ್ಟಿ ಮಾತನಾಡಿ ಯಾವುದೇ ಕಾರಣವಿಲ್ಲದೆ ಕೆಲವರ ಸ್ವಾರ್ಥಕ್ಕಾಗಿ ಬೇಕರಿ ಬಾಗಿಲು ಮುಚ್ಚಿಸಿದ್ದಾರೆ. ಪಂಚಾಯತ್ ಗಮನಕ್ಕೂ ತಾರದೆ ಈ ಘಟನೆ ನಡೆದಿದೆ.ಪಂಚಾಯತ್ ನಿರ್ಣಯವನ್ನೂ ಮಾಡಿಲ್ಲ. ಇದೀಗ ಮಹಿಳೆಯರು ಉದ್ಯೋಗವಿಲ್ಲದೆ ಸಂಸಾರ ನಡೆಸಲು ಕಷ್ಟ ಪಡುವಂತಾಗಿದೆ. ಘಟನೆಯನ್ನು ಶಾಸಕರ ಗಮನಕ್ಕೆ ತರಲಾಗಿದ್ದು ಪಿಡಿಒ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದೇವೆ ಎಂದರು.

ಸ್ಥಳದಲ್ಲಿದ್ದ ಪಿಡಿಒ ಅವರಿಗೆ ಮುತ್ತಿಗೆ ಹಾಕಿ ಸಂತ್ರಸ್ಥ ಮಹಿಳೆಯರು ಆಕ್ರೋಶ ವ್ಯಕ್ತ ಪಡಿಸಿದರು. ಸಂಜೀವಿನಿ ಫುಡ್ಸ್ನ ಮಾಲಕಿ ವಾಣಿ, ಕವಿತಾ, ಉಷಾ,ಶಾರದಾ,ರಶ್ಮಿ,ಕವಿತ,ಮಾಲತಿ,ಆಶಾ,ಹೇಮಾ,ಪಾರ್ವತಿ,ಕಿರಣ್,ರವಿ,ಉಮೇಶ್,ಉಮೇಶ್ ಎಕ್ಕಾರ್,ದೀಕ್ಷಿತ್,ನಾರಾಯಣ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.