ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯುತ್ತ), ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ “ಉದ್ಯಮಶೀಲತೆ ಮತ್ತು ನಾವೀನ್ಯತೆಯ ಅನುಭವಾತ್ಮಕ ಸಮೂಹ ಚರ್ಚೆ” ಪ್ರಾಯೋಗಿಕ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಯಾದ ಜೇಸಿ ಕೃಷ್ಣಮೋಹನ್ ಅವರು ಮೊದಲಿಗೆ ಪದವಿ ಶಿಕ್ಷಣದ ನಂತರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದುವರೆಯಲು ಅಳವಡಿಸಿಕೊಳ್ಳಬೇಕಾದ ಜೀವನ ಮೌಲ್ಯಗಳು ಹಾಗೂ ಉದ್ಯೋಗವಕಾಶಗಳ ಬಗ್ಗೆ ಅರಿತು ಜ್ಞಾನ ಸಂಪಾದಿಸಲು ಇರುವ ಮೂಲಗಳ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರು, “ಗುಂಪು ಚರ್ಚೆಯು ಇಂದಿನ ವೃತ್ತಿಪರ ಕ್ಷೇತ್ರದಲ್ಲಿ ಅಪಾರ ಮಹತ್ವವನ್ನು ಹೊಂದಿರುವ ಕೌಶಲ್ಯ. ಕಾರ್ಪೊರೇಟರ್ ವಲಯದಲ್ಲಿ ಪರಿಣಾಮಕಾರಿಯಾಗಿ ಸಂವಹನ ನಡೆಸುವ, ವಿಮರ್ಶಾತ್ಮಕವಾಗಿ ಯೋಚಿಸುವ ಮತ್ತು ಪರಿಣಾಮಕಾರಿಯಾಗಿ ಸಹಕರಿಸುವ ಸಾಮರ್ಥ್ಯವು ಯಶಸ್ಸಿನ ಪ್ರಮುಖ ಹಾಗೂ ನಿರ್ಣಾಯಕವಾದ ಅಂಶವಾಗಿದೆ. ವಿದ್ಯಾರ್ಥಿಗಳಿಗೆ ಅವರ ಆಲೋಚನೆಗಳನ್ನು ಆತ್ಮವಿಶ್ವಾಸದಿಂದ ಪ್ರಸ್ತುತಪಡಿಸಲು ಮತ್ತು ಸಮರ್ಥಿಸಿಕೊಳ್ಳಲು ಸಂವಹನವು ಮಹತ್ವದ ಪಾತ್ರ ವಹಿಸುತ್ತಿದೆ. ಈ ರೀತಿಯ ಕಾರ್ಯಕ್ರಮಗಳು ನಿಮಗೆ ಭದ್ರ ತಳಪಾಯವನ್ನು ಹಾಕಿ ಉದ್ಯೋಗ ಕ್ಷೇತ್ರದ ಬೇಡಿಕೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತವೆ.
ಅವರು ಮುಂದುವರಿದು, "ಕಳೆದ ಎರಡು ವರ್ಷಗಳಿಂದ ವ್ಯವಹಾರ ಆಡಳಿತ ವಿಭಾಗವು ಐಸಿಎಸ್ಐನ ಸಹಯೋಗದಿಂದ ಬಿಬಿಎ ವಿದ್ಯಾರ್ಥಿಗಳಿಗೆ ಕಂಪನಿ ಸೆಕ್ರೆಟರಿ ಕೋರ್ಸ್ಗೆ ಸೇರ್ಪಡೆಗೊಳ್ಳಲು ತರಬೇತಿ ನೀಡುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ನಾವು ಸಂತಸದ ಸಂಗತಿಯಾಗಿ ಬಿಬಿಎ ಇನ ಬ್ಯುಸಿನೆಸ್ ಅನಾಲಿಟಿಕ್ಸ್ ಕಾರ್ಯಕ್ರಮವನ್ನು ಪರಿಚಯಿಸುತ್ತಿದ್ದೇವೆ" ಎಂಬ ಸುದ್ದಿಯನ್ನು ಹಂಚಿಕೊಂಡರು.
ಮಹಿಮ, ತೃತೀಯ ಬಿಬಿಎ ಮತ್ತು ತಂಡದಿಂದ ಪ್ರಾರ್ಥನೆ ನೆರವೇರಿತು. ಅಂತಿಮ ಬಿಬಿಎ ವಿದ್ಯಾರ್ಥಿ ಮನೋಜ್ ಎನ್ ಸ್ವಾಗತಿಸಿದರು,, ಪ್ರಥಮ ಬಿಬಿಎ ವಿದ್ಯಾರ್ಥಿ ಲಿಖಿತ್, ವಂದಿಸಿದರು, ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಅನಘ ಎಸ್ ರೈ ಕಾರ್ಯಕ್ರಮ ನಿರೂಪಿಸಿದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಡಾ| ರಾಧಾಕೃಷ್ಣ ಗೌಡ ಹಾಗೂ ನಿರ್ವಹಣಾ ಸಂಘದ ಸಂಚಾಲಕಿಯಾದ ಪುಷ್ಪ ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಬಿಎ ವಿಭಾಗದ ಉಪನ್ಯಾಸಕಾರ ಪ್ರಶಾಂತ್ ರೈ ಹಾಗೂ ಅಭಿಷೇಕ್ ಸುವರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದ ಜೇಸಿ ಕೃಷ್ಣಮೋಹನ್ ಅವರ ಪ್ರಾಯೋಗಿಕ ತರಬೇತಿ ಅಧಿವೇಶನದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಅನುಭವದ ಮೂಲಕ ಕಲಿಯುವ ಅವಕಾಶವನ್ನು ಪಡೆದರು. ಗುಂಪು ಚರ್ಚೆಯ ಪ್ರಾಥಮಿಕ ಸಿದ್ಧಾಂತಗಳನ್ನು ವಿವರಿಸಿದ ಬಳಿಕ, ಅವರು ವಿದ್ಯಾರ್ಥಿಗಳನ್ನು ವಿವಿಧ ತಂಡಗಳಾಗಿ ವಿಂಗಡಿಸಿ ಪ್ರಾಯೋಗಿಕ ಚಟುವಟಿಕೆಗೆ ಮುನ್ನಡೆಸಿದರು.
ಪ್ರತಿ ತಂಡಕ್ಕೆ ನಾವುಿನ್ಯತೆ ಮತ್ತು ಉದ್ಯಮಶೀಲತೆ ಸಂಬಂಧಿತ ಒಂದು ಪ್ರಸ್ತುತ ಸಮಸ್ಯೆ ಅಥವಾ ಯೋಚನಾ ಪ್ರೇರಿತ ವಿಷಯ ನೀಡಲಾಯಿತು. ಸಮಸ್ಯಾ ಪರಿಹಾರ, ನಾವೀನ್ಯತೆ, ತಂಡದ ಸಹಕಾರ, ಸಮರ್ಥ ವಾಗ್ಮಿತ್ವ ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ನಡೆಸಲು ಪ್ರೇರೇಪಿಸಲಾಯಿತು.
ವಿದ್ಯಾರ್ಥಿಗಳು ಆಲೋಚನೆ, ತರ್ಕ ಮತ್ತು ಉಪಪತ್ತಿಗಳನ್ನು ಬಳಸಿಕೊಂಡು ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಿದರು. ಕೆಲವು ತಂಡಗಳು ಚಿಂತನೆಗೆ ಧಕ್ಕೆ ನೀಡುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಹೊಸ ತಂತ್ರಗಳನ್ನು ನಿರೂಪಿಸಿದರೆ, ಇನ್ನೂ ಕೆಲವು ತಂಡಗಳು ವಿವಾದಾತ್ಮಕ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ಒದಗಿಸುವ ಮೂಲಕ ಸಮರ್ಥ ಪ್ರತಿಭೆ ಪ್ರದರ್ಶಿಸಿದವು.