ಇಪ್ಪತ್ತೆಂಟು ವರುಷಗಳ ಹಿಂದೆ ತಮ್ಮ ಅನೈತಿಕ ಸಂಬಂಧ ಮುಚ್ಚಿ ಹಾಕಲು ಸಿಸ್ಟರ್ ಅಭಯಾರನ್ನು ಕೊಂದೆಸೆದ ಫಾದರ್ ಥಾಮಸ್ ಕೊಟ್ಟೂರು ಮತ್ತು ಸಿಸ್ಟರ್ ಸೆಫಿಯವರಿಗೆ ತಿರುವನಂತಪುರದಲ್ಲಿನ ವಿಶೇಷ  ಸಿಬಿಐ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಡಿಸೆಂಬರ್ 23ರಂದು ವಿಶೇಷ ಕೋರ್ಟ್ ಅವರನ್ನು ತಪ್ಪಿತಸ್ಥರು ಎಂದು ಘೋಷಿಸಿ ಮರುದಿನ ಶಿಕ್ಷೆಯ ಪ್ರಮಾಣವನ್ನು ಹೇಳಿದೆ. ಒಬ್ಬರು ಜೀವಾವಧಿ ಶಿಕ್ಷೆಯೊಂದಿಗೆ ತಲಾ 5 ಲಕ್ಷ ರೂಪಾಯಿ ದಂಡ ಹಾಗೂ ಸಾಕ್ಷ್ಯ ನಾಶಕ್ಕಾಗಿ ಹೆಚ್ಚುವರಿ  7 ವರ್ಷಗಳ ಜೈಲು ಶಿಕ್ಷೆ ಯನ್ನೂ ಕೊಟ್ಟಿದೆ.

ಮಾರ್ಚ್ 27, 1992 ರಲ್ಲಿ ಸಿಸ್ಟರ್ ಅಭಯಾರ ತಲೆಗೆ ಭಾರದ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಇವರು ದೇಹವನ್ನು ಬಾವಿಗೆ ಎಸೆದಿದ್ದರು. ಪ್ರಥಮ ಮಾಹಿತಿ ವರದಿಯಲ್ಲೂ ಈ ಆರೋಪ ಹೊರಿಸಲಾಗಿತ್ತು. ಅದೀಗ‌ ಸಾಬೀತಾಗಿ ಶಿಕ್ಷೆ ‌ಪ್ರಕಟಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಕೊಲೆಯ 302 ಮತ್ತು ‌ಸಾಕ್ಷ್ಯ‌ ನಾಶದ ಸೆಕ್ಷನ್ 201ರಂತೆ ಮೊಕದ್ದಮೆ ದಾಖಲಾಗಿದ್ದು 28 ವರ್ಷಗಳ ಬಳಿಕ ತೀರ್ಪು ಹೊರಬಿದ್ದಿದೆ.

ಕೊಟ್ಟಾಯಂ ಬಳಿಯ ಸೇಂಟ್ ಪಿಯೂಸ್ ಕಾನ್ವೆಂಟಿನ ಬಾವಿಯಲ್ಲಿ 19 ವರ್ಷದ ಸಿಸ್ಟರ್ ಅಭಯಾರ ಮೃತ ದೇಹ ಪತ್ತೆ ಆಗಿತ್ತು. ದೂರು ದಾಖಲಾದ ಬೆನ್ನಿಗೆ ಕೆಲ ದಿನ ಫಾದರ್ ಥಾಮಸ್ ಕೊಟ್ಟೂರು ಮತ್ತು ನನ್ ಸೆಫಿ‌ ಕಾಣೆಯಾಗಿದ್ದುದು ಕೂಡ ಅವರ ಮೇಲಿನ ಅನುಮಾನವನ್ನು ಬಲಪಡಿಸಿತ್ತು.

ಕೊಟ್ಟಾಯಂ ನ ಬಿಸಿಎಂ ಕಾಲೇಜಿನಲ್ಲಿ ಶಿಕ್ಷಕನಾಗಿಯೂ ಇದ್ದ ಫಾದರ್ ಥಾಮಸ್ ಕಾಲೇಜಿನ ಹಾಸ್ಟೆಲ್ ಮೇಲ್ವಿಚಾರಕಿ ನನ್ ಸೆಫಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಹಾಸ್ಟೆಲ್ ವಾಸಿ ಅಭಯಾಗೆ ಈ ವಿಚಾರ ತಿಳಿದದ್ದೇ ಕೊಲೆಗೆ ಕಾರಣವಾಗಿತ್ತು.

ಸ್ಥಳೀಯ ವಿಚಾರಣೆ, ತನಿಖಾ ಸಮಿತಿಯು ನಡೆ ಮುಗಿದು, ಜನರ ಒತ್ತಾಯದ ಮೇರೆಗೆ 1993ರಲ್ಲಿ ಈ ಕೇಸನ್ನು ಸಿಬಿಐಗೆ  ಒಪ್ಪಿಸಲಾಗಿತ್ತು. ಆದರೆ ಸರಿಯಾದ ಸಾಕ್ಷ್ಯಾಧಾರ ಇಲ್ಲದೆ ಆರೋಪಿಗಳು ಇಬ್ಬರೂ ಜಾಮೀನಿನ ಮೇಲೆ ಹೊರಗೆ ಓಡಾಡಿಕೊಂಡಿದ್ದರು.

ಕೊಲೆ ನಡೆದಾಗ ಅಭಯಾ ಪದವಿಪೂರ್ವ ವಿದ್ಯಾರ್ಥಿ ಆಗಿದ್ದು ಕ್ಯಾಥೊಲಿಕ್ ಚರ್ಚ್ ನಡೆಸುವ ಪಿಯೂಸ್ ಟೆನ್ತ್ ಕಾನ್ವೆಂಟ್ ಹಾಸ್ಟೆಲ್ ಗೆ ಪ್ರವೇಶ ಪಡೆದಿದ್ದಳು.

ಕೊನೆಗೂ ಸಾಕ್ಷ್ಯ ದೊರಕಿದ್ದು ಅಡಕ್ಕ ರಾಜು ಎಂಬ ಕಳ್ಳನ ಮೂಲಕ. ಕಳ್ಳತನದ ಕಾರಣ ಈತನೂ ಜೈಲಿಗೆ ಓಡಾಡಿದವನು. ಕೊಲೆಯಾದ ರಾತ್ರಿ ಥಾಮಸ್ ಮತ್ತು ‌ಸೆಫಿ ನಡು ರಾತ್ರಿಯಲ್ಲಿ ಹಾಸ್ಟೆಲಿಗೆ ನುಗ್ಗಿದ್ದನ್ನು ಈ ಅಡಕ್ಕ ರಾಜು ಕಂಡಿದ್ದುದರ ಸಾಕ್ಷ್ಯವು ಆರೋಪ ಸಾಬೀತು ಮಾಡಲು ಸಾಕಾಯಿತು.

ಕ್ನಾನಯ ಕ್ಯಾಥೊಲಿಕ್ ಚರ್ಚ್ ತೀರ್ಪಿನ ಬಗೆಗೆ ಆಘಾತ ‌ವ್ಯಕ್ತ ಪಡಿಸಿದ್ದು. ನಮ್ಮ ಫಾದರ್ ಮತ್ತು ‌ನನ್ ತಮ್ಮ ಮುಗ್ಧತೆ‌ ಸಾಬೀತು ಮಾಡಲು ಮೇಲಿನ ‌ಕೋರ್ಟಿಗೆ ಹೋಗಲು ಅವಕಾಶ ಇದೆ ಎಂಬ ಸಮಾಧಾನ ವ್ಯಕ್ತ ಪಡಿಸಿದೆ. ಕೊಟ್ಟಾಯಂ ಧರ್ಮ ಪ್ರಾಂತ್ಯದ ಅರ್ಚ್ ಬಿಷಪ್ ಅವರು ಚರ್ಚ್ ಮೇಲೆ ಇದು ವ್ಯತಿರಿಕ್ತ ಬೆಳವಣಿಗೆ ಆಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಶಿಕ್ಷಿತರ‌ ಮೇಲಿನ ಆರೋಪಗಳು ನಂಬಲರ್ಹವಲ್ಲ ಎಂಬುದು ಈ ಚರ್ಚ್ ವಲಯದ ಹೇಳಿಕೆಯಾಗಿದೆ.