ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ಪುರಸಭೆಯ ವಿಶೇಷ ಸಭೆ ನವೆಂಬರ್ 19ರಂದು ನಡೆಯಿತು. ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದು ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಸಭೆಯನ್ನು ನಡೆಸಿಕೊಟ್ಟರು.
ಶಾಸಕರು ಸುಮಾರು 77 ಕೋಟಿ ರೂಪಾಯಿ ಕೇಂದ್ರ ಸರ್ಕಾರದ ಕುಡಿಯುವ ನೀರು ಯೋಜನೆಯನ್ನು ಮೂಡುಬಿದಿರೆಯಲ್ಲಿ ಅನುಷ್ಠಾನಗೊಳಿಸುತ್ತಿರುವದು ಸ್ತುತ್ಯಾರ್ಹ ಎಂದು ಸಭೆ ಹರ್ಷ ವ್ಯಕ್ತಪಡಿಸಿತು. ಆದರೆ ಉತ್ತಮ ಸ್ಥಿತಿಯಲ್ಲಿರುವ ಪೈಪುಗಳನ್ನು, ಟ್ಯಾಂಕಿಗಳನ್ನು ಕಾಪಾಡಿಕೊಂಡು ಯೋಜನೆ ಮುಂದುವರೆಯಲಿ. ಇಡೀ ಮೂಡುಬಿದಿರೆಗೆ ಎತ್ತದ ಪ್ರದೇಶವಾದ ಕಡಲಗೆರೆಯ ಸಮೀಪ ಹೆಚ್ಚು ಸಾಮರ್ಥ್ಯದ ಟ್ಯಾಂಕಿಯನ್ನು ನಿರ್ಮಿಸಿ ಇಡೀ ಮೂಡುಬಿದಿರೆಗೆ ನೀರಿನ ಸರಬರಾಜು ಮಾಡಲು ಸಾಧ್ಯ ಇದೆ ಎಂದು ಸದಸ್ಯರುಗಳಾದ ಪಿಕೆ ತೋಮಸ್, ಕೊರಗಪ್ಪ, ಪುರಂದರ ದೇವಾಡಿಗ, ಮಮತಾ, ರೂಪಾ ಶೆಟ್ಟಿ, ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಪ್ರಭು ಹಸಿದವರಿಗೆ ಮೊದಲು ಅನ್ನ ಕೊಡಿ ಎಂದಾಗ ಸಭೆಯಲ್ಲಿ ನಗು ತೇಲಿತು.
ಹಿಂದಿನ ಎರಡು ಮೂರು ಸಂದರ್ಭಗಳಲ್ಲಿ ಅರೆಬರೆ ಕಾಮಗಾರಿಯನ್ನು ಮಾಡಿದ ನೀರು ಸರಬರಾಜು ಮಂಡಳಿಯನ್ನು ನಂಬಲು ಸಾಧ್ಯವಿಲ್ಲ. ಈಗಾಗಲೇ ಎರಡು ಮೂರು ಕಡೆ ಪೈಪುಗಳು ಒಡೆದು ಹೋಗಿದ್ದು ಅದನ್ನು ರಿಪೇರಿ ಮಾಡಿರುವುದಿಲ್ಲ ಎಂದು ಸಭೆಯ ಗಮನಕ್ಕೆ ಸುರೇಶ್ ಕೋಟ್ಯಾನ್ ತಂದಾಗ ಅವೆಲ್ಲವನ್ನು ತಕ್ಷಣ ಸರಿಪಡಿಸಬೇಕೆಂದು ಶಾಸಕರು ನಿರ್ದೇಶಸಿದರು. ಅಲ್ಲದೆ ಮುಂದಿನ ಎಲ್ಲ ಕಾಮಗಾರಿಯೂ ಕೂಡ ಸಮರ್ಪಕವಾಗಿ ನಡೆಯುವ ಮೊದಲು ಹಿರಿಯ ಸದಸ್ಯರುಗಳನ್ನು ಕರೆದು ಮತ್ತೊಮ್ಮೆ ಯೋಜನೆಯ ಬಗ್ಗೆ ಚರ್ಚಿಸಿ ಮುಂದಿನ ಸಭೆಯಲ್ಲಿ ಪ್ರಸ್ತುತಪಡಿಸಬೇಕೆಂದು ಇಂಜಿನಿಯರ್ಗಳಾದ ಜಯಕುಮಾರ್, ಅಜಯ್ ಕುಮಾರ್, ರಕ್ಷಿತ್ ರಾವ್, ಹಾಗೂ ಸೋಮಶೇಖರ ರೆಡ್ಡಿ ಅವರುಗಳಿಗೆ ನಿರ್ದೇಶಿಸಿದರು.
ಪ್ರಸಭ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಇರುವ ಎಲ್ಲಾ ಅನಧಿಕೃತ ಮೀನು ಮಾರಾಟ ಸಾಲುಗಳನ್ನು ತೆರವುಗೊಳಿಸಿ ಸ್ವರಾಜ್ಯ ಮೈದಾನದ ಮೀನು ಮಾರಾಟದ ಕೇಂದ್ರ ಪ್ರದೇಶದಲ್ಲಿಯೇ ನೆಲೆಗೊಳ್ಳುವಂತೆ ಮಾಡಬೇಕೆಂದು ಸದಸ್ಯರುಗಳಾದ ಅಬ್ದುಲ್ ಕರೀಂ, ಪುರಂದರ ದೇವಾಡಿಗ, ಕೊರಗಪ್ಪ, ಸುರೇಶ್ ಪ್ರಭು ಏರು ಧ್ವನಿಯಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಮಾಜಿ ಉಪಾಧ್ಯಕ್ಷ ಸುರೇಶ್ ಕೋಟ್ಯಾನ್ 1995ರಲ್ಲಿ ಸರಕಾರವು ವ್ಯಾಪಾರಕ್ಕೆ ಅನುಮತಿ ನೀಡುವ ಮೊದಲು ಹಲವಾರು ಅಂಶಗಳನ್ನು ತಿಳಿಸಿದೆ ಅವುಗಳನ್ನು ಪರಾಮರ್ಶಿಸುವಂತೆ ವಿನಂತಿಸಿದರು.
ಸದಸ್ಯರ ಕೆಲವು ಮಾತಿಗೆ ಬೇಸರಗೊಂಡ ಶಾಸಕರು ಒಂದು ಹಂತದಲ್ಲಿ ಮೂಡುಬಿದಿರೆ ನನ್ನ ಮನೆ. ನಾನು ಯಾವುದೇ ಪಕ್ಷ ಭೇದ ಮಾಡುತ್ತಿಲ್ಲ. ಎಲ್ಲರಿಗೂ ಉಪಕರವಾಗುವ ನೀರು ಸರಬರಾಜು ಯೋಜನೆ ಅನುಷ್ಠಾನಗೊಂಡಲಿ ಎಲ್ಲರಿಗೂ ಲಾಭವಾಗಲಿದೆ. ಆದಷ್ಟು ಶೀಘ್ರ ಹಿರಿಯ ಸದಸ್ಯರನ್ನು ಕರೆದು ಪುನಃ ಚರ್ಚಿಸಿ ಮುಂದಿನ ಸಭೆಯಲ್ಲಿ ಯೋಜನೆಯ ಅನುಷ್ಠಾನದ ವಿವರಗಳನ್ನು ನೀಡಲಾಗುವುದು ಎಂದು ಸಮಜಾಯಿಷಿಕೆ ಕೊಟ್ಟರು.
ನಿಯಮಕ್ಕೆ ವಿರುದ್ಧವಾಗಿ, ವಾಹನಗಳಿಗೆ ತಿರುಗುವಲ್ಲಿ ಹಟ್ಟವಾಗಿರುವ ಎಲ್ಲಾ ಫಲಕಗಳನ್ನು ನಿವಾರಿಸಲು ನಿರ್ಣಯಿಸಲಾಯಿತು.
ಹೈಮಾಸ್ಟ್ ದೀಪಗಳನ್ನು ರಿಪೇರಿ ಮಾಡಿಸದ ಕಂಪೆನಿಯನ್ನು ಬ್ಲ್ಯಾಕ್ ಲೀಸ್ಟಿಗೆ ಸೇರಿಸಿ ಹೊಸದಾಗಿ ಶೀಘ್ರ ರಿಪೇರಿ ಮಾಡಿಸಲು ಮುಖ್ಯಾಧಿಕಾರಿಗಳಲ್ಲಿ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ,ಜೋಸ್ಸಿ ಮಿನೇಜಸ್, ರಾಜೇಶ್ ಶೆಟ್ಟಿ ಕೇಳಿಕೊಂಡರು.
ಮುಖ್ಯ ರಸ್ತೆಯ ರಿಪೇರಿಯ ಬಗ್ಗೆ ಪ್ರಶ್ನೆ ಬಂದಾಗ ಮುಂದಿನ ಸಭೆಗೆ ಲೋಕೋಪಯೋಗಿ ಇಲಾಖೆ ಹಾಗೂ ಆರೋಗ್ಯ ಅಧಿಕಾರಿಗಳನ್ನು ಕರೆಸಬೇಕೆಂದು ಸದಸ್ಯರು ಆಗ್ರಹಿಸಿದರು. ಪಿಂಗಾರ ಹಾಗೂ ಆರ್ ಬಿ ನ್ಯೂಸ್ ಮಾಧ್ಯಮದಲ್ಲಿ ವೈರಲ್ ಆದ ಬಸ್ ನಿಲ್ದಾಣದ ಅವ್ಯವಸ್ಥೆಯ ಬಗ್ಗೆ ಸದಸ್ಯ ಜೋಶಿ ಮಿನೇಜಸ್, ಪುರಂದರ ದೇವಾಡಿಗ ಗಮನ ಸೆಳೆದಾಗ ಉತ್ತರಿಸಿದ ಉಪಾಧ್ಯಕ್ಷ ಹಾಗೂ ಮುಖ್ಯಾಧಿಕಾರಿಗಳು ಶೀಘ್ರದಲ್ಲೇ ಬಸ್ಸು ನಿಲ್ದಾಣವನ್ನು ಸಮರ್ಪಕ ಗೊಳಿಸಿ, ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳಿಗೆ ನಿಗದಿತ ಪ್ರದೇಶಗಳನ್ನು ನಿರ್ಧರಿಸಿ, ಪೊಲೀಸ್ ಇಲಾಖೆಗೂ ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯ ಪ್ರಾರಂಭದಲ್ಲಿ ರಸ್ತೆ ದುರ್ಘಟನೆಯಲ್ಲಿ ತೀರಿಕೊಂಡ ಪುರಸಭಾ ಕಾರ್ಮಿಕ ರವೀಂದ್ರ ರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.