ವರದಿ / ರೋನ್ಸ್ ಬಂಟ್ವಾಳ್

ಮುಂಬಯಿ: ಸಮಾಜ ಸೇವೆಯೊಂದಿಗೆ ಹೋಟೆಲ್ ಉದ್ಯಮದಲ್ಲಿ ಸ್ವಂತಿಕೆಯ ಪ್ರತಿಷ್ಠೆ ಹೊಂದಿರುವ ಶಿವ ಸಾಗರ್‍ಫುಡ್ ಆ್ಯಂಡ್ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಇವರ ನಿರ್ದೇಶಕ್ವದ ಶಿವ ಸಾಗರ್‍ಫುಡ್ ಆತಿಥ್ಯ ಸಂಸ್ಥೆಗೆ ಟೈಮ್ಸ್ ಬ್ಲ್ಯಾಕ್  ಪ್ರಸ್ತುತಿಯ 2025 ಸಾಲಿನ `ಟೈಮ್ಸ್ ಫುಡ್ ಆ್ಯಂಡ್ ನೈಟ್‍ಲೈಫ್ ಅವಾರ್ಡ್ `ವರ್ಷದ ರೆಸ್ಟೋರೆಂಟರ್' ಪ್ರಶಸ್ತಿ ಪ್ರದಾನಿಸಿ ಗೌರವಿಸಿದೆ.  

ಕಳೆದ ಶನಿವಾರ (ಮಾ.29) ಅಂಧೇರಿ ಪೂರ್ವದ ಐಟಿಸಿ ಮರಾಠ ಹೋಟೆಲ್ ಸಭಾಗೃಹದಲ್ಲಿ ನಡೆದ ಟೈಮ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಶಿವ ಸಾಗರ್‍ಫುಡ್ ಆ್ಯಂಡ್ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ಎನ್.ಟಿ ಪೂಜಾರಿ ಮತ್ತು ನಿರ್ದೇಶಕಿ ಯಶೋದಾ ಪೂಜಾರಿ ಇವರಿಗೆ ಟೈಂಸ್ ಬಳಗದ ಮುಖ್ಯಸ್ಥರು ಪ್ರಶಸ್ತಿ ಫಲಕವನ್ನು ಪ್ರದಾನಿಸಿ ಅಭಿನಂದಿಸಿ ಶುಭಾರೈಸಿದರು. 

ಮನೆ ವಾತಾವರಣದ ರುಚಿಕರ ತಿನಿಸು- ಖಾನಾವಳಿಗಳಿಗೆ ಹೆಸರುವಾಸಿಯಾದ ಶಿವ ಸಾಗರ್‍ಫುಡ್ಸ್ ಆತಿಥ್ಯ ಸೇವಾ ನಿರತ ಉಪಹಾರಗೃಹಗಳು ಬಹುಶಃ ರಾಷ್ಟ್ರದದ್ಯಾಂತ ಮನೆ ಮಾತಾಗಿರುವ ಭೋಜನಾಲಯಗಳಾಗಿ ವೆ. ಪ್ರವರ್ತನ ಶೀಲತೆ, ಸೇವಾತತ್ಪರತೆ, ರುಚಿಕರ ಮತ್ತು ರಸವತ್ತಾದ ಖಾನಾವಳಿ, ತಿನಿಸುಗಳೇ ಇಲ್ಲಿನ ವಿಶೇಷ. ಇಲ್ಲಿ ಊರಿನ ವಾತಾವರಣ ಸೃಷ್ಟಿಸಿ ಹಳ್ಳಿ ಸಂಪ್ರದಾಯದ ಭೋಜನಗಳೊಂದಿಗೆ ಅಂತರಾಷ್ಟ್ರೀಯ ಶೈಲಿಯಲ್ಲಿ ಸೇವೆ ನಿರ್ವಹಿಸುತ್ತಿರುವುದು ವಿಶೇಷವಾದದ್ದು. ವಿವಿಧ ಬಗೆಯ ಸವಿಯಾದ ಖಾದ್ಯಗಳ ಸ್ವಾದಿಷ್ಟ ರುಚಿಯೇ ಇಲ್ಲಿ ಗ್ರಾಹಕರನ್ನು ಆಕರ್ಷಿಸುವ ಕೇಂದ್ರಗಳಾಗಿವೆ. ಗ್ರಾಹಕರ ಆಯ್ಕೆಯ ಆಯ್ದ ನಾನಾ ಬಗೆಯ ಪದಾರ್ಥಗಳ ಘಮಘಮ ಪರಿಮಳ ಉಣ್ಣುವವರ ಪಾಲಿಗೆ ಆಹ್ಲಾದಕರವಾದ ರುಚಿಯನ್ನು ಜೊತೆಗೂಡಿಸು ವಂತೆ ಮಾಡುತ್ತಿರುವುದೇ ಇಲ್ಲಿನ ಮತ್ತೊಂದು ವೈಶಿಷ್ಟ್ಯ 

ಹವಾನಿಯಂತ್ರಿತ ಆತ್ಯಾಧುನಿಕ ಸೌಲಭ್ಯಗಳ ಆಸನ ವ್ಯವಸ್ಥೆಯುಳ್ಳ ಅಚ್ಚುಕಟ್ಟುತನದ ಈ ರೆಸ್ಟೋರೆಂಟ್‍ಗಳಲ್ಲಿ ಸ್ವಂತ ಮನೆಯ ವಾತಾವರಣದ ಮತ್ತು ಮನೆರುಚಿಯ ಜೊತೆಗೆ ರಾಷ್ಟ್ರಿಯ ಶೈಲಿಯ ಉಟೋಪಚಾರ, ತಿಂಡಿ ತಿನಿಸುಗಳ  ಮೆನು ಇಲ್ಲಿನ ವಿಶೇಷತೆಗಳು. ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರಿಕೆಟರ್ಸ್, ಹಾಲಿವುಡ್, ಬಾಲಿವುಡ್ ಸೇರಿದಂತೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ, ರಾಜ್ಯ ಮಂತ್ರಿಗಳಿಂದ ರಾಜ್ಯ, ರಾಷ್ಟ್ರೀಯ ರಾಜಕಾರಣಿಗಳಿಗೂ ಶಿವ ಸಾಗರ್‍ಫುಡ್ಸ್ ಅಂದರೆ ಬಲುಇಷ್ಟ. ಸದ್ಯ ಮುಂಬಯಿ, ಪುಣೆ ಹಾಗೂ ಉಪನಗರಗಳಲ್ಲಿ ಶಿವಸಾಗರ್ ವೆಜ್ ರೆಸ್ಟೋರೆಂಟ್, ಬಟರ್‍ಫ್ಲೈ, ಕೈಮಾ, ದಿ ಬಿಗ್ ಸ್ಮಾಲ್ ಕೆಫೆ ಆ್ಯಂಡ್ ಬಾರ್ ಇತ್ಯಾದಿ ಅತ್ಯಾಧುನಿಕ ಭೋಜನಾಲಯ, ಅಂತರಾಷ್ಟ್ರೀಯ ಮಟ್ಟದ ಉಪಹಾರಗೃಹಗಳನ್ನು ಶಿವ ಸಾಗರ್‍ಫುಡ್ ಆ್ಯಂಡ್ ರೆಸಾರ್ಟ್ ಪ್ರೈವೇಟ್ ಲಿಮಿಟೆಡ್ ನಡೆಸುತ್ತಿದೆ. ಎನ್.ಟಿ ಪೂಜಾರಿ ಪ್ರವರ್ತಕತ್ವದಲ್ಲಿ ಯಶೋದಾ ಎನ್.ಪೂಜಾರಿ (ಪತ್ನಿ) ಮತ್ತು ನಿಕಿತಾ ಎನ್.ಪೂಜಾರಿ ಮತ್ತು ಅಂಕಿತಾ ಎನ್.ಪೂಜಾರಿ (ಸುಪುತ್ರಿಯರು) ನಿರ್ದೇಶಕಿಯರುಗಳಾಗಿ ಶ್ರಮಿಸುತ್ತಿದ್ದಾರೆ.

ಎನ್.ಟಿ ಪೂಜಾರಿ ಇವರು ಹಣಕಾಸು ಕ್ಷೇತ್ರದಲ್ಲೂ ಸೇವಾನಿರತವಾಗಿದ್ದು ಈ ಹಿಂದೆ ಭಾರತ್ ಬ್ಯಾಂಕ್‍ನ ನಿರ್ದೇಶಕರಾಗಿದ್ದರು. ಶೈಕ್ಷಣಿಕ, ಸಾಮಾಜಿಕ ಸೇವೆಯಲ್ಲೂ ಸೇವಾನಿರತ ಸಹೃದಯಿತ್ವದ ಸಮಾಜ ಸೇವಕ. ಸದ್ಯ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಇದರ ಕಾರ್ಯಾಧ್ಯಕ್ಷ ಆಗಿ ಸೇವಾ ನಿರತರಾಗಿದ್ದಾರೆ.