ದೇಶದ ಸ್ವಾತಂತ್ರ್ಯ ಲಭಿಸಿ 77 ವರ್ಷಗಳು ಕಳೆದರೂ ಕೂಡ ದಲಿತರ ಬದುಕು ಉತ್ತಮಗೊಂಡಿಲ್ಲ. ಜಾತಿ ವ್ಯವಸ್ಥೆ ಅಸ್ಪ್ರಶ್ಯತೆಯಿಂದ ನಲುಗಿಹೋಗಿರುವ ದಲಿತ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸಂಘಟಿತ ಹೋರಾಟದ ಅವಶ್ಯಕತೆ ಇದೆ. ಆಳುವ ವರ್ಗಗಳ ಜನವಿರೋಧಿ ನೀತಿಗಳಿಂದ ದೇಶದ ಆರ್ಥಿಕತೆ ವಿನಾಶದ ಅಂಚಿಗೆ ಹೋಗುತ್ತಿದ್ದು ಅದಕ್ಕೆ ಅತ್ಯಂತ ಶೋಷಿತ ವಿಭಾಗವಾದ ದಲಿತರೇ ಮೊದಲ ಬಲಿಪಶುಗಳಾಗಿದ್ದಾರೆ. ಒಟ್ಟಿನಲ್ಲಿ ಸ್ವತಂತ್ರ ಭಾರತದಲ್ಲಿ ದಲಿತರ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ* ಎಂದು ದ.ಕ.ಜಿಲ್ಲೆಯ ಪ್ರಗತಿಪರ ಚಿಂತಕರೂ, ಸಾಹಿತಿಗಳಾದ ಡಾ. ಕ್ರಷ್ಣಪ್ಪ ಕೊಂಚಾಡಿಯವರು ಅಭಿಪ್ರಾಯ ಪಟ್ಟರು.
ದಲಿತ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ, ಭೂಮಿ ಮನೆ ನಿವೇಶನ ಆರೋಗ್ಯ ಉದ್ಯೋಗದ ಹಕ್ಕಿಗಾಗಿ,ದಲಿತ ಮೀಸಲು ನಿಧಿಯ ಸಮರ್ಪಕ ಬಳಕೆಗಾಗಿ ಮಾರ್ಚ್ 30 ರಂದು ತೊಕ್ಕೋಟುನಲ್ಲಿ ಜರುಗಿದ ಉಳ್ಳಾಲ ತಾಲೂಕು ಮಟ್ಟದ ದಲಿತ ಚೈತನ್ಯ ಸಮಾವೇಶವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲೆಯ ರೈತ ಚಳುವಳಿಯ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್ ರವರು ಮಾತನಾಡುತ್ತಾ, ಜಾತಿ ಧರ್ಮದ ಹೆಸರಿನಲ್ಲಿ ಕೋಮುದ್ವೇಷ ಹಬ್ಬಿಸುವ ಮತಾಂಧರು ಜಾತಿ ತಾರತಮ್ಯದ ಬಗ್ಗೆ ಚಕಾರ ಶಬ್ದವೆತ್ತುತ್ತಿಲ್ಲ. ದಲಿತರನ್ನು ಮನುಷ್ಯರನ್ನಾಗಿ ನೋಡದ ಕೋಮುವಾದಿ ಶಕ್ತಿಗಳು ದಲಿತರನ್ನು ತಮ್ಮ ರಾಜಕೀಯ ಲಾಭಕ್ಕೆ ಮಾತ್ರ ದುರುಪಯೋಗಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾರೋಪ ಭಾಷಣ ಮಾಡಿದ ಜಿಲ್ಲೆಯ ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡಿ, ಗ್ರಾಮ ಪಂಚಾಯತ್ ನಿಂದ ಹಿಡಿದು ಎಲ್ಲಾ ಸ್ಥಳೀಯ ಆಡಳಿತಗಳು ಸೇರಿದಂತೆ ರಾಜ್ಯ ಕೇಂದ್ರ ಸರ್ಕಾರಗಳ ದಲಿತ ಮೀಸಲು ನಿಧಿಗಳು ದಲಿತ ಸಮುದಾಯದ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಅಭ್ಯುದಯಕ್ಕಾಗಿ ವಿನಿಯೋಗ ಆಗುವ ಬದಲು ಹಾಡುಹಗಲಲ್ಲೇ ದುರುಪಯೋಗವಾಗುತ್ತಿದೆ. ಮಾತ್ರವಲ್ಲದೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದಲಿತರಿಗೆ ಮೀಸಲಿಡಬೇಕಾದ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿತ ಮಾಡುವ ಮೂಲಕ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು.
ಸಮಾವೇಶವನ್ನು ಉದ್ದೇಶಿಸಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷರಾದ ಕ್ರಷ್ಣಪ್ಪ ಕೋಣಾಜೆ,ಪ್ರಧಾನ ಕಾರ್ಯದರ್ಶಿ ಕ್ರಷ್ಣ ತಣ್ಣೀರುಬಾವಿಯವರು ಮಾತನಾಡಿದರು. ಸಮಾವೇಶವು ನೂತನ ತಾಲೂಕು ಸಮಿತಿಯನ್ನು ರಚಿಸಿತು.
ಸಭೆಯ ಅಧ್ಯಕ್ಷತೆಯನ್ನು ದಲಿತ ಹಕ್ಕುಗಳ ಸಮಿತಿಯ ನಾಯಕರಾದ ವಿಶ್ವನಾಥ ಮಂಜನಾಡಿಯವರು ವಹಿಸಿದ್ದರು. ವೇದಿಕೆಯಲ್ಲಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ನಾಯಕರಾದ ಚಂದ್ರಶೇಖರ ಕಿನ್ಯಾ, ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ಕ್ರಷ್ಣಪ್ಪರವರು ಉಪಸ್ಥಿತರಿದ್ದರು.