ಮಂಗಳೂರು ಆ. 28: ಶಕ್ತಿ ನಗರದ ಶಕ್ತಿ ವಿದ್ಯಾಸಂಸ್ಥೆಯ ವಸತಿನಿಲಯದಲ್ಲಿರುವ ವಿದ್ಯಾರ್ಥಿಗಳು ಶಕ್ತಿ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ ವತಿಯಿಂದ ಅದ್ದೂರಿಯಾದ ಶ್ರೀ ಗಣೇಶೋತ್ಸವವನ್ನು ಆಚರಿಸಿದರು. ಗೌರಿಗಣೇಶದ ದಿನ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆಯ ಮೂಲಕ ಗಣೇಶನ ಮೂರ್ತಿಯನ್ನು ಶಕ್ತಿ ವಿದ್ಯಾಸಂಸ್ಥೆಗೆ ತರಲಾಯಿತು. ಗಣೇಶ ಚತುರ್ಥಿಯ ದಿನ ವೆಂಕಟ್ರಮಣ ಭಟ್‍ ಇವರ ನೇತೃತ್ವದಲ್ಲಿ ಪ್ರತಿಷ್ಠಾಪನ ಪೂಜೆಯನ್ನು ನೆರವೇರಿಸಲಾಯಿತು. 

ಈ ಸಂದರ್ಭದಲ್ಲಿ ಆಯೋಜಿಸಿದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸನಾತನ ಸಂಸ್ಥೆಯ ವಕ್ತಾರರಾಗಿರುವ  ಲಕ್ಷ್ಮಿ ಪೈ ಅವರು ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು  ಬ್ರಿಟಿಷರ ವಿರುದ್ಧ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವ ಸಲುವಾಗಿ ಭಾರತೀಯರನ್ನು ಬ್ರಿಟಿಷರ ವಿರುದ್ಧ ಸಂಘಟಿಸುವ ಸಲುವಾಗಿ ಪ್ರಥಮ ಬಾರಿಗೆ 1893ರಲ್ಲಿ ಬಾಲಗಂಗಾಧರ ತಿಲಕ್  ಅವರು ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಕರೆಕೊಟ್ಟರು. ಯಾವುದೇ ಮತ ಪಂಥದವರು ಇದ್ದರು ಕೂಡ ಎಲ್ಲರ ಮನೆಗಳಲ್ಲೂ ಗಣೇಶನ ಸಣ್ಣ ಪ್ರತಿಮೆ ಇದ್ದೆ ಇರುತ್ತದೆ. ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ವಿದ್ಯೆ ಸಂಪಾದನೆಯ ಹಾದಿಯಲ್ಲಿ ಬರುವ ಎಲ್ಲ ವಿಘ್ನಗಳನ್ನು ದೂರ ಮಾಡಿ ಆಶೀರ್ವದಿಸುವವನು ಗಣೇಶ. ನಮ್ಮ ಮನಸ್ಸು ಚಂಚಲವಾದದ್ದು ಅದನ್ನು ಅಂಕುಶದಿಂದ ತನ್ನ ನಿಯಂತ್ರಣಕ್ಕೆ ತಂದು ತೊಂದರೆ ಕೊಡುವ ಅನಿಷ್ಟ ಶಕ್ತಿಗಳನ್ನು ತನ್ನ ಪಾಷದಿಂದ ಬಂಧಿಸಿ ದೂರ ಕೊಂಡೊಯ್ಯುವವನು ಗಣಪತಿ ಅದಕ್ಕಾಗಿ ವಿದ್ಯೆ ಸಂಪಾದನೆಯಲ್ಲಿ ಗಣಪತಿಯನ್ನು ಆರಾಧಿಸಿದರೆ ವಿಘ್ನಗಳನ್ನು ದೂರ ಮಾಡುತ್ತಾನೆ. ಆದ್ದರಿಂದ ಯಾವುದೇ ಕಾರ್ಯಕ್ರಮದಲ್ಲೂ ಗಣಪತಿಗೆ ಮೊದಲ ಪೂಜೆ ನಡೆಯುತ್ತದೆ. ಬಾದ್ರಪದ ಶುಕ್ಲ ಚತುರ್ಥಿಯಂದು ಬ್ರಹ್ಮಾಂಡದಲ್ಲಿ ಸಾವಿರ ಪಟ್ಟು ಹೆಚ್ಚು ಗಣಪತಿಯ ತತ್ವಗಳು ಕಾರ್ಯ ನಿರತವಾಗುತ್ತದೆ. ಅದಕ್ಕಾಗಿ ನಾವು ನೂತನ ಮೂರ್ತಿಯನ್ನು ತಂದು ಪೂಜಿಸುತ್ತೇವೆ. ಜೇಡಿ ಅಥವಾ ಆವೆ ಮಣ್ಣಿನಿಂದ ಮಾಡಲಾದ ಗಣಪತಿಯ ಮೂರ್ತಿಯನ್ನೇ ತಂದು ನಾವು ಅದರಲ್ಲಿ ಪ್ರಾಣ ಪ್ರತಿಷ್ಠೆಯನ್ನು ಮಾಡಿ ಹಬ್ಬದವನ್ನು ಆಚರಿಸಬೇಕು ಅಂತ ಶಾಸ್ತ್ರಗಳು ಹೇಳುತ್ತವೆ. ಗಂಗಣಪತಯೇ ನಮಃ ಈ ಬೀಜ ಮಂತ್ರವನ್ನು ಸ್ಮರಿಸಿ ಅಧ್ಯಯನದಲ್ಲಿ ತೊಡಗಿದರೆ ಕಲಿತ ವಿಷಯಗಳು ನಿಮಗೆ ಗ್ರಹಣವಾಗುತ್ತದೆ. ಜೀವನದಲ್ಲಿ ಸಫಲತೆಯನ್ನು ಕೊಡುವವನು ಈ ಗಣಪತಿ ಆದ್ದರಿಂದ ನಾವು ಗಣಪತಿಯ ಆರಾಧನೆ ಮಾಡೋಣ ಅಂತ ಹೇಳುತ್ತಾ ಎಲ್ಲರಿಗೂ ಗಣೇಶೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್‍ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮೂರ್ತಿ ಹಾಗೂ ಶಿಕ್ಷಕ ವರ್ಗ ಉಪಸ್ಥಿತರಿದ್ದರು, ನಟೇಶ್ ಆಳ್ವ ಅವರು ಸಭಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. 

ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಕಾರ್ಯಕ್ರಮದಲ್ಲಿ ಡಾ.ಕೆ.ಸಿ.ನಾೈಕ್,  ಸಗುಣ ಸಿ ನಾೈಕ್ ಮತ್ತು ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ಪ್ರಾಂಶುಪಾಲರಾದ ಬಬಿತಾ ಸೂರಜ್‍ ರವರು ಉಪಸ್ಥಿತರಿದ್ದರು. 

ವಿಸರ್ಜನಾ ಪೂಜೆಯ ನಂತರ ಗಣೇಶನ ಮೂರ್ತಿಯ ಭವ್ಯ ಶೋಭಾಯಾತ್ರೆಯು ಶಕ್ತಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಕ್ತಿ ವಿದ್ಯಾ ಸಂಸ್ಥೆಯ ಬಾವಿಯಲ್ಲಿ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನಡೆಯಿತು.  ಶೋಭಾಯಾತ್ರೆಯಲ್ಲಿ ಮಕ್ಕಳಿಂದ ಚೆಂಡೆ ವಾದನ, ಕುಣಿತ ಭಜನೆ, ವೀರಗಾಸೆ ಮತ್ತು ತಾಸೆಯ ಪ್ರದರ್ಶನವು ನಡೆಯಿತು. ವಿದ್ಯಾರ್ಥಿಗಳ ಶಿಸ್ತು ಬದ್ದ ಶೋಭಾಯಾತ್ರೆಯು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.