ನನ್ನ ಶ್ವಾಸ ಸಣ್ಣದು; ನಿಮ್ಮ ವಿಶ್ವಾಸ ದೊಡ್ಡದು. ಮನುಷ್ಯ ಪ್ರೇಮ ಬಹು ಮುಖ್ಯ. ಮಾನವ ಜಾತಿ ತಾನೊಂದೆ ವಲಂ - ಮನುಷ್ಯ ಜಾತಿ ಅಂದರೆ ಅದು ಒಂದೇ. ಕೆಲವಂಶ ನೀಚರು, ದುಷ್ಟರು ಹಿಂದೆಯೂ ಇದ್ದರು; ಇಂದೂ ಬೇರೆ ಬೇರೆ ರೀತಿಯಲ್ಲಿ ಇದ್ದಾರೆ. ಕಾಲವು ಏನೂ ಕೆಡಲಿಲ್ಲ; ಇನ್ನೂ ಒಳ್ಳೆದಾಗಿಯೇ ಇದೆ. ಸಮಾಜದಲ್ಲಿ ಮಾನವತೆ ಇನ್ನೂ ಇದೆ ಎಂದು ಪ್ರೊ.ಅಮೃತ ಸೋಮೇಶ್ವರವರು ತಿಳಿಸಿದರು.
ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ವತಿಯಿಂದ ಪ್ರೊ.ಅಮೃತ ಸೋಮೇಶ್ವರ - ನರ್ಮದಾ ದಂಪತಿಗಳ ವೈವಾಹಿಕ ವಜ್ರ ಮಹೋತ್ಸವ ವರ್ಷದ ಸಲುವಾಗಿ ಅವರ ಸ್ವಗೃಹದಲ್ಲಿ ಸನ್ಮಾನವನ್ನು ಎರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಪ್ರೊ.ಅಮೃತ ಸೋಮೇಶ್ವರರು ಮಾತನಾಡಿದರು.
ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ತಮ್ಮ ಅಭಿನಂದನಾ ನುಡಿಗಳಲ್ಲಿ ಅಮೃತ ಸೋಮೇಶ್ವರರು ಅಬ್ಬಕ್ಕ ಉತ್ಸವ 1997ರಲ್ಲಿ ಆರಂಭಗೊಂಡದಿನಿಂದ ಗೌರವ ಸಲಹೆಗಾರರಾಗಿ ಮಾರ್ಗದರ್ಶಕರಾಗಿ ಅವರ ಸೇವೆಯನ್ನು, ಸಮಯವನ್ನು ಜ್ಞಾನವನ್ನು ಸಮಿತಿಗೆ ನೀಡಿದ್ದಾರೆ ಎಂದು ತಿಳಿಸಿ ಪ್ರೊ. ಅಮೃತ ಸೋಮೇಶ್ವರ ದಂಪತಿಗಳ 60 ವರ್ಷಗಳ ವೈವಾಹಿಕ ಸಂಭ್ರಮಕ್ಕೆ ಶುಭ ಹಾರೈಸಿದರು.
ಉತ್ಸವ ಸಮಿತಿಯ ಗೌರವಾಧ್ಯಕ್ಷರೂ ಹಾಗೂ ಮಾಜಿ ಶಾಸಕರಾದ ಕೆ. ಜಯರಾಮ ಶೆಟ್ಟಿಯವರು ಮಾತನಾಡಿ ಅಮೃತ ಸೋಮೇಶ್ವರರು ಈ ಜಿಲ್ಲೆ, ರಾಜ್ಯ ಹಾಗೂ ದೇಶದಲ್ಲಿ ಕಲೆ - ಸಾಹಿತ್ಯಗಳಲ್ಲಿ ಹೆಸರುವಾಸಿಯಾದ ವಿದ್ವಾಂಸರು. ಯಕ್ಷಗಾನದಲ್ಲಿ ಎಲ್ಲರಿಗೂ ನಿರ್ದೇಶನವನ್ನು ಕೊಡುವಷ್ಟು ಪಾಂಡಿತ್ಯವನ್ನು ಗಳಿಸಿಕೊಂಡವರು. ಅವರ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆಇದೆ. ದೇವರು ದಂಪತಿಗಳಿಗೆ ಸಕಲ ಭಾಗ್ಯಗಳನ್ನು ಅನುಗ್ರಹಿಸಲಿ ಎಂದು ಶುಭಾಂಸನೆಗೈದರು.
ಈ ಸಂದರ್ಭದಲ್ಲಿ ಗೌರವ ಉಪಾಧ್ಯಕ್ಷರಾದ ಸದಾನಂದ ಬಂಗೇರ, ಉಪಾಧ್ಯಕ್ಷರಾದ ಯು.ಪಿ. ಆಲಿಯಬ್ಬ, ದೇವಕಿಆರ್ ಉಳ್ಳಾಲ್, ಕೋಶಾಧಿಕಾರಿ ಆನಂದ ಕೆ.ಅಸೈಗೋಳಿ, ಪದಾಧಿಕಾರಿಗಳಾದ ಎಂ. ವಾಸುದೇವ ರಾವ್ ಡಿ.ಎನ್. ರಾಘುವ, ಚಿದಾನಂದ, ಸತೀಶ್ ಭಂಡಾರಿ, ಮಾಧವಿ ಉಳ್ಳಾಲ್, ಶಶಿಕಾಂತಿ ಉಳ್ಳಾಲ್, ಸುಷ್ಮಾ ಜನಾರ್ಧನ್, ರಾಜಲಕ್ಷ್ಮಿ ಸುವರ್ಣ ಉಪಸ್ಥಿತರಿದ್ದರು.