ಉಡುಪಿ, ನ 14:  ಜಾರಿ ಮತ್ತು ತನಿಖೆ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಡಾ. ಸಿ.ಹೆಚ್. ಬಾಲಕೃಷ್ಣ ಅವರ ನಿರ್ದೇಶನದ ಮೇರೆಗೆ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ರವರ ಮಾರ್ಗದರ್ಶನದಂತೆ ನವೆಂಬರ್ 14 ರಂದು ಬೆಳಗ್ಗಿನ ಜಾವ 4.50 ರ ಸುಮಾರಿಗೆ ಕಾರ್ಕಳ ತಾಲೂಕು ಬೋಳ ಗ್ರಾಮದ ಅಬ್ಯನಡ್ಕದಲ್ಲಿರುವ ಅವಿನಾಶ್ ಮಲ್ಲಿ ಎಂಬುವರಿಗೆ ಸೇರಿದ ಅವನಿ ನಿಲಯ ಎಂಬ ಮನೆಗೆ ಹಾಗೂ ಅದೇ ಗ್ರಾಮದ ಮರಿಮಾರು ಗುತ್ತು ಎಂಬ ಮನೆಗೆ ಏಕಕಾಲದಲ್ಲಿ ಅಬಕಾರಿ ಇಲಾಖೆಯವರು ದಾಳಿ ನಡೆಸಿ, ಒಟ್ಟು 2 ಪ್ರಕರಣಗಳಲ್ಲಿ 272 ಪೆಟ್ಟಿಗೆಗಳಲ್ಲಿ ಅಂದಾಜು 15 ಲಕ್ಷ ರೂ. ಮೌಲ್ಯದ ಒಟ್ಟು 2360.850 ಲೀ. ವಿವಿಧ ಬ್ರಾಂಡ್‍ಗಳ ಗೋವಾ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವುದನ್ನು ಪತ್ತೆ ಹಚ್ಚಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಆರೋಪಿಗಳಾದ ಉಡುಪಿ ತಾಲೂಕು ಆದಿ ಉಡುಪಿಯ ಪ್ರಶಾಂತ್ ಸುವರ್ಣ ಬಿನ್ ಕೇಶವ ಸುವರ್ಣ ಮತ್ತು ಬೋಳ ಗ್ರಾಮದ ಅಬ್ಯನಡ್ಕದ ಅವಿನಾಶ್ ಮಲ್ಲಿ ಎಂಬವರು ಓಡಿ ತಲೆಮರೆಸಿಕೊಂಡಿದ್ದು, ಪತ್ತೆ ಹಚ್ಚಲು ಕ್ರಮಕೈಗೊಳ್ಳಲಾಗುತ್ತಿದೆ. 

ಕಾರ್ಯಾಚರಣೆಯ ನೇತೃತ್ವವನ್ನು ಜಿಲ್ಲಾ ಅಬಕಾರಿ ಅಧೀಕ್ಷಕ ಶಿವಪ್ರಸಾದ್ ವಹಿಸಿದ್ದು, ಉಡುಪಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಗುರುಮೂರ್ತಿ ಡಿ. ಪಾಲೇಕರ್ ಹಾಗೂ ಉಡುಪಿ ಜಿಲ್ಲಾ ತಂಡದ ಅಬಕಾರಿ ಉಪ ನಿರೀಕ್ಷಕ ರಾಘವೇಂದ್ರ ಪ್ರಕರಣವನ್ನು ದಾಖಲಿಸಿರುತ್ತಾರೆ. 

ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಜ್ಯೋತಿ ಹಾಗೂ ಮಿಲ್ಲರ್ ಡಿಸೋಜ, ಉಪ ನಿರೀಕ್ಷಕರಾದ ಕೃಷ್ಣ, ನಿತ್ಯಾನಂದ, ಶಿವಶಂಕರ, ದಿವಾಕರ, ಚಂದ್ರ ಮೊಗವೀರ ಹಾಗೂ ಸಿಬ್ಬಂದಿಯವರಾದ ಚಂದ್ರಶೇಖರ ಪಾಟೀಲ, ನಿರ್ಮಲ ನಾಯಕ್, ಶಂಕರಾನಂದ, ನಂಜುಂಡಸ್ವಾಮಿ, ಪ್ರಹ್ಲಾದ, ರಾಜಶೇಖರ, ಖಾಜ ಮೈನುಸಾಬ್, ತಿಪ್ಪಣ್ಣ ಹೊಸಮನಿ, ಕೃಷ್ಣ ಆಚಾರಿ, ಮಹಾಂತೇಶ್ ಹಾಗೂ ವಾಹನ ಚಾಲಕರಾದ ದಿನೇಶ್, ವೆಂಕಟರಮಣ ಗೊಲ್ಲ, ಪ್ರದೀಪ, ಸುಧಾಕರ ಭಾಗವಹಿಸಿರುತ್ತಾರೆ.