ಉಡುಪಿ: ವಿದ್ಯಾರ್ಥಿನಿಯರು ಕೇವಲ ಅಧ್ಯಯನದಲ್ಲಿ ಮುಂದೆ ಇದ್ದರೆ ಸಾಲದು, ಎಲ್ಲಾ ರಂಗಗಳಲ್ಲಿ ಸಾಧಕರಾಗಬೇಕು ಸಮಾಜವನ್ನು ಮುನ್ನಡೆಸುವವರಾಗಬೇಕು ಇದೇ ಉದ್ದೇಶದಿಂದ ಇತ್ತೀಚೆಗೆ ಕೇಂದ್ರ ಸರ್ಕಾರ ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಕಾನೂನನ್ನು ಜಾರಿಗೆ ತಂದಿದೆ ಆದ್ದರಿಂದ ವಿದ್ಯಾರ್ಥಿನಿಯರು ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಉಡುಪಿ ಶಾಸಕ ಯಾಶಪಾಲ್ ಸುವರ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2023-24 ನೇ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಮತ್ತು ಪ್ರತಿಭಾ ಪುರಸ್ಕಾರವನ್ನು ನೆರವೇರಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲೆ ಹಂಸವತಿ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ತಾರಾದೇವಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ಶಿಕ್ಷಣ ಸೇವಾ ಸಮಿತಿ ಸದಸ್ಯ ಯೋಗೀಶ್ ಭಾಗವಹಿಸಿದ್ದರು.

ಶಾಸಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮಾರ್ಚ್ 2023ರ ಎಸ್ ಎಸ್ ಎಲ್ ಸಿ  ಯ 29 ಮತ್ತು ಪಿಯುಸಿ ಪಬ್ಲಿಕ್ ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿಯ ಅಂಕವನ್ನು ಗಳಿಸಿದ 61 ವಿದ್ಯಾರ್ಥಿನಿಯರು ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದರು.

ಪ್ರಾಂಶುಪಾಲೆ ಡಾ| ಸುಮಾ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ದಯಾನಂದ್ ಸ್ವಾಗತಿಸಿದರು. ಉಪನ್ಯಾಸಕ ಗಂಗಾಧರ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕಿ ಇಂದಿರಾ ವಂದಿಸಿದರು.