ಉಡುಪಿ, ಆ 01: ಯುವನಿಧಿ ಯೋಜನೆಯ ಬಗ್ಗೆ ಹೆಚ್ಚು ಪ್ರಚಾರಪಡಿಸುವುದರೊಂದಿಗೆ ನಿರುದ್ಯೋಗ ಹೊಂದಿದ ಯುವಜನರು ಇದರ ಫಲಾನುಭವಿಗಳಾನ್ನಾಗಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

ಅವರು  ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿ ಯುವನಿಧಿ ಯೋಜನೆ ಅನುಷ್ಠಾನ ಹಾಗೂ ಐ.ಟಿ.ಐ ಪ್ರವೇಶಾತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸರಕಾರ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ಪಡೆದ ನಿರುದ್ಯೋಗಿಗಳಾದ ಅರ್ಹ ಯುವಜನರಿಗೆ ಯುವನಿಧಿ ಯೋಜನೆಯಡಿ ಪ್ರತೀ ತಿಂಗಳು ಪದವಿ ಹೊಂದಿದವರಿಗೆ 3000 ರೂ, ಹಾಗೂ ಡಿಪ್ಲೋಮಾ ಹೊಂದಿದವರಿಗೆ 1500 ರೂ, ಗಳನ್ನು ನೇರ ನಗದು ಹಣವನ್ನು ನಿರುದ್ಯೋಗ ಭತ್ಯೆ ರೀತಿಯಲ್ಲಿ ನೀಡುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರೊಂದಿಗೆ ಇದರ ಲಾಭ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ಪ್ರಸಕ್ತ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮಾ ಹೊಂದಿದವರು ಹಾಗೂ ಈ ಹಿಂದೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ, ತಿರಸ್ಕ್ರತ  ಗೊಂಡಿರುವವರೂ  ಸಹ ಸೇವಾಸಿಂಧು ಪೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದರು.

ಯುವನಿಧಿ ಯೋಜನೆಯ ಫಲಾನುಭವಿಗಳು ಪ್ರತೀ ತಿಂಗಳು 25 ನೇ ತಾರೀಕಿನ ಒಳಗಾಗಿ ಆನ್ಲೈನ್ ಲಾಗಿನ್‍ನ ಮೂಲಕ ಸ್ವಯಂ ಘೋಷಣೆಯನ್ನು ತಪ್ಪದೇ ಮಾಡಬೇಕು. ಘೋಷಣೆ ಮಾಡದೇ ಇದ್ದಲ್ಲಿ ತಿಂಗಳ ನೇರ ನಗದು ಖಾತೆಗೆ ಜಮಾವಣೆ ಆಗುವುದಿಲ್ಲ ಎಂದ ಅವರು, ಫಲಾನುಭವಿಗಳು ತಪ್ಪದೇ ಸೇವಾಸಿಂಧು ಪೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ಸ್ವಯಂ ಘೋಷಣೆ ಮಾಡಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ವಿನಿಮಯ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.

ಉದ್ಯೋಗಾಧಾರಿತ ಕೌಶಲ್ಯ ತರಬೇತಿಯನ್ನು ಐ.ಟಿ.ಐ ಹಾಗೂ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಸಂಸ್ಥೆಗಳಲ್ಲಿ ಸಾಂಪ್ರದಾಯಿಕ ಕೋರ್ಸುಗಳಾದ ಫಿಟ್ಟರ್, ಎಲೆಕ್ಟ್ರೀಷಿಯನ್, ಎಲೆಕ್ಟ್ರಿಕಲ್, ಟರ್ನರ್ ಜೊತೆಗೆ ಆಧುನಿಕ ಕೋರ್ಸುಗಳಾದ ಎಲೆಕ್ಟ್ರಿಕ್ ವೆಹಿಕಲ್ ತಯಾರಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ, ರೋಬೋಟ್ ತಯಾರಿಕೆಗೆ ಸಂಬಂಧಿಸಿದ ಕೋರ್ಸುಗಳನ್ನು ಟಾಟಾ ಹಾಗೂ ಟೊಯೋಟಾ ದಂತಹ ಬೃಹತ್ ಕೈಗಾರಿಕೆಗಳ ಸಹಯೋಗದೊಂದಿಗೆ ಪ್ರಾರಂಭಿಸಿದ್ದು, ಕೋರ್ಸುಗಳು ಪಡೆದ ನಂತರ ಆ ಕಂಪನಿಗಳಲ್ಲಿಯೇ ಉದ್ಯೋಗ ಕಲ್ಪಿಸುವಂತ ಒಪ್ಪಂದಗಳು ಸಹ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ಪ್ರಚಾರಪಡಿಸಿ, ಕೌಶಲ್ಯಾಭಿವೃದ್ಧಿ ಶಿಕ್ಷಣ ಪಡೆದು, ಹೆಚ್ಚು ಜನರು ಇದರ ಲಾಭ ಪಡೆದುಕೊಳ್ಳುವಂತೆ ಮಾಡಬೇಕು ಎಂದರು.

ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿ ಡಿಪ್ಲೋಮಾ ಪಡೆದವರಿಗೆ ಪ್ರತಿಶತಃ ನೂರರಷ್ಟು ಉದ್ಯೋಗ ಅವಕಾಶಗಳು ದೊರೆಯಲಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿಲ್ಲಾ ಉದ್ಯೋಗಾಧಿಕಾರಿ ಖಲಂದರ್ ಖಾನ್, ಜಿಲ್ಲಾ ಕೌಶಲ್ಯಾ ಅಧಿಕಾರಿ ಪ್ರದೀಪ್ ಡಿ ಸೋಜ, ಜಿಲ್ಲೆಯ ಎಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರುಗಳು, ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಚಾರ್ಯರುಗಳು, ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.