ಉಡುಪಿ ಅ 31: ಜಿಲ್ಲೆಯ ಎಲ್ಲಾ ಅನುಷ್ಠಾನಾಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಜನಸ್ನೇಹಿಯಾಗಿ ತಮ್ಮ ಕಾರ್ಯಗಳನ್ನು ನಿರ್ವಹಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಹೇಳಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ಬಂದಾಗ ಅವರ ಕೆಲಸ ಕಾರ್ಯಗಳನ್ನು ಆದ್ಯತೆಯ ಮೇಲೆ ಮಾಡಿಕೊಡಬೇಕು. ಸರಕಾರ ಜಾರಿಗೆ ತಂದಿರುವ ಜನೋಪಯೋಗಿ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಪೂರ್ಣಪ್ರಮಾಣದಲ್ಲಿ, ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಕಚೇರಿಯಲ್ಲೇ ಕೂರದೇ ಸ್ಥಳ ಪರಿಶೀಲನೆ ನಡೆಸಿ, ಜನರ ಸಮಸ್ಯೆಗಳಿಗೆ ಜವಾಬ್ದಾರಿಯಿಂದ ಸ್ಪಂದಿಸಬೇಕು. ಆಗ ಮಾತ್ರ ಸರಕಾರಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ. ಜನಪ್ರತಿನಿಧಿಗಳಾದ ನಾವು ಜನರಿಗೆ ಉತ್ತರದಾಯಿಗಳಾಗಿರುತ್ತೇವೆ. ಐದು ವರ್ಷಗಳಿಗೊಮ್ಮೆ ಜನರು ನಮ್ಮನ್ನು ಪರೀಕ್ಷೆಗೊಳಪಡಿಸುತ್ತಾರೆ. ಆದರೆ ಅಧಿಕಾರಿಗಳು ಒಮ್ಮೆ ಆಯ್ಕೆಯಾದರೆ ಮುಗಿಯಿತು ಎಂಬ ತಮ್ಮ ದರ್ಪವನ್ನು ಬಿಟ್ಟು ಕೆಲಸ ಮಾಡಬೇಕು ಎಂದರು.  

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದೆ. ಆದರೆ ಬೆಳೆ ಹಾನಿ ಪ್ರಮಾಣ 34.72 ಹೆ. ಇದೆ. ಆದರೆ ಕಳೆದ ಸಾಲಿಗಿಂತ ಹೆಚ್ಚು ಮಳೆಯಾಗಿದೆ. ಬೆಳೆಹಾನಿಯನ್ನು ಸರಿಯಾಗಿ ಪರಿಶೀಲಿಸಬೇಕು. ಕಳೆದ ಸಭೆಯಲ್ಲಿ ಕಳಪೆ ಗುಣಮಟ್ಟದ ಭತ್ತದ ಬೀಜ ವಿತರಣೆಯಿಂದ ರೈತರಿಗೆ ನಷ್ಟ ಉಂಟಾಗಿದೆ. ಈ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳಲು ಹಾಗೂ ರೈತರಿಗೆ ಪರಿಹಾರವನ್ನು ಒದಗಿಸಲು ಸೂಚಿಸಲಾಗಿತ್ತು. ಆದರೆ ಸರಕಾರಕ್ಕೆ ಪತ್ರ ಬರೆದಿದ್ದೇವೆ ಎಂದರೆ ಅಷ್ಟೇ ಸಾಲದು. ಅದನ್ನು ನಿಯಮಿತವಾಗಿ ಅನುಸರಿಸುವುದರೊಂದಿಗೆ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು. 

ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಯಡಿ ಸಣ್ಣ ಪ್ರಮಾಣದ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲು  6 ಕೋಟಿ ರೂ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಈ ಚೆಕ್ ಡ್ಯಾಂಗಳಲ್ಲಿ ನೀರು ನಿಲ್ಲದ ಸ್ಥಿತಿಯಿದೆ. ಈ ಚೆಕ್ ಡ್ಯಾಂಗಳ ನಿರ್ಮಾಣ ನಕ್ಷೆ ಅವೈಜ್ಞಾನಿಕವಾಗಿದ್ದು, ಅನುದಾನದ ಬಳಕೆಯೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ, ಎಂಬ ದೂರುಗಳು ಕೇಳಿ ಬರುತ್ತಿವೆ, ಈ ಬಗ್ಗೆ ಜಿಪಂ ಸಿಇಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸೂಚನೆ ನೀಡಿದರು.

ರಾಜ್ಯದಾದ್ಯಂತ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರ ಬೆಳೆಗಳಿಗೆ ಪರಿಹಾರ ನೀಡಲು 8000 ಕೋಟಿ ರೂಪಾಯಿ ಅನುದಾನವನ್ನು ನೀಡಲು ತಯಾರಿ ಮಾಡಲಾಗುತ್ತದೆ. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಪರಿಹಾರ ನೀಡಲಾಗುವುದು ಎಂದರು.

ಸರಕಾರದ ಯಾವುದೇ ಕಾರ್ಯಕ್ರಮಗಳನ್ನು ನಡೆಸುವಾಗ ಶಿಷ್ಟಾಚಾರದಂತೆ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಸರಕಾರದ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆಯೂ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಎಂದ ಅವರು ಸರಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವಾಗ ಯಾವುದೇ ಸಾರ್ವಜನಿಕ ಸಮಸ್ಯೆಗಳು ಉಂಟಾದಲ್ಲಿ ಸ್ಥಳೀಯ ಶಾಸಕರುಗಳ ವಿಶ್ವಾಸ ಪಡೆದು ಅನುಷ್ಠಾನಕ್ಕೆ ಮುಂದಾಗಬೇಕು ಎಂದರು. 

ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ಜಲ್ ಜೀವನ್ ಮಿಷನ್ ಯೋಜನೆಯಡಿ 540.76 ಕೋಟಿ ರೂ. ಮೊತ್ತದಲ್ಲಿ 487 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 1.80 ಲಕ್ಷ ನಳ ಸಂಪರ್ಕ ಕಲ್ಪಿಸಬೇಕಾಗಿತ್ತು. ಆದರೆ 1.49 ಲಕ್ಷ ನಳ ಸಂಪರ್ಕ ಕಲ್ಪಿಸಲಾಗಿದೆ. ಬಾಕಿ ಉಳಿದ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ಪ್ರತೀ ನಳದಲ್ಲಿಯೂ ಸಮರ್ಪಕವಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು ಎಂದರು. 

ಜಿಲ್ಲೆಯಲ್ಲಿ ಕಂದಾಯ ಜಮೀನು, ಅರಣ್ಯ ಜಮೀನು, ಗುರುತಿಸಲು ಸರ್ವೇ ಕಾರ್ಯವನ್ನು ಜಂಟಿಯಾಗಿ ಕಂದಾಯ, ಅರಣ್ಯ, ಗ್ರಾಮೀಣ ಹಾಗೂ ಸರ್ವೇ ಇಲಾಖೆಗಳು ಜವಾಬ್ದಾರಿಯಿಂದ ಕೈಗೊಳ್ಳುವುದರೊಂದಿಗೆ ಜನಸಾಮಾನ್ಯರಿಗೆ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದರು. 

ಜಿಲ್ಲೆಯಲ್ಲಿ ಸಾರ್ವಜನಿಕರು ವಾಸದ ಮನೆ ಅಥವಾ ಕಟ್ಟಡ ಕಟ್ಟಲು ಬೇಡಿಕೆ ಇರುವ ಕೆಂಪು ಕಲ್ಲು ಗಣಿಗಾರಿಕೆಗೆ ಪಟ್ಟಾ ಲ್ಯಾಂಡ್ 3ಎ ನಲ್ಲಿ ಅನುಮತಿ ನೀಡಿದರೂ ಸಹ ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಶೀಘ್ರದಲ್ಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು, ಮೂರು ದಿನಗಳ ಒಳಗಾಗಿ ಕ್ರಮಕೈಗೊಳ್ಳಬೇಕೆಂದ ಅವರು, ಜನಸಾಮಾನ್ಯರ ಮನೆ ನಿರ್ಮಾಣಕ್ಕೆ ಮರಳು ಹಾಗೂ ಕೆಂಪುಕಲ್ಲಿನ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.

ಈ ಬಾರಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ರಸ್ತೆಗಳು ಹಾಳಾಗಿವೆ. ಇವುಗಳ ದುರಸ್ಥಿ ಕಾರ್ಯಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದ ಅವರು, ಬಂದರು ಕೆಲವು ನಿರ್ಮಾಣ ಕಾರ್ಯಗಳಿಗೆ ಸಿಆರ್‍ಝಡ್ ನ ಅನುಮತಿಯ ಅಗತ್ಯವಿದೆ. ಅದನ್ನು ಪಡೆಯಲು ಅನುಕೂಲ ಆಗುವಂತೆ ರಾಜ್ಯ ಮಟ್ಟದ ಸಿಆರ್‍ಝಡ್ ಕಮಿಟಿ ರಚಿಸಬೇಕಿದ್ದು, ಈಗಾಗಲೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ, ಸಮಿತಿಯನ್ನು ತ್ವರಿತವಾಗಿ ರಚಿಸುವಂತೆ ನೋಡಿಕೊಳ್ಳಬೇಕೆಂದರು. 

ಜಿಲ್ಲೆಯಲ್ಲಿ ಕಡಲ ಕೊರೆತ ಉಂಟಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ವೈಜ್ಞಾನಿಕವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಪಡಿತರ ವ್ಯವಸ್ಥೆಯಲ್ಲಿ ಆಹಾರ ವಿತರಣೆಯಲ್ಲಿ ಯಾವುದೇ ನೂನ್ಯತೆಗಳು ಆಗದಂತೆ ಎಚ್ಚರ ವಹಿಸಬೇಕು. ಪಡಿತರ ಚೀಟಿಗಳನ್ನು ರದ್ದುಪಡಿಸುವಾಗ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಬೇಕೆಂದರು.

ಸರ್ಕಾರ ಜನ ಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡಬೇಕು, ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಉತ್ತಮ ಸೇವೆಯನ್ನು ನೀಡಬೇಕು, ಜಿಲ್ಲೆಯಲ್ಲಿ ಹೆರಿಗೆ ತಜ್ಞರ ಕೊರತೆಯಿಂದ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣವು ಕಡಿಮೆ ಆಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಹೆಚ್ಚಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಜನ ಸಾಮಾನ್ಯರು ಮನೆ ನಿರ್ಮಿಸಲು ಲೇಔಟ್ ಅಪ್ರೋವ್ ಗಾಗಿ 9/11 ಗಾಗಿ ಅರ್ಜಿ ಸಲ್ಲಿಸಿದರೆ ಅವುಗಳ ವಿಲೇವಾರಿ ತಡ ಆಗುತ್ತಿದೆ. ಇದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ. ಅರ್ಜಿಗಳನ್ನು ಆಧ್ಯತೆಗಳ ಮೇಲೆ ವಿಲೇವಾರಿ ಮಾಡಬೇಕು, ಈ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ನೇತೃತ್ವದಲ್ಲಿ ಸಭೆ ಕರೆದು ತ್ವರಿತವಾಗಿ ವಿಲೇವಾರಿ ಮಾಡಲು ಕಾರ್ಯಪ್ರವೃತ್ತರಾಗಬೇಕೆಂದರು.

ಶಾಸಕರಾದ ವಿ ಸುನಿಲ್ ಕುಮಾರ್ ಮಾತನಾಡಿ, ಸಾರ್ವಜನಿಕ ಪಡಿತರ ವಿತರಣೆಯು ವ್ಯವಸ್ಥಿತವಾಗಿ ಆಗಬೇಕು. ಸರಕಾರದ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರದಂತೆ ಜನಪ್ರತಿನಿಧಿಗಳನ್ನು ಆಮಂತ್ರಿಸಬೇಕು. ಸಾರ್ವಜನಿಕರಿಗೆ ಗೃಹ ನಿರ್ಮಾಣಕ್ಕೆ ಅಗತ್ಯವಿರುವ ಮರಳು ಮತ್ತು ಕೆಂಪುಕಲ್ಲುಗಳನ್ನು ಬೇಡಿಕೆಗೆ ಅನುಗುಣವಾಗಿ ಲಭ್ಯವಾಗಬೇಕು. ಮತ್ತಿತರ ಗಂಭೀರ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. 

ಶಾಸಕರಾದ ಯಶ್ ಪಾಲ್ ಎ ಸುವರ್ಣ ಮಾತನಾಡಿ, ಜಲ್‍ಜೀವನ್ ಮಿಷನ್ ಯೋಜನೆಯಡಿ ಉಡುಪಿ ವಿಧಾನಸಭಾ ಕ್ಷೇತ್ರದ 13 ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳು ಸಮರ್ಪಕವಾಗಿ ಆಗಿಲ್ಲ. ನೀರಿನ ಸರಬರಾಜುಗಳು ಸರಿಯಾಗಿ ಆಗುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು. 

ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಅತಿವೃಷ್ಠಿಯಿಂದಾಗಿ ಕಡಲಕೊರೆತ ಉಂಟಾಗುತ್ತಿದೆ. ಕಟಪಾಡಿಯ ಮಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಕೊಚ್ಚಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರ ಒದಗಿಸಬೇಕು ಎಂದರು.  

ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಮಾತನಾಡಿ, ಹಟ್ಟಿಯಂಗಡಿ ಪ್ರದೇಶ ವ್ಯಾಪ್ತಿಯಲ್ಲಿ ಸಾರ್ವಜನಿಕರು ಓಡಾಡುವ ರಸ್ತೆ ಬದಿಯಲ್ಲಿ ಗಿಡ- ಗಂಟಿಗಳು ದಟ್ಟವಾಗಿ ಬೆಳೆದಿದ್ದು, ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಕಳೆದ ಎರಡು ಸಭೆಯಲ್ಲಿಯೂ ಪ್ರಸ್ತಾಪಿಸಲಾಗಿತ್ತು. ಆದರೆ ಈವರೆಗೂ ತೆರವು ಕಾರ್ಯವಾಗಿರುವುದಿಲ್ಲ ಎಂದು ಸಭೆಯ ಗಮನಕ್ಕೆ ತಂದರು. 

ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ವರಾಹಿ ನೀರಾವರಿ ಯೋಜನೆಗೆ ಹೆಗ್ಗುಂಜೆ ಗ್ರಾಮದಲ್ಲಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು, ಈವರೆಗೂ ಅಲ್ಲಿನ ರೈತರಿಗೆ ಸರ್ಕಾರದಿಂದ ಪರಿಹಾರ ನೀಡಿರುವುದಿಲ್ಲ. ಬಾಕಿ ಉಳಿದಿರುವ ಪರಿಹಾರದ ಹಣವನ್ನು ರೈತರಿಗೆ ನೀಡಲು ಕ್ರಮವಹಿಸಬೇಕು ಎಂದರು. 

ವಿಧಾನಪರಿಷತ್ ಶಾಸಕರುಗಳಾದ ಡಾ. ಧನಂಜಯ ಸರ್ಜಿ ಮಾತನಾಡಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಬರುವ ರೋಗಿಗಳಿಗೆ ಆರೋಗ್ಯ ಸೇವೆಗಳುಉತ್ತಮವಾಗಿ ದೊರೆಯಬೇಕು. ಅಲ್ಲಿರುವ ಯಂತ್ರೊಪಕರಣಗಳ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗಬೇಕು ಎಂದು ಸಭೆಯ ಗಮನಕ್ಕೆ ತಂದರು. 

ವಿಧಾನಪರಿಷತ್ ಶಾಸಕರುಗಳಾದ ಮಂಜುನಾಥ್ ಭಂಡಾರಿ ಮಾತನಾಡಿ, ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯಗಳು ಆದ್ಯತೆಯ ಮೇಲೆ ಆಗಬೇಕು ಎಂದ ಅವರು, ಗಂಗಾಕಲ್ಯಾಣ ಯೋಜನೆಯ ಪ್ರಯೋಜನಗಳು ಫಲಾನುಭವಿಗಳಿಗೆ ನಿಗಧಿತ ಕಾಲಾವಧಿಯಲ್ಲಿ ಸಿಗುವಂತೆ ಆಗಬೇಕು ಎಂದರು. 

ವಿಧಾನಪರಿಷತ್ ಶಾಸಕರುಗಳಾದ ಎಸ್.ಎಲ್. ಭೋಜೇಗೌಡ ಮಾತನಾಡಿ, ಜಿಲ್ಲೆಗೆ ವಿದ್ಯಾಭ್ಯಾಸಕ್ಕೆ ಹೊರ ಜಿಲ್ಲೆಗಳಿಂದ ಅದರಲ್ಲೂ ಉತ್ತರ ಕರ್ನಾಟಕದಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಶಾಲಾ ದಾಖಲಾತಿಯಾಗಿ ಒಂದು ತಿಂಗಳಾದರೂ ಹಾಸ್ಟೆಲ್ ಸೌಲಭ್ಯ ಸಿಗದೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸಿ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕೆಂದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಸಾಂಕೇತಿಕವಾಗಿ ಶಾಲಾ ಪೂರ್ವ ಶಿಕ್ಷಣ ಕಿಟ್ ಮತ್ತು ಟಿ.ವಿ.ಗಳನ್ನು ವಿತರಿಸಲಾಯಿತು. ಸಂಜೀವಿನಿ ಮಹಿಳಾ ಗುತ್ತಿಗೆದಾರರಿಗೆ ಒಡಂಬಡಿಕೆ ಹಸ್ತಾಂತರಿಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಕೆ.ಡಿ.ಪಿ ಸಭೆಯ ಸದಸ್ಯರುಗಳಾದ ಪ್ರಸನ್ನ ಕುಮಾರ್, ವೀಣಾ ಶೆಟ್ಟಿ, ಐಡಾ ಗಿಬ್ಬ ಡಿ ಸೋಜಾ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.