ಉಡುಪಿ: ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಉತ್ತಮವಾಗಿ ಬರೆಯುವಂತೆ ಅವರುಗಳ ಮನಸ್ಥಿತಿಯನ್ನು ಹೊಂದುವಂತೆ ಪೂರಕ ಕಾರ್ಯಗಳನ್ನು ಶಾಲಾ ಶಿಕ್ಷಕರು ಮಾಡುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ನಗರದ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲೆಯ ಪ್ರೌಢಶಾಲಾ ಮುಖ್ಯ ಶಿಕ್ಷಕರುಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಪೂರ್ವ ತಯಾರಿ ಹಾಗೂ ಉತ್ತಮ ಫಲಿತಾಂಶ ಗಳಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪಠ್ಯಕ್ರಮಗಳನ್ನು ಪೂರ್ಣಗೊಳಿಸಿದ್ದು, ಅಂತಿಮವಾಗಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಪಕವಾಗಿ ಎದುರಿಸುವ ಕೊನೆಯ ಹಂತದಲ್ಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಪರಿಣಾಮಕಾರಿ ಸಲಹೆ ಹಾಗೂ ಮಾರ್ಗದರ್ಶನಗಳನ್ನು ನೀಡಬೇಕು. ಕೆಲವು ವಿಷಯಗಳ ಓದಿನಲ್ಲಿ ಹಿಂದಿರುವಂತಹ ಮಕ್ಕಳುಗಳಿಗೆ ಕಷ್ಟಕರ ವಿಷಯಗಳಿಗೆ ಆದ್ಯತೆ ನೀಡಿ, ಉತ್ತಮ ಅಧ್ಯಯನ ಮಾಡಲು ಸಹಕರಿಸಬೇಕೆಂದರು.
ಕಳೆದ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯು ರಾಜ್ಯದಲ್ಲಿಯೇ ಯಾವುದೇ ಗ್ರೇಸ್ ಮಾಕ್ರ್ಸ್ ಇಲ್ಲದೇ ಶೇ. 97 ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿ ಇತ್ತು. ಇದಕ್ಕೆ ತಮಗೆಲ್ಲ ಮತ್ತೊಮ್ಮೆ ಅಭಿನಂದನೆಗಳು. ಈ ಬಾರಿಯೂ ಪರೀಕ್ಷಾ ಫಲಿತಾಂಶದಲ್ಲಿ ಶೇಕಡಾವಾರು ಪ್ರಮಾಣ ಕಳೆದ ಬಾರಿಗಿಂತ ಹೆಚ್ಚು ಪಡೆದು ಪ್ರಥಮ ಸ್ಥಾನವನ್ನು ಪಡೆಯಲು ಪರಿಣಾಮಕಾರಿಯಾಗಿ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು ಎಂದರು.
ವಿದ್ಯಾರ್ಥಿಗಳಿಗೆ ಭಯವಿಲ್ಲದೇ ಪರೀಕ್ಷೆಯನ್ನು ಎದುರಿಸಲು ವಿಷಯವಾರು ತಂತ್ರಗಳನ್ನು ಕೊನೆಯ ಗಳಿಗೆಯವರೆಗೂ ವಿದ್ಯಾರ್ಥಿಗಳಿಗೆ ಸಲಹೆ ನೀಡಬೇಕು ಎಂದ ಅವರು, ಕೆಲವು ವಿದ್ಯಾರ್ಥಿಗಳಿಗೆ ಓದಲು ವಿವಿಧ ರೀತಿಯ ಸಮಸ್ಯೆಗಳು ಇರುತ್ತವೆ. ಅಂತಹ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿಯೇ ಅಧ್ಯಯನ ಮಾಲು ಪೂರಕ ವಾತಾವರಣವನ್ನು ಕಲ್ಪಿಸಬೇಕು ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಗೆ ಶಿಸ್ತನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ನಿರಂತರವಾಗಿ ಆರಂಭದಿಂದಲೇ ವಿದ್ಯಾಭ್ಯಾಸ ಮಾಡಿದ್ದಲ್ಲಿ ಯಾವುದೇ ರೀತಿಯ ತೊಂದರೆಗಳು ಉಂಟಾಗುವುದಿಲ್ಲ. ಕೊನೆಯ ಪರೀಕ್ಷಾ ದಿನಗಳಲ್ಲಿ ಓದಲು ಹೋದಾಗ ಗೊಂದಲ ಉಂಟಾಗುತ್ತವೆ. ತಾಳ್ಮೆಯಿಂದ ಓದಬೇಕು. ಸಮಸ್ಯೆಗಳಿದ್ದಲ್ಲಿ ಶಾಲಾ ಶಿಕ್ಷಕರನ್ನು ಭೇಟಿ ಮಾಡಿ ಬಗೆಹರಿಸಿಕೊಳ್ಳಬೇಕೆಂದರು.
ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಹೊಂದಬೇಕು. ವ್ಯಸನಗಳಿಂದ ದೂರವಿರಬೇಕು ಎಂದ ಅವರು, ಶಾಲೆಯ 100 ಮೀಟರ್ ವ್ಯಾಪ್ತಿಯೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ನಿರ್ಬಂಧವಿದೆ. ಇದು ಉಲ್ಲಂಘನೆಯಾಗದಂತೆ ಮುಖ್ಯ ಶಿಕ್ಷಕರು ಎಚ್ಚರ ವಹಿಸಬೇಕೆಂದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಡಯಟ್ ಉಪಪ್ರಾಂಶುಪಾಲ ಡಾ. ಅಶೋಕ್ ಕಾಮತ್, ಸೈಂಟ್ ಸಿಸಿಲೀಸ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರೀತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲೆಯ ಪ್ರೌಢ ಶಾಲಾ ಮುಖ್ಯ ಶಿಕ್ಷಕರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.