ಉಜಿರೆ: ಪ್ರಾಚೀನ ಮನೆಗಳು ಹಾಗೂ ಮಠ-ಮಂದಿರಗಳಲ್ಲಿರುವ ಅಮೂಲ್ಯ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಶುಚಿಗೊಳಿಸಿ, ಅದಕ್ಕೆ ತೈಲ ನೀಡಿ ಸಂರಕ್ಷಿಸುವ ವಿಶೇಷ ಕಾರ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಮಾಡಲಾಗುತ್ತಿದೆ ಎಂದು ಎಸ್.ಡಿ.ಎಂ. ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ. ವಿಘ್ನರಾಜ, ಎಸ್. ಆರ್. ಹೇಳಿದರು.
ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಕೇಂದ್ರಕ್ಕೆ ಭೇಟಿ ನೀಡಿ ಅಮೂಲ್ಯ ಸಂಗ್ರಹವನ್ನು ಕುತೂಹಲದಿಂದ ವೀಕ್ಷಿಸಿ, ಮಾಹಿತಿ ಕಲೆ ಹಾಕಿದರು.
ಪ್ರಾಚೀನ ಪರಂಪರೆಯಲ್ಲಿ ಜ್ಞಾನವು ಮೌಖಿಕವಾಗಿ ಕಂಠಪಾಠದ ಮೂಲಕ ಪ್ರಸಾರವಾಗುತ್ತಿತ್ತು. ಮುಂದೆ ಹಸ್ತಪ್ರತಿಗಳ ಮೂಲಕ ಅವುಗಳ ಸಂಗ್ರಹ, ಸಂರಕ್ಷಣೆಯಾಯಿತು. ಬರವಣಿಗೆಯ ಪರಿಕರಗಳಾದ ಚಿನ್ನ, ಬೆಳ್ಳಿ, ತಾಮ್ರ, ಭೋಜಪತ್ರ ಶಿಲಾಶಾಸನ ಮೊದಲಾದವುಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಕಟವಾಗುತ್ತಿದ್ದ ವಾರ್ತಾಪತ್ರಿಕೆಗಳು, ಖ್ಯಾತ ಸಾಹಿತಿಗಳಾದ ಶಿವರಾಮ ಕಾರಂತ, ರಂ. ಶ್ರೀ. ಮುಗಳಿ ಮೊದಲಾದವರ ಕೈಬರಹ ಹಾಗೂ ಹಸ್ತಾಕ್ಷರವನ್ನೂ ವಿದ್ಯಾರ್ಥಿಗಳು ನೋಡಿ ಸಂತಸಪಟ್ಟರು.
ಕನ್ನಡ ವಿಭಾಗದ ಉಪನ್ಯಾಸಕರುಗಳಾದ ಎಂ.ಪಿ. ಶ್ರೀನಾಥ್ ಮತ್ತು ಭವ್ಯಶ್ರೀ ಉಪಸ್ಥಿತರಿದ್ದರು.