ವಿದ್ಯಾಗಿರಿ: ಸ್ವಯಂ ಜಾಗೃತಿ ಹಾಗೂ ಸ್ವಯಂ ವಿಶ್ಲೇಷಣೆಯಿಂದ ತನ್ನನ್ನು ತಾನು ಅರಿತುಕೊಳ್ಳಲು ಸಾಧ್ಯ. ನಮ್ಮ ಶಾಂತ ಮನಸ್ಸನ್ನೇ ನಿಗ್ರಹಿಸಿಕೊಂಡರೆ, ಮಾನಸಿಕ ಸಮಸ್ಯೆ ಉಲ್ಬಣಿಸಲು ಅವಕಾಶವಿಲ್ಲ ಎಂದು ಬೆಂಗಳೂರಿನ ಮನೋಶಾಸ್ತ್ರಜ್ಞ ನವೀಣ್ ಎಲ್ಲಂಗಳ ಹೇಳಿದರು. 

ಮೂಡುಬಿದಿರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಮೂಡುಬಿದರೆ ಸಹಯೋಗದಲ್ಲಿ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ  ವಿಭಾಗದಲ್ಲಿ ಗುರುವಾರ ಹಮ್ಮಿಕೊಂಡ ‘ದೈನಂದಿನ ಜೀವನದಲ್ಲಿ ಮನೋವಿಜ್ಞಾನ’’ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ನಮ್ಮ ಮನಸ್ಸಿನ ಬಗ್ಗೆ ನಾವು ತಿಳಿದುಕೊಳ್ಳಲು ಯತ್ನಿಸಬೇಕು. ಮನಸ್ಸನ್ನು ಬುದ್ಧಿ ನಿಯಂತ್ರಿಸಬೇಕು. ಚಿಂತೆ ಬೇಡ, ಚಿಂತನೆ ಇರಲಿ ಎಂದರು.  ನಮ್ಮ ಆಲೋಚನೆಗೆ ಭಾವನೆ ಸೇರಿದಾಗ ನಂಬಿಕೆಯು ಸೃಜಿಸುತ್ತದೆ. ಜಾಗೃತ ಮನಸ್ಸು ನಮ್ಮನ್ನು ಯಶಸ್ಸಿನೆಡೆಗೆ ಕರೆದೊಯ್ಯುತ್ತದೆ. ಸ್ವಯಂ ಉನ್ನತೀಕರಣ ಬಹುಮುಖ್ಯ ಎಂದರು. 

ಯಾವಾಗಲೂ ಧನಾತ್ಮಕ ಮತ್ತು ವರ್ತಮಾನದ ಬಗ್ಗೆ ಯೋಚಿಸಿ. ಭೂತಕ್ಕೆ ಚಿಂತಿಸುವ, ಭವಿಷ್ಯಕ್ಕೆ ಭಯ ಪಡುವ ಅಗತ್ಯವಿಲ್ಲ. ನಿಮ್ಮ ಆತ್ಮಬಲ ಸದೃಢವಾಗಿರಲಿ ಎಂದರು. 

ಪ್ರಾರ್ಥನೆ ಚರ್ವಿತ ಚರ್ವಣ ಆಗಬಾರದರು. ಪ್ರಾರ್ಥನೆ ಪ್ರಸ್ತುತ ಸ್ಥಿತಿಗೆ ಸ್ಪಂದಿಸಲಿ. ಸ್ವಂತಕ್ಕೆ, ಸಮಾಜಕ್ಕೆ, ಪ್ರಕೃತಿಗೆ ನಾವೇನು ಮಾಡುತ್ತಿದ್ದೇವೆ ಎಂಬ ಚಿಂತನೆ ಇರಲಿ. ಅಧ್ಯಾತ್ಮ, ಧರ್ಮ, ಮನೋವಿಜ್ಞಾನ, ಮೌಢ್ಯ ಮತ್ತಿತರ ವ್ಯತ್ಯಾಸಗಳ ಬಗ್ಗೆ ಸ್ಪಷ್ಟತೆ ಇರಬೇಕು. ಮನಸ್ಸು ಯಾವಾಗಲೂ ವರ್ತಮಾನದಲ್ಲಿ ಇರಲಿ ಎಂದರು.    

ಜನರ ಮನೋಭಾವ, ಅಭಿರುಚಿಯನ್ನು ಪತ್ರಕರ್ತರು ಬದಲಾವಣೆ ಮಾಡಲು ಸಾಧ್ಯವಾಗುತ್ತದೆ. ಸತ್ಯವನ್ನು ಅಳುಕಿಲ್ಲದ ತಿಳಿಸುವಲ್ಲಿ ಪತ್ರಕರ್ತರು ಮಹತ್ವದ ಪಾತ್ರ ನಿರ್ವಹಿಸಬೇಕು ಎಂದು ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಹೇಳಿದರು.

ಮನೋವಿಜ್ಞಾನ ಎಂದರೆ ಹಿಪ್ನೊಟಿಸಂ ಎಂಬ ಭಾವನೆ ಇದೆ. ಆದರೆ, ಮನಸ್ಸೇ ನಮ್ಮ ಬದುಕಿನ ಮಾರ್ಗದರ್ಶಕ ಎಂದು ಮೂಡುಬಿದಿರೆ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಯಶೋಧರ ವಿ. ಬಂಗೇರ ಹೇಳಿದರು. 

ಪತ್ರಕರ್ತ ಹರೀಶ್ ಕೆ ಅದೂರು ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿ ಪ್ರಖ್ಯಾತ್ ಬೆಳುವಾಯಿ ಕಾರ್ಯಕ್ರಮ  ನಿರೂಪಿಸಿದರು. ಮೂಡುಬಿದಿರೆಯ ಪತ್ರಕರ್ತರು, ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು.