ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ಫಿಟ್‌ ಇಂಡಿಯಾ ಹಾಗೂ ಇನ್‌ಸ್ಟಿಟ್ಯೂಷನ್ಸ್ ಇನ್ನೋವೇಶನ್ ಕೌನ್ಸಿಲ್ ಗಳ  ಸಹಯೋಗದಲ್ಲಿ “ಯೋಗ ಮತ್ತು ಧ್ಯಾನ” ಕುರಿತು ಒಂದು ದಿನದ ಕಾರ್ಯಾಗಾರವನ್ನು  ಸ್ನಾತಕೋತ್ತರ ವಿಭಾಗದ ಸೆಮಿನಾರ್‌ ಹಾಲ್‌ ನಲ್ಲಿ ಆಯೋಜಿಸಲಾಯಿತು. 

ಪ್ರೀತಿ ಶೆಣೈ, ಸಮಾಲೋಚಕರು, ಪುತ್ತೂರು ಇವರು ದಿನದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಅವರು ಯೋಗ ಮತ್ತು ಧ್ಯಾನ ಕ್ಷೇತ್ರದಲ್ಲಿ ತಮ್ಮ ಜ್ಞಾನ ಮತ್ತು ಪರಿಣತಿಯನ್ನು ವಿದ್ಯಾರ್ಥಿಗಳೊಡನೆ ಹಂಚಿಕೊಂಡರು. ಈ ಕಾರ್ಯಗಾರದಲ್ಲಿ ಅವರು  ವಿದ್ಯಾರ್ಥಿಗಳಿಗೆ ಒತ್ತಡನಿವಾರಣೆ, ಏಕಾಗ್ರತೆಯನ್ನು ಹೆಚ್ಚಿಸುವುದು, ಮನಸ್ಸನ್ನು ಉಲ್ಲಾಸಗೊಳಿಸುವುದು ಮುಂತಾದ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮುಖಾಂತರ ಮಾಹಿತಿ ನೀಡಿದರು. ವಿದ್ಯಾರ್ಥಿಜೀವನದಲ್ಲಿ ಉಂಟಾಗುವ ಆರೋಗ್ಯಸಮಸ್ಯೆಗಳಿಗೆ ಯೋಗ ಹಾಗೂ ಧ್ಯಾನದ ಮೂಲಕ ಯಾವರೀತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ವಿದ್ಯಾರ್ಥಿಗಳಿಗೆ ಮನವರಿಕೆಮಾಡಿಸಿಕೊಟ್ಟರು. 

ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟೋನಿ ಪ್ರಕಾಶ್ ಮೊಂತೆರೋರವರು ಕಾರ್ಯಗಾರದ  ಅಧ್ಯಕ್ಷತೆ ವಹಿಸಿದ್ದರು, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಅವರು ನಮ್ಮ ದಿನನಿತ್ಯದ ಜೀವನದಲ್ಲಿ ಯೋಗ ಮತ್ತು ಧ್ಯಾನದ ಮಹತ್ವವನ್ನು ತಿಳಿಸಿದದರು. ಮನಸ್ಸನ್ನು ತರಬೇತಿಗೊಳಿಸುವ ಮತ್ತು ಸ್ವಯಂ ಶಿಸ್ತಿನ ಜೀವನವನ್ನು ನೆಡೆಸುವ  ಮಹತ್ವವನ್ನು ಒತ್ತಿ ಹೇಳಿದರು. ಅತಿಯಾದ ಒತ್ತಡದಿಂದ ಕೂಡಿದ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಯೋಗ ಹಾಗೂ ಧ್ಯಾನದ ಮುಖಾಂತರ  ಮಾನಸಿಕ ಯೋಗಕ್ಷೇಮವನ್ನು  ಕಾಯ್ದುಕೊಳ್ಳಬೇಕು ಎಂದು ಹೇಳಿದರು. 

ಸ್ನಾತಕೋತ್ತರ ಗಣಕವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎಂಎಸ್ ಅಪರ್ಣಾ ಮತ್ತು ತಂಡ ಪ್ರಾರ್ಥನೆ ಸಲ್ಲಿಸಿದರು, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಸಂಯೋಜಕಿ  ಶ್ರೀಮಣಿ  ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಹರ್ಷಿತ್ ಆರ್ ವಂದಿಸಿದರು ಮತ್ತು ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಿಲ್ಪಾ  ಕಾರ್ಯಕ್ರಮ ನಿರೂಪಿಸಿದರು.