ಮಂಗಳೂರು: ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರದಿದ್ದರೆ ಭಾರತಕ್ಕೆ ಗಂಡಾಂತರ ತಪ್ಪಿದ್ದಲ್ಲ. ಅಂಬೇಡ್ಕರ್ ರವರ ಸಿದ್ಧಾಂತ, ಆಶಯ ಮತ್ತು ಸಂವಿಧಾನದ ಹಕ್ಕುಗಳಿಗೆ ಬಿಜೆಪಿ ಸರ್ಕಾರ ಇಂದು ತಿಲಾಂಜಲಿ ನೀಡುತ್ತಾ ಬರುತ್ತಿರುವುದು ಖೇದಕರ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಕಳವಳ ವ್ಯಕ್ತಪಡಿಸಿದರು.

ಗುರುವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಮಾತನಾಡಿದ ಅವರು, ನೈಜ್ಯ ಭಾರತೀಯನಾಗಿದ್ದ ಅಂಬೇಡ್ಕರ್ ರವರು ಭ್ರಷ್ಟಾಚಾರ, ವರ್ಗೀಯತೆ, ಜಾತೀಯತೆಗೆ ವಿರುದ್ಧವಾಗಿದ್ದರು. ಎಲ್ಲಾ ವರ್ಗಗಳಿಗೆ ಧಾರ್ಮಿಕ ಹಕ್ಕು ಮತ್ತು ಧ್ವನಿಯನ್ನು ನೀಡಿದ ಮಹಾನುಭಾವ. ಈ ದೇಶದ ತತ್ವಸಿದ್ಧಾಂತವನ್ನು ಜನರಿಗೆ ಮುಟ್ಟಿಸಿದ ಓರ್ವ ಧೀಮಂತ ನಾಯಕ ಎಂದು ಹೇಳಿದರು.

ದೇಶದ ಎಲ್ಲಾ ವರ್ಗದ ಭಾರತೀಯರಿಗೆ ಸಂವಿಧಾನ ಪವಿತ್ರ ಗ್ರಂಥವಾಗಿದೆ. ಜಾತಿ-ಬೇಧ ಮೀರಿ ನಾವೆಲ್ಲರೂ ಭಾರತೀಯರಾಗಿ ಬದುಕುತ್ತಿದ್ದೇವೆ.  ದೇಶದಲ್ಲಿ ಭಾರತೀಯತೆಯ ಸಿದ್ಧಾಂತಕ್ಕೆ ತಿಲಾಂಜಲಿ ನೀಡುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗೂಡದಿದ್ದರೆ ದೇಶಕ್ಕೆ ಗಂಡಾಂತರ ಎದುರಾಗಲಿದೆ ಎಂದರು.

ಗಾಂಧೀಜಿ ಮತ್ತು ಅಂಬೇಡ್ಕರ್ ರವರ ತತ್ವ ಸಿದ್ಧಾಂತ ಮತ್ತು ಸಂವಿಧಾನದ ಆಶಯಗಳನ್ನು ಭಾರತದಲ್ಲಿ ಜಾರಿ ಮಾಡಲು ಪ್ರತಿಯೋರ್ವ ಕಾಂಗ್ರೆಸಿನ ಯುವಕರು, ಮಹಿಳೆಯರು, ವೃದ್ಧರು ಪ್ರತಿಜ್ಞೆ ಮಾಡಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವುದೇ ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ನುಡಿದರು.

ಈ ಸಂದರ್ಭ ಎಐಸಿಸಿ ಕಾರ್ಯದರ್ಶಿ ಪಿ.ವಿ ಮೋಹನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ, ಮಮತಾ ಗಟ್ಟಿ, ಕೃಪಾ ಆಳ್ವ, ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್,  ಮುಖಂಡರಾದ ಪದ್ಮನಾಭ ನರಿಂಗಾನ, ನವೀನ್ ಡಿಸೋಜ, ಲಾರೆನ್ಸ್ ಡಿಸೋಜ, ಸುಭಾಷ್ ಚಂದ್ರ ಕೊಲ್ನಾಡ್,   ಕು. ಅಪ್ಪಿ, ಮಲ್ಲಿಕಾ ಪಕ್ಕಳ,  ಶಾಂತಲಾ ಗಟ್ಟಿ, ಸಬಿತಾ ಮಿಸ್ಕಿತ್, ಶಬ್ಬೀರ್ ಎಸ್, ಸಿ.ಎಂ ಮುಸ್ತಫಾ, ಟಿ.ಕೆ.ಸುಧೀರ್, ರಮಾನಂದ ಪೂಜಾರಿ, ಇಸ್ಮಾಯೀಲ್ ಬಿ.ಎಸ್,  ಮಲ್ಲಿಕಾರ್ಜುನ್ ಕೋಡಿಕಲ್, ಸುರೇಶ್ ಪೂಜಾರಿ, ವಸಂತಿ ಅಂಚನ್, ಎಸ್.ಕೆ. ಸೌಹಾನ್, ಫಯಾಝ್ ಅಮ್ಮಮ್ಮಾರ್, ಮುಹೈಮಿನ್ ಮತ್ತಿತರರು ಉಪಸ್ಥಿತರಿದ್ದರು. 

ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ವಾಗತಿಸಿದರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶುಭೋದಯ ಆಳ್ವ ವಂದಿಸಿದರು.