ಮಂಗಳೂರು ಜು 07: ಮಂಗಳೂರಿನ ಪೌರ ಸನ್ಮಾನ ಸಮಿತಿಯವರು ಮಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪಡೆದವರಿಗೆ ಪೌರ ಸನ್ಮಾನ ನೀಡುವ ಕಾರ್ಯಕ್ರಮವು ಜುಲಾಯಿ 7ರ ಗುರುವಾರ ಮಂಗಳೂರಿನ ಪುರ ಭವನದಲ್ಲಿ ನಡೆಯಿತು.
ಡಾ. ಯೇನೆಪೋಯ ಅಬ್ದುಲ್ಲ ಕುಂಞು, ಡಾ. ಹೇಮಾವತಿ ವಿ. ಹೆಗ್ಗಡೆ, ಧರ್ಮಸ್ಥಳ, ಡಾ. ಹರಿಕೃಷ್ಣ ಪುನರೂರು, ಡಾ. ದೇವದಾಸ್ ಕಾಪಿಕಾಡ್ ಅವರು ನಾನಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಡಾಕ್ಟರೇಟ್ ಸಂದಿದೆ. ಮಾಜೀ ಶಾಸಕ ಐವಾನ್ ಡಿಸೋಜಾ ನೇತೃತ್ವದ ಪೌರ ಸನ್ಮಾನ ಸಮಿತಿಯು ಪುರಭವನದಲ್ಲಿ ಪೌರ ಸನ್ಮಾನ ನಡೆಸಿತು.
ಯೇನೆಪೋಯ ವಿಶ್ವವಿದ್ಯಾನಿಲಯದ ಮೂಲಕ ಗುಣಮಟ್ಟದ ಶಿಕ್ಷಣವನ್ನು ಮಂಗಳೂರಿನಲ್ಲಿ ನೀಡಿದ ಸಾಹಸಿ ಮೊಹಮ್ಮದ್ ಕುಂಞು ಅವರು. ಸಮಾಜ ಮುಖಿಯಾಗಿ ಶಿಕ್ಷಣ ಕ್ಷೇತ್ರವನ್ನು ಭವ್ಯವಾಗಿಸಿದವರು ಅವರು.
ಡಾ. ಹೇಮಾವತಿ ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿಯವರು. ಅದರ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ ಹಿರಿಮೆ ಅವರದು.
ಡಾ. ಹರಿಕೃಷ್ಣ ಪುನರೂರು ಹೋಟೆಲ್ ಉದ್ಯಮಿಯಾದರೂ ಸಾಹಿತ್ಯದ ಆಶ್ರಯದಾತರು. ದಾನಿಯಾಗಿಯೂ ಪರಿಚಿತರು.
ಡಾ. ದೇವದಾಸ್ ಕಾಪಿಕಾಡ್ ಅವರು ನಾಟಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ತುಳು ಚಿತ್ರ ರಂಗದಲ್ಲೂ ತಮ್ಮ ಛಾಪು ಮೂಡಿಸಿದವರು.
ಪೌರ ಸನ್ಮಾನ ಸಮಿತಿಯ ಸಂಚಾಲಕರಾದ ಐವಾನ್ ಡಿಸೋಜಾ ಅವರು ಮಾತನಾಡಿ ಮೇಯರ್ ಅಧ್ಯಕ್ಷತೆಯಲ್ಲಿ ನಮ್ಮ ಸುತ್ತಲಿನ ನಾಲ್ವರು ಗಣ್ಯರಿಗೆ ಡಾಕ್ಟರೇಟ್ ಸಿಕ್ಕಿದ್ದನ್ನು ಸಂಭ್ರಮಿಸಬೇಕು ಎಂಬ ತೀರ್ಮಾನದ ಫಲವಿದು. ಮೊದಲು ಯೇನೆಪೋಯ ಅಬ್ದುಲ್ಲಾ ಕುಂಞು ಅವರು ಗುಲ್ಬರ್ಗ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಾಗ ಸಾಕಷ್ಟು ಸಾಫಲ್ಯ ಕಂಡುಕೊಂಡಿದ್ದಾರೆ. ಯೇನೆಪೋಯ ಆಸ್ಪತ್ರೆಯು ಬಡವರ ಕಾಮಧೇನು ಆಗಿದೆ. ಜುಲೇಕಾ ಕ್ಯಾನ್ಸರ್ ಕೇಂದ್ರವು ರಾಜ್ಯದಲ್ಲಿ ಎರಡನೆಯದು ಮತ್ತು ಕರಾವಳಿಯಲ್ಲಿ ಮೊದಲಿನದು. ಸಾವಿರಾರು ಜನರ ಉದ್ಯೋಗದಾತರಾದ ಅವರಿಗೆ ಸನ್ಮಾನ ಸಣ್ಣದು ಎಂದು ಐವಾನ್ ಹೇಳಿದರು.
ಹೇಮಾವತಿ ಹೆಗ್ಗಡೆಯವರು ಇಂದು ಬಂದಿಲ್ಲ. ಅವರ ಕುಟುಂಬದಲ್ಲಿ 15 ದಿನಗಳ ಹಿಂದೆ ನಡೆದ ಸಾವು ಅದಕ್ಕೆ ಕಾರಣ. ಧರ್ಮಸ್ಥಳಕ್ಕೇ ಹೋಗಿ ಅವರಿಗೆ ಬೇಗನೆ ಗೌರವ ಸಲ್ಲಿಸಲು ನಮ್ಮ ಸಮಿತಿ ತೀರ್ಮಾನಿಸಿದೆ ಎಂದೂ ಐವಾನ್ ತಿಳಿಸಿದರು.
ಹರಿಕೃಷ್ಣ ಪುನರೂರು ಅವರು ಆರು ಎಕರೆಯಲ್ಲಿ ಮನೆ ಕಟ್ಟಿಸಿ ಸಮಾಜಕ್ಕೆ ಒಪ್ಪಿಸಿದವರು. ಸಾವಿರಾರು ಜನರಿಗೆ ಉಚಿತ ಕಣ್ಣಿನ ಚಿಕಿತ್ಸೆ ಕೊಡಿಸಿದವರು. ಪುನರೂರು ಅವರ ಸಾಧನೆಯ ಪಟ್ಟಿ ದೊಡ್ಡದು ಎಂದರು ಐವಾನ್ ಡಿಸೋಜಾ.
ದೇವದಾಸ್ ಕಾಪಿಕಾಡ್ ಅವರ ನಡೆಯೇ ನಗು ತರಿಸುತ್ತದೆ. ತುಳು ನಾಟಕ ಮತ್ತು ಸಿನಿಮಾವನ್ನು ಜಗತ್ತಿಗೇ ಮುಟ್ಟಿಸಿದವರು. ನಗುವೇ ಅವರ ಜೀವಾಳ ಎಂದು ಐವಾನ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಯರ್ ಪ್ರೇಮಾನಂದ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜೀ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಇದ್ದರು. ವೇದಿಕೆಯಲ್ಲಿ ಮಂಗಳೂರು ವಿವಿ ಉಪಕುಲಪತಿ ಯಡಪಡಿತ್ತಾಯ, ವಿನಯ ಹೆಗ್ಡೆ ಮೊದಲಾದವರು ವೇದಿಕೆಯಲ್ಲಿ ಇದ್ದರು.