ಎಐಎಲ್‌ಯು- ಅಖಿಲ ಭಾರತ ವಕೀಲರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯವರು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ಏರ್ಪಡಿಸಿದ ಸಂವಿಧಾನ ಮತ್ತು ಮತಾಂತರ ಹಾಗೂ ಕಿರಿಯ ನ್ಯಾಯವಾದಿಗಳ ಮುಂದಿರುವ ಸವಾಲುಗಳು ವಿಷಯವಾಗಿ ನಿವೃತ್ತ ನ್ಯಾಯಾಧೀಶರಾದ ಎಚ್. ಎಸ್. ನಾಗಮೋಹನ ದಾಸ್ ಮಾತನಾಡಿದರು.

ಅಖಿಲ ಭಾರತ ವಕೀಲರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಯಶವಂತ ಮರೋಳಿ‌ ಅವರು ಎಲ್ಲರನ್ನೂ ಸ್ವಾಗತಿಸಿದರು.

ವೇದಿಕೆಯಲ್ಲಿ ಬಾರ್ ಕೌನ್ಸಿಲ್‌ನ ಹಿಂದಿನ ಹಿರಿಯರಾದ ಬಿ. ನಾರಾಯಣ ಪೂಜಾರಿ, ಬಿ. ಇಬ್ರಾಹಿಂ, ಈಗಿನ ಕಾರ್ಯದರ್ಶಿ ಆದ ರಾಮಚಂದ್ರ ಉಪಸ್ಥಿತರಿದ್ದರು.

1983ರ ಬಳಿಕ ಸಾಮ್ರಾಜ್ಯಶಾಹಿ  ಜಾಗತಿಕವಾಗಿ ಬಲವಾಗಿ ಅಭಿವೃದ್ಧಿ ಶೀಲ ದೇಶಗಳ ಮೇಲೆ ದಾಳಿ ಆರಂಭಿಸಿದವು. ದೇಶದೊಳಗಿನ ಸ್ಥಿತಿ ಸಹ ಪ್ರಜಾಪ್ರಭುತ್ವದಿಂದ ವಿಮುಖವಾಗತೊಡಗಿತು. ಆಗ ದೆಹಲಿಯಲ್ಲಿ ಸಭೆ ಸೇರಿದ ದೇಶದ ವಕೀಲರ ನಾಯಕರುಗಳು ನಾವು ಕೂಡ ಪರಿಸ್ಥಿತಿಗೆ ಸ್ಪಂದಿಸುವ ತೀರ್ಮಾನ ತೆಗೆದುಕೊಂಡರು ಎಂದು ನಾಗಮೋಹನ ದಾಸ್ ಹೇಳಿದರು.

ಈಗಂತೂ ಭಾರತದಲ್ಲಿ 70 ವರುಷಗಳಿಂದ ಗಳಿಸಿದ ಉಳಿಸಿದ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಕಳೆದುಕೊಳ್ಳುವ ಸ್ಥಿತಿಯನ್ನು ತಲುಪಿದ್ದೇವೆ. ಇಂತಹ ಸ್ಥಿತಿಯಲ್ಲಿ ವಕೀಲರು ದೇಶಕ್ಕಾಗಿ ತ್ಯಾಗ ಮಾಡಬೇಕು. ಇಲ್ಲದಿದ್ದರೆ ಮುಂದಿನ ತಲೆಮಾರು ನಮ್ಮನ್ನು ಶಪಿಸುತ್ತದೆ ಎಂದು ನಿವೃತ್ತ ನ್ಯಾಯಾಧೀಶರು ಹೇಳಿದರು.

ಧರ್ಮ ಮನುಷ್ಯನನ್ನು ಸೃಷ್ಟಿಸಲಿಲ್ಲ. ಮನುಷ್ಯನೇ ಧರ್ಮವನ್ನು ಸೃಷ್ಟಿಸಿದ. ರೋಮನ್ ನಾಗರಿಕತೆಯಲ್ಲಿ ಮಾನವ ಮಾರಾಟದ ದಸ್ಯು ಪದ್ಧತಿ ಇತ್ತು. ಅದರ ವಿರುದ್ಧ ಹೋರಾಡಿ ಹುಟ್ಟಿತು ಕ್ರೈಸ್ತ ಧರ್ಮ. ಮರಳುಗಾಡಿನಲ್ಲಿ ದರೋಡೆಯ ಹಿಂಸಾಚಾರ ಇತ್ತು. ಅಲ್ಲಿ ಶಾಂತಿ ಸ್ಥಾಪಿಸಲು ಇಸ್ಲಾಂ ಧರ್ಮ ಸ್ಥಾಪನೆ ಆಯಿತು. ಭಾರತದಲ್ಲಿ ಯಜ್ಞದ ಹೆಸರಿನಲ್ಲಿ ಬಲಿ ಕೊಡುವ ಪದ್ಧತಿ ಇತ್ತು. ಅದರ ವಿರುದ್ಧ ಎದ್ದಿತು ಜೈನ ಧರ್ಮ. ಅದನ್ನು ಸರಳವಾಗಿಸಿತು ಬೌದ್ಧ. ಜಗತ್ತಿನ ಎಲ್ಲ ಧರ್ಮಗಳು ಜನರ ಕಣ್ಣೀರು ಒರೆಸಲು ಹುಟ್ಟಿದವು ಎಂದು ಜಸ್ಟಿಸ್ ನಾಗಮೋಹನ ದಾಸ್ ಹೇಳಿದರು.

ಎಂದು ಧರ್ಮವು ಅಪ್ರಜಾಪ್ರಭುತ್ವ ಆಗುತ್ತದೋ ಆಗ ಅಲ್ಲಿ ಮೂಲಭೂತ ವಾದ ಸಾಕಾರವಾಗುತ್ತದೆ. ನಾವು ಧರ್ಮ ವಿರೋಧಿಗಳಲ್ಲ. ನಾವು ಎಲ್ಲ ಧರ್ಮಗಳ ಮೂಲಭೂತವಾದದ ವಿರೋಧಿಗಳು ಎಂದು ಅವರು ಹೇಳಿದರು.

ಆಳುವವರು ಜನರ ಸಮಸ್ಯೆ ಪರಿಹರಿಸಿದರೆ ಗೆಲ್ಲವರು. ಆದರೆ ಜನರ ಸಮಸ್ಯೆಗೆ‌ ಸ್ಪಂದಿಸದೆ ರಾಜಕಾರಣಿಗಳು ಧರ್ಮದ ಉರುಳು‌ ಹಾಕಿ ಜನರನ್ನು ಸಾಮಾಜಿಕವಾಗಿ ಬಲಿ ಹಾಕುತ್ತಿದ್ದಾರೆ. ಇಂದು ಕೋಮುವಾದವು ವ್ಯಾಪಕವಾಗಿ ಬೆಳೆಯಲು ರಾಜಕೀಯದಲ್ಲಿ ಧರ್ಮ ಬೆರೆತಿರುವುದೇ ಕಾರಣ. ಭಾರತದಲ್ಲಿ ಧರ್ಮದ ಜೊತೆಗೆ ಜಾತಿ ಸಮಸ್ಯೆಯೂ ಇದೆ. ಇವೆಲ್ಲ ನಮಗೆ ಕಾಣುತ್ತಿಲ್ಲ. ವಿದೇಶಿಯರು ಭಾರತದಲ್ಲಿ ಮಾನವ ಹಕ್ಕುಗಳ ದಮನ ಎಂದು ಹೇಳಬೇಕಾಗಿದೆ ಎಂದು ಜಸ್ಟಿಸ್ ವಿವರಿಸಿದರು.

ಭಾರತಕ್ಕೆ ಬಂದ ನಾನಾ ಜನಾಂಗಗಳು ಬೆರೆತುದೇ ಭಾರತದ ಸಮಾಜ. ಹಾಗಾಗಿ 4,635 ಜಾತಿ ಮತ್ತಷ್ಟು ಉಪ ಜಾತಿಗಳು ಇವೆ. ಭಾರತದಲ್ಲಿ ಶುದ್ಧ ಜನಾಂಗ ಎಂಬುದು ಇಲ್ಲ. ನಮ್ಮೆಲ್ಲರ ಆಹಾರ ವಿಚಾರ ಬೇರೆ ಆದರೂ ನಾವೆಲ್ಲ ವರ್ಣದಿಂದ ಒಂದೇ. ಇದಕ್ಕೆ ಕಾರಣ ಜನಾಂಗೀಯ ಕಲಬೆರಕೆ. ಈ ಸತ್ಯ‌ ಅರಿತುಕೊಂಡು ದೇಶವನ್ನು ಉಳಿಸಿರಿ, ಸಂವಿಧಾನ ರಕ್ಷಿಸಿರಿ ಎಂದು ನಾಗಮೋಹನ ದಾಸ್ ತಿಳಿಸಿದರು.

ದೇಶದಲ್ಲಿ ಸಹನೆ, ಸಹಬಾಳ್ವೆ ಬಹಳ ಮುಖ್ಯ. ಇಂದು ದೇಶದಲ್ಲಿ ಅಸಹನೆಯೇ ನಮ್ಮೆಲ್ಲರ ಧರ್ಮ ಆಗುತ್ತಿರುವುದು ದುರಂತ ಎಂದೂ ಅವರು ಹೇಳಿದರು.

ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಾನವ ಹಕ್ಕುಗಳಲ್ಲಿ ಧಾರ್ಮಿಕ ಹಕ್ಕು ಸಹ ಇದೆ. ಅದಕ್ಕೆ ಭಾರತ ಸಹಿ ಹಾಕಿದೆ ಹಾಗೂ ಸಂವಿಧಾನದ ಅನುಚ್ಛೇದ 25ರಲ್ಲಿ ಸೇರಿಸಲಾಗಿದೆ. ಅದರಂತೆ ಹೊಸ ಮತ ಕೂಡ ಸ್ಥಾಪಿಸಬಹುದು. ಆದರೆ ಧಾರ್ಮಿಕ ಬಲವಂತಕ್ಕೆ ಅವಕಾಶವಿಲ್ಲ. ಇಂದು ಬರುತ್ತಿರುವ ಮತಾಂತರ ಕಾಯ್ದೆಯು ಕೆಲವರ ಅನುಕೂಲಕ್ಕೆ ಹೊರತು ಜನರಿಗಲ್ಲ ಎಂದು ಜಸ್ಟಿಸ್ ತಿಳಿಸಿದರು.

ಜಗತ್ತಿನ ಮುಸ್ಲಿಮರಲ್ಲಿ ಶಿಯಾ ಮತ್ತು ಸುನ್ನಿ ಕಾಣಿಸುತ್ತದೆ. ಆದರೆ ಭಾರತದ ಮುಸ್ಲಿಮರಲ್ಲಿ 250 ಜಾತಿಗಳು ಇವೆ. ಜಾಗತಿಕವಾಗಿ ಕ್ರೈಸ್ತ ಮತ ಪ್ರಾಟೆಸ್ಟೆಂಟ್, ಕ್ಯಾಥೊಲಿಕ್ ಇದ್ದರೆ ಭಾರತದ ಕ್ರೈಸ್ತರಲ್ಲಿ 400  ಜಾತಿಗಳು ಇವೆ. ಯಾಕೆಂದರೆ ಭಾರತದ ಸಮಾಜವೇ ವಿವಿಧತೆಯಲ್ಲಿ ಏಕತೆಯದು ಎಂದು ಸಹ ನ್ಯಾಯಾಧೀಶರು ಹೇಳಿದರು.