ಮಂಗಳೂರು, ಜೂನ್ 07: ಮಂಗಳೂರು ಬೋಳಾರ್ ಶಾದಿ ಮಹಲ್‌ನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ದ ಸೆಂಟ್ರಲ್ ಮುಸ್ಲಿಂ ಕಮಿಟಿ ರಿಜಿಸ್ಟರ್ಡ್ ಅವರಿಂದ ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ಅವರಿಗೆ ಜೂನ್ 7ರಂದು ಅಭಿನಂದನಾ ಸಮಾರಂಭ ನಡೆಯಿತು.
ಮುಸ್ಲಿಂ ಕೇಂದ್ರೀಯ ಸಮಿತಿಯ ಅಧ್ಯಕ್ಷರಾದ ಕೆ. ಎಂ. ಮಸೂದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಸಮವಸ್ತ್ರ ವಿತರಣೆ ಮೊದಲಾದ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವೇದಿಕೆಯಲ್ಲಿ ಬಿಕೆ ಹರಿಪ್ರಸಾದರೊಂದಿಗೆ, ಮಸೂದ್, ಮಾಜೀ ಶಾಸಕ ಬಾವಾ, ಮಾಜೀ ಮೇಯರ್, ಉಪಮೇಯರ್ ಮತ್ತು ಕೌನ್ಸಿಲರ್‌ಗಳು ಹಾಗೂ ಮುಸ್ಲಿಂ ಪ್ರಮುಖರು
ತುಂಬಿದ ಸಭಾಂಗಣ
ಇಬ್ರಾಹಿಂ ಕೋಡಿಜಾಲ್ ಅವರು ಎಲ್ಲರನ್ನೂ ಸ್ವಾಗತಿಸಿದರು.
ಯಾವುದೇ ಧರ್ಮ ಬೇರೆ ಯಾವುದೇ ಧರ್ಮವನ್ನು ದ್ವೇಷಿಸಬಾರದು. ಇದು ವೇದ ವಾಣಿಯೇ ಆಗಿದೆ. ನೈಜ ಹಿಂದೂ, ಮುಸ್ಲಿಂ, ಕ್ರಿಶ್ಚಿಯನರು ಖಂಡಿತವಾಗಿ ಅನ್ಯ ಧರ್ಮೀಯರನ್ನು ದ್ವೇಷಿಸಲಾರರು. ಹರಿಪ್ರಸಾದರು ಜಾತ್ಯಾತೀತರು ಮತ್ತು ಮುಲಾಜಿಲ್ಲದೆ ನ್ಯಾಯಕ್ಕೆ ಹೋರಾಡುವವರು ಎಂದು ಪ್ರಾಸ್ತಾವಿಕವಾಗಿ ಸಹ ಇಬ್ರಾಹಿಂ ಕೋಡಿಜಾಲ್ ಹೇಳಿದರು.
ಮಾಜೀ ಶಾಸಕ ಮೊಯ್ದಿನ್ ಬಾವಾ ಅವರು ಮಾತನಾಡಿ ದೇಶದ ನಾನಾ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಛಾಪು ಮೂಡಿಸಿದವರು ಹರಿಪ್ರಸಾದ್. ಬೆಂಗಳೂರು ರಾಜಕಾರಣಿ ಆದರೂ ಮೂ ಜಿಲ್ಲೆಯನ್ನು ಮರೆಯದೆ ಶಾದಿ ಮಹಲ್ ನಿಂದ ನಾರಾಯಣ ಗುರುಗಳ ಪೀಠದವರೆಗೆ ಸಾಕಷ್ಟು ನೆರವು ನೀಡಿದರು. ಮುಸ್ಲಿಂ ಸಮುದಾಯದ ಸಂಕಷ್ಟಗಳಿಗೆ ಸ್ಪಂದಿಸಿದ ಪ್ರಮುಖ ರಾಜಕಾರಣಿ ಹರಿಪ್ರಸಾದ್ ಎಂದು ಬಾವಾ ಹೇಳಿದರು
ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷರಾದ ರಶೀದ್ ಹಾಜಿ ಶುಭ ಹಾರೈಸಿ, ದೂರ ಇದ್ದರೂ ಸಂಪರ್ಕಿಸಿದವರ ಜೊತೆಗೆ ಸ್ಪಂದಿಸಿದವರು ಎಂದರು.
ಹರಿಪ್ರಸಾದರಿಗೆ ಮುಸ್ಲಿಂ ಸೆಂಟ್ರಲ್ ಸಮಿತಿಯ ಸನ್ಮಾನ, ಕೆಲವು ಮುಸ್ಲಿಂ ಸಂಘ ಸಂಸ್ಥೆಗಳು ಸಹ ಗೌರವ ಸಲ್ಲಿಸಿದರು.
ಸಮಿತಿಯ ಮತ್ತು ಸಭೆಯ ಅಧ್ಯಕ್ಷರಾದ ಕೆ. ಎಂ. ಮಸೂದ್ ಅವರು ಮಾತನಾಡಿ ಮುಸ್ಲಿಮರ ವಿರುದ್ಧ ನಡೆಯುವ ಯಾವುದೇ ದಬ್ಬಾಳಿಕೆಯ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುವವರು ಹರಿಪ್ರಸಾದರು. ಜನಾರ್ದನ ಪೂಜಾರಿಯವರ ಬಳಿಕ ಕರಾವಳಿಯಲ್ಲಿ ದೇವರೊಂದೇ ಎಂದು ಸರ್ವ ಜನಾಂಗದವರಿಗಾಗಿ ದುಡಿಯುವವರು ಹರಿಪ್ರಸಾದರು. ನಮ್ಮನ್ನು ಗೂಂಡಾ ಎನ್ನುವ ಜನರು ಕತ್ತಿ, ತ್ರಿಶೂಲ ದೀಕ್ಷೆಯಲ್ಲಿ ಪೂಜೆಯಲ್ಲಿ ತೊಡಗಿದ್ದಾರೆ. ಇವರನ್ನು ಏನೆನ್ನಬೇಕು? ನಾವು ಶಾಂತಿ ಬಯಸುವವರು, ನಮ್ಮ ಇಸ್ಲಾಂ ಧರ್ಮ ಸಹ ಅದನ್ನೇ ಬಯಸುವುದು ಎಂದು ಮಸೂದ್ ಹೇಳಿದರು.
ಸನ್ಮಾನಕ್ಕೆ ಉತ್ತರಿಸಿದ ಹರಿಪ್ರಸಾದರು ನಮ್ಮ ಜನಾರ್ದನ ಪೂಜಾರಿಯವರ ಹೆಡ್ ಮಾಸ್ತರಗಿರಿಯನ್ನು ಮಸೂದ್ ರೂಢಿಸಿಕೊಂಡು ಈ ಹಿರಿ ವಯಸ್ಸಿನಲ್ಲೂ ದುಡಿಯುತ್ತಿದ್ದಾರೆ. ನಾನು ಭಾಷಣ ರೂಢಿಸಿಕೊಳ್ಳಲು, ಕುವೆಂಪುರಂಥವರ ಕವನ ಉದಾಹರಿಸಲು ಸಾಧ್ಯವಾಗಿಸಿದವರು ಬಿ. ಎಂ. ಇದಿನಬ್ಬನವರು. ಇಲ್ಲಿ ಬ್ಯಾರಿ ಭಾಷಿಗರ ಕನ್ನಡ ಕೇಳುವಾಗ ತುಳುನಾಡಿನ ಸಂಸ್ಕೃತಿ ಮತ್ತು ಭಾಷಾ ಶುದ್ಧಿ ತುಳುಕಾಡುತ್ತಿದೆ. ಕರಾವಳಿಯಲ್ಲಿ ಈಗೀಗ ದೇಶಭಕ್ತರ ಹಾವಳಿ ಕಾಣುತ್ತಿದೆ. ಆದರೆ ಈ ದೇಶ ನಿಂತಿರುವುದು ಸಂವಿಧಾನದ ಮೇಲೆ. ಸಾವಿತ್ರಿ ಬಾಯಿ ಫುಲೆ, ಫಾತಿಮಾ ಶೇಖ್ ಮೊದಲಾದವರು ಮಹಿಳೆಯರ ವಿದ್ಯಾಭ್ಯಾಸಕ್ಕೆ ತಳಪಾಯ ಹಾಕಿದ್ದು ಧರ್ಮದ ಮೇಲಲ್ಲ, ಮಾನವೀಯತೆಯ ಮೇಲೆ ಎಂದು ಹರಿಪ್ರಸಾದ್ ಹೇಳಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಗಳಲ್ಲಿ ಮೊದಲ ಸ್ಥಾನದಲ್ಲಿ ಇರುತ್ತಿತ್ತು. ಈ ಬಾರಿ 20ನೇ ಸ್ಥಾನಕ್ಕೆ ಜಾರಲು ಕಾರಣ ಮಕ್ಕಳ ಮನಸ್ಸಿನಲ್ಲಿ ಅನ್ಯ ವಿಷ ಬಿತ್ತಿರುವುದೇ ಕಾರಣವಾಗಿದೆ. ಸ್ವಾತಂತ್ರ್ಯ ಸಿಕ್ಕಾಗ 12% ಇದ್ದ ಶಿಕ್ಷಣ ಮಟ್ಟವನ್ನು 70ರ ಸಮೀಪ ತಂದ ಆಡಳಿತಗಳು ನಮ್ಮವು. ಈಗ 20ನೇ ಸ್ಥಾನ ಎಂದರೆ ಅದು ಅವಮಾನ ಎಂದು ಹರಿಪ್ರಸಾದ್ ಹೇಳಿದರು.
ಮುಸ್ಲಿಂ ನಾಯಕರಾದ ಅಶ್ಪಕುಲ್ಲಾ ಖಾನ್ ಮೊದಲಾದವರು ಬ್ರಿಟಿಷರಲ್ಲಿ ಕ್ಷಮೆ ಕೇಳದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಮಹಾತ್ಮಾ ಗಾಂಧಿಯವರ ನಾಯಕತ್ವದ ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ಏಳು ಧರ್ಮಕ್ಕೂ ಹೆಚ್ಚಿನವರು ಕೂಡಿ ಹೆಜ್ಜೆ ಹಾಕಿ ತ್ಯಾಗ ಮಾಡಿದವರು. ನಮ್ಮದು ಪ್ರಪಂಚದಲ್ಲೇ ದೊಡ್ಡ ಸಂವಿಧಾನ. ಅಲ್ಪಸಂಖ್ಯಾತರ ಮೇಲಿನ ದಾಳಿ ಎಂದರೆ ಅದು ಸಂವಿಧಾನದ ಮೇಲಿನ ದಾಳಿ ಎಂಬುದನ್ನು ತಿಳಿಯಬೇಕು. ಸರ್ವ ಧರ್ಮ ಸಮಭಾವದಲ್ಲಿ ನಾವು ಸಾವಿರಾರು ವರುಷಗಳಿಂದ ಬದುಕಿದ್ದೇವೆ. ಅದನ್ನು ಮರು ಸ್ಥಾಪಿಸಿದರೆ ನಾವು ಮತ್ತೆ ಶಿಕ್ಷಣದಲ್ಲಿ ಮೊದಲ ಸ್ಥಾನ ಸಾಧಿಸುತ್ತೇವೆ ಎಂದು ಹರಿಪ್ರಸಾದ್ ಹೇಳಿದರು.
ಅಹಿಂಸೆ ಸಿದ್ಧಾಂತದ ಮೂಲಕ ದೇಶದ ಬಹುತ್ವ ಕಾಪಾಡಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿ ಸಹ ಸಮಾನತೆಗೇರಿ ನಿಂತಾಗ ಮಾತ್ರ ಗಾಂಧಿಯವರು ಕೊಡಿಸಿದ ಸ್ವಾತಂತ್ರ್ಯಕ್ಕೆ ಗೌರವ ಎಂದು ಅವರು ಹೇಳಿದರು.
ಯು. ಟಿ. ಖಾದರ್ ಅವರು ಶುಭ ಹಾರೈಸಿದರು.