ಪುತ್ತೂರು : ಪ್ರಾಚೀನ ಕಾಲದಿಂದಲೂ ನಿಸರ್ಗದ ಬೇರೆ ಬೇರೆ ವಿದ್ಯಮಾನಗಳನ್ನು ಚಿಕಿತ್ಸಕ ದೃಷ್ತಿಯಿಂದ ನೋಡುತ್ತ ಅವುಗಳ ಹಿಂದಿನ ನಿಯಮಗಳನ್ನು ಅರ್ಥೈಸಲು ತಮ್ಮದೇ ಬಗೆಯಲ್ಲಿ ಪ್ರಯತ್ನಿಸುತ್ತ ಭಾರತೀಯರು ಬಂದವರು. ವೀಕ್ಷಣೆ, ಮಾಹಿತಿ ಸಂಗ್ರಹಣೆ ಮತ್ತು ಮಾಹಿತಿಗಳನ್ನು ಅಧ್ಯಯನಿಸಿ ಸಿದ್ಧಾಂತಗಳನ್ನು ರೂಪಿಸುವಲ್ಲಿ ಭಾರತೀಯ ಋಷಿ ಮುನಿಗಳ ಚಿಂತನೆಗಳು ಆಧುನಿಕ ವಿಜ್ಞಾನದ ಮೂಲಭೂತ ಸಿದ್ಧಾಂತಗಳಿಗೆ ಅನುಗುಣವಾಗಿಯೇ ಇತ್ತು ಎಂದು ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ| ಮೋಹನ್ ತಲಕಾಲು ಕೊಪ್ಪ ಹೇಳಿದರು. ಅವರು ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ಸಂಘವನ್ನು ಉದ್ಘಾಟಿಸಿ ರಾಷ್ಟ್ರೀಯ ವಿಜ್ಞಾನದಿನದ ಹಿನ್ನೆಲೆಯಲ್ಲಿ ವಿಜ್ಞಾನ ಅಂದರೇನು ಮತ್ತು ಭಾರತೀಯ ವಿಜ್ಞಾನ ಅನ್ನುವುದು ಇದೆಯೇ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡುತ್ತಿದ್ದರು.
ಕ್ರಿಸ್ತ ಪೂರ್ವದ ವೇದಕಾಲದಲ್ಲಿ ಮತ್ತು ನಂತರದ ಕಾಲಘಟ್ಟದಲ್ಲಿ ವೈದ್ಯಕೀಯ, ಭೌತ ಮತ್ತು ರಸಾಯನ ವಿಜ್ಞಾನ, ಗಣಿತ ಮತ್ತು ವಿಶೇಷವಾಗಿ ಖಗೋಳ ವಿಜ್ಞಾನ ಯಾವ ಬಗೆಯಲ್ಲಿ ಭಾರತದಲ್ಲಿ ಪ್ರಚಲಿತವಾಗಿತ್ತೆಂದು ಅವರು ತಮ್ಮ ಉಪನ್ಯಾಸದಲ್ಲಿ ವಿವರಿಸಿದರು. ಭಾರತೀಯ ವಿಜ್ಞಾನಿಗಳಾದ ಆರ್ಯಭಟ್ಟ, ವರಾಹಮಿಹಿರ, ಭಾಸ್ಕರಾಚಾರ್ಯ, ಪಾಣಿನಿ, ಚರಕ, ಸುಶ್ರತರ ಕೊಡುಗೆಗಳನ್ನು ನಾವು ಮರೆಯಬಾರದು. ಎಷ್ಟೋ ಗ್ರಂಥಗಳು ನಮಗೆ ಆಲಭ್ಯವಾಗಿರುವುದೇ ಭಾರತೀಯ ಪೂರ್ವೀಕರುಜ್ಞಾನ ಶಾಖೆಗಳಿಗೆ ನೀಡಿದಕೊಡುಗೆ ಹಿನ್ನೆಲೆಗೆ ಸರಿಯಲು ಕಾರಣವೆಂದು ಡಾ| ಮೋಹನ್ ನುಡಿದರು. ಭೂಮಿ ಗೋಲಾಕಾರವಾಗಿದೆ, ಚಂದ್ರನ ಆವರ್ತನೆ, ಗ್ರಹಣಗಳ ಪರಿಕಲ್ಪನೆ ನಮ್ಮ ಪೂರ್ವೀಕರಿಗೆ ಹೇಗೆ ತಿಳಿಯಿತು ಎಂಬ ವಿವರಣೆ ನೀಡಿದಅವರು ವೃಕ್ಷಾಯುರ್ವೇದ ಎಂಬ ಪ್ರಾಚೀನ ಗ್ರಂಥವು ಸಸ್ಯಗಳ ವೈವಿದ್ಯತೆ ಮತ್ತು ಉಪಯೋಗವನ್ನು ವಿವರಿಸುವ ಅಮೂಲ್ಯ ರತ್ನವೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೋ ಅವರು ಆಧುನಿಕ ವಿಜ್ಞಾನ ರಂಗದಲ್ಲಿ ಭಾರತೀಯರು ನೀಡುತ್ತಿರುವ ಕೊಡುಗೆ ಅನನ್ಯ. ಬೆಳಕಿನ ಕಿರಣಗಳ ಚದರುವಿಕೆ ಕುರಿತು ಮೂಲಭೂತ ಸಂಶೋಧನೆ ನಡೆಸಿ ರಾಮನ್ ಪರಿಣಾಮವನ್ನು ಸಿವಿ ರಾಮನ್ ಆವಿಷ್ಕರಿಸಿದರು. ಅವರ ಆವಿಷ್ಕಾರ ಇಂದಿಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಅನ್ವಯವಾಗುತ್ತಿದೆ. ಬೋಸ್, ಸಹಾ, ಬಾಭಾ, ಸಾರಾಭಾಯಿ ಮೊದಲಾದವರು ಭಾರತೀಯ ವಿಜ್ಞಾನರಂಗದ ಅದ್ವಿತೀಯ ತಾರೆಗಳು. ಅವರ ಜೀವನ ಮೌಲ್ಯಗಳು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು ಎಂದು ಹೇಳಿದರು.
ವಿಜ್ಞಾನ ಸಂಘದ ನಿರ್ದೇಶಕರಾದ ಡಾ| ಕೃಷ್ಣ ಕುಮಾರ್ ಪಿಎಸ್ ಸ್ವಾಗತಿಸಿದರು ಮತ್ತು ಸಂಘದ ಧ್ಯೇಯೋದ್ಧೇಶಗಳ ಕುರಿತು ಪ್ರಸ್ತಾವಿಸಿದರು. ವಿಜ್ಞಾನ ದಿನದ ಪ್ರಯುಕ್ತ ನಡೆಸಿದ ಕನ್ನಡ ಮತ್ತು ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೃಪಾಲಿ ಮತ್ತು ತಂಡ ಪ್ರಾರ್ಥಿಸಿ, ಸಹನಾ ವಂದಿಸಿದರು. ಐಶ್ವರ್ಯ ನಿರ್ವಹಿಸಿದರು.