ಧರ್ಮಸ್ಥಳ : ಭಾರತ ಸರಕಾರದಿಂದ ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್‌ಸಾರ್ ಅವರು ಸಮಸ್ತ ತುಳುವರ ಪರವಾಗಿ ವಿಶೇಷವಾಗಿ ಧರ್ಮಸ್ಥಳದ ಬೀಡಿನಲ್ಲಿ ಪೂಜ್ಯ ಖಾವಂದರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹೆಗ್ಗಡೆ ಯವರು ಪ್ರತಿಕ್ರಿಯಿಸಿ ತುಳು ಭಾಷೆಯನ್ನು ರಾಷ್ಟ್ರದ ಎಂಟನೇ ಪರೀಚ್ಚೇದಕ್ಕೆ ಸೇರಿಸುವಾಗ ಭಾವನಾತ್ಮಕ ಮಾತುಗಳನ್ನಾಡದೇ, ದೇಶದ ಇತರ ಭಾಷೆಗಳನ್ನು ಸೇರಿಸುವುದರೊಂದಿಗೆ ತುಳುವಿಗೂ ಮಾನ್ಯತೆ ಸಿಗುವಂತಾಗುವ ವಾತಾವರಣ ಮೊದಲು ನಿರ್ಮಿಸಬೇಕು, ಬೇರೆ ಬೇರೆ ರಾಜ್ಯದ ಪ್ರಾದೇಶಿಕ ಭಾಷೆಗಳು ಮಾನ್ಯತೆ ಪಡೆದುಕೊಳ್ಳಲು ಸಜ್ಜಾಗಿದ್ದು ಅದರೊಂದಿಗೆ ತುಳುವನ್ನು ಸೇರಿಸಿಕೊಂಡು ತಾಂತ್ರಿಕತೆ ತೊಡಕುಗಳನ್ನು ನಿವಾರಿಸಿಕೊಂಡು ನಾವು ಮುನ್ನಡೆಯುವುದು ಉತ್ತಮ, ಎಲ್ಲರೂ ಭಾವನಾತ್ಮವಾಗಿ ಮಾತನಾಡಿದಲ್ಲಿ ಅದರಿಂದ ಪ್ರಯೋಜನ ಇಲ್ಲ ಎಂದರು.
ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಮಾತನಾಡಿ, ಪೂಜ್ಯ ಖಾವಂದರ ಅಭಿಪ್ರಾಯ ನಿಜಕ್ಕೂ ಉಲ್ಲೇಖನೀಯವಾಗಿದೆ. ಅಕಾಡೆಮಿಯಿಂದ ಡಾ.ಬಿ.ಎ.ವಿವೇಕ ರೈ ಸಹಿತ ಪ್ರಮುಖ ವಿದ್ವಾಂಸರನ್ನು ಒಂದುಗೂಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಮಟ್ಟದಲ್ಲಿ ಮಾತುಕತೆ, ಚರ್ಚೆ ನಡೆಸಿ, ಅಭಿಪ್ರಾಯ ಸಲ್ಲಿಸಿದ್ದೇವೆ. ಇದಕ್ಕೆ ಪೂರಕವಾಗಿ ನಮ್ಮ ಮುನ್ನಡೆ ಏನು ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಸುವ ಪ್ರಯತ್ನ ನಡೆಸೋಣ, ಕಳೆದ ಬಾರಿ ಒಟ್ಟು ಐದು ಭಾಷೆಗಳು ಮಾನ್ಯತೆ ಪಡೆದುಕೊಳ್ಳುವಲ್ಲಿ ಸಫಲವಾಗಿರುವಂತೆ ಈ ಬಾರಿಯೂ ಇದೇ ರೀತಿಯ ಸಂಘಟನಾತ್ಮಕವಾಗಿ ಕೇಳಿಕೊಳ್ಳೋಣ, ತುಳು ಲಿಪಿಯಲ್ಲಿ ಕೃತಿ, ಲಿಪಿಗೆ ಸಿಕ್ಕಿರುವ ರಾಜ್ಯ, ರಾಷ್ಟ್ರ ಮಾನ್ಯತೆ ಯಂತಹ ಪೂರಕ ದಾಖಲೆಗಳನ್ನು ಈಗಾಗಲೇ ಸಿದ್ಧಪಡಿಸಿದ್ದೇವೆ. ಇದಕ್ಕೆ ನಿಮ್ಮ ಸಹಕಾರ ಪ್ರಾಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಅಂಗೀಕೃತವಾದ ತುಳು ಲಿಪಿಯನ್ನು ಬೃಹತ್ ಗಾತ್ರದ ಚಾರ್ಟನ್ನು ತುಳುವೆರೆ ಕುಡ್ಲ ಸಂಘಟನೆಯ ಮೂಲಕ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅನಾವರಣಗೊಳಿಸಿ, ಸ್ಥಳದಲ್ಲಿ ಶಾಲೆಯೊಂದರ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು. ತುಳುವೆರೆ ಕುಡ್ಲದ ಅಧ್ಯಕ್ಷ ಪ್ರತೀಕ್ ಪೂಜಾರಿ ಅವರು ಈ ಚಾರ್ಟಗಳನ್ನು ಪ್ರತೀ ಶಾಲೆಗೂ ತಲುಪಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ನರೇಂದ್ರ ಕೆರೆಕಾಡು, ನಾಗೇಶ್ ಕುಲಾಲ್, ರವಿ ಪಿ.ಎಂ. ಮಡಿಕೇರಿ, ಚೇತಕ್ ಪೂಜಾರಿ ಮಂಗಳೂರು, ಸಂತೋಷ್ ಪೂಜಾರಿ ಕಾರ್ಕಳ, ತುಳುವೆರ್ ಕುಡ್ಲದ ಮಹಿಳಾ ಸಂಚಾಲಕಿ ಪೂಜಾ ಶೆಟ್ಟಿ, ತುಳುವ ಬೊಳ್ಳಿ ಪ್ರತಿಷ್ಠಾನದ ಯಾದವ ಕೋಟ್ಯಾನ್ ಕಾವೂರು, ಮತ್ತಿತರರ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಲ್ಲಿ ನೂತನ ಆಡಿಟೋರಿಯಂ ಪೂರ್ಣಗೊಳ್ಳುತ್ತಿದ್ದು, ಇದರಲ್ಲಿ ತುಳುನಾಡಿನ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ಅವಕಾಶ ಇರುವುದರಿಂದ ಧರ್ಮಸ್ಥಳದ ಯೋಜನೆಯ ಮೂಲಕ ನಿರ್ಮಿಸಲು ಮನವಿಯನ್ನು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಮಾಡಿದರು.