ಮಂಗಳೂರು, ಜು 19: ದಿನನಿತ್ಯದ ಅಗತ್ಯ ವಸ್ತುಗಳ ಮೇಲೆ ಸಹ ಜಿಎಸ್‌ಟಿ ಹಾಕುವ ಮೂಲಕವು ಜನಸಾಮಾನ್ಯರ ಬೆವರಿನ ದುಡ್ಡಿನಿಂದ ಸರಕಾರ ನಡೆಸುವ ಸ್ಥಿತಿಗೆ ಕೇಂದ್ರ ಸರಕಾರ ಮುಟ್ಟಿದೆ ಎಂದು ಮಾಜೀ ಮಂತ್ರಿ ಯು. ಟಿ. ಖಾದರ್ ಕಾರವಾಗಿ ಹೇಳಿದರು.

ಅಕ್ಕಿಗೂ ತೆರಿಗೆ, ಅಕ್ಕಿಯಿಂದ ಮಾಡುವ ಮಂಡಕ್ಕಿಗೂ ತೆರಿಗೆ, ಪೆನ್ಸಿಲ್, ಬೆಲ್ಲದವರೆಗೂ ತೆರಿಗೆ. ಆಸ್ಪತ್ರೆಯಲ್ಲಿ 5,000 ಬಿಲ್ ಆದರೆ ತೆರಿಗೆ, ಹೋಟೆಲ್‌ನಲ್ಲಿ ಅಗ್ಗದ ಕೋಣೆಗೂ ತೆರಿಗೆ, ಬ್ಯಾಂಕಿನಲ್ಲಿ ಚೆಕ್ ತೆಗೆದುಕೊಂಡರೂ 12% ತೆರಿಗೆ, ನೀವು ಬರೆಯುವ ಪೆನ್ನಿನ ಇಂಕಿಗೂ ತೆರಿಗೆ ಎಂದು ರಾಹುಲ್ ಗಾಂಧಿಯವರು ಹೇಳಿದಂತೆ ಗಬ್ಬರ್ ಸಿಂಗ್ ತೆರಿಗೆ ಎಲ್ಲರಿಗೂ ಹೊರೆಯಾಗಿದೆ ಎಂದು ಖಾದರ್ ಹೇಳಿದರು.

ಕಾಂಗ್ರೆಸ್ ಸರಕಾರ ಇದ್ದಾಗ ಮಾನವೀಯತೆಯ ಮೇಲೆ ಜನಸಾಮಾನ್ಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ತೆರಿಗೆ ಆಡಳಿತ ನೀಡಿತು. ಬಿಜೆಪಿಯು ತೆರಿಗೆಯೇ ಆಡಳಿತ ಎನ್ನುತ್ತಿದೆ. 

ದೇಶದಲ್ಲಿ ಮಹಾರಾಷ್ಟ್ರದ ಬಳಿಕ ಅತಿ ಹೆಚ್ಚು ತೆರಿಗೆ ಕೇಂದ್ರಕ್ಕೆ ಸಲ್ಲಿಸುವ ರಾಜ್ಯ ಕರ್ನಾಟಕ. ನಾವು ಕೇಂದ್ರಕ್ಕೆ ಭರಿಸುವುದರಲ್ಲಿ 46% ವಾಪಾಸು ಬರಬೇಕು. ಆದರೆ ಹತ್ತಿಪ್ಪತ್ತು ಶೇಕಡಾ ಮಾತ್ರ ಬರುತ್ತಿದೆ. ಜನರ ಮೇಲೆ ಹೀಗೆ ತೆರಿಗೆ ಹೇರುವ ಬಿಜೆಪಿ ಸರಕಾರವು ಕಾರ್ಪೊರೇಟ್ ಕಂಪೆನಿಗಳ ತೆರಿಗೆ ಇಳಿಸಿದ್ದು ಯಾಕೆ ಎಂದು ಯುಟಿಕೆ ಕೇಳಿದರು.

ಬಿಜೆಪಿಯು ಹೀಗೆ ಜನರ ಮೇಲೆ ಸವಾರಿ ಮಾಡಲು ಜನರು ಬಾಯಿ ಬಿಡದಿರುವುದೇ ಕಾರಣ. ಬಿಜೆಪಿ ಏನೂ ಉಳಿಸಿಲ್ಲ. ಇನ್ನು ಶವ ಸಾಗಿಸುವುದಕ್ಕೆ ಮಾತ್ರ ಒಂದು ತೆರಿಗೆ ಹಾಕಬೇಕಾಗಿದೆ. ಕಾಂಗ್ರೆಸ್ ಕಷ್ಟದ ಕಾಲದಲ್ಲಿ ಜಿಡಿಪಿ ತೊಂದರೆ ಇದ್ದಾಗಲೂ ಜನರ ಮೇಲೆ ಸವಾರಿ ಮಾಡಿಲ್ಲ. ಇಂದಿರಾ ಗಾಂಧಿಯವರ ಕಾಲದಲ್ಲಿ ರಿಸರ್ವ್ ಬ್ಯಾಂಕಿನಲ್ಲಿ ಮೀಸಲು ಇಟ್ಟಿದ್ದ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಬಿಜೆಪಿ ತೆಗೆದದ್ದು ಏಕೆ? ದೇಶದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದ್ದು ಮುಳುಗುವ ಹಂತ ತಲುಪಿದೆ ಎಂದು ಖಾದರ್ ಹೇಳಿದರು.

400 ರೂಪಾಯಿ ಇದ್ದ ಗ್ಯಾಸ್ ಸಿಲಿಂಡರ್ ದರವನ್ನು  ಸಾವಿರ ರೂಪಾಯಿಗೆ ಎರಿಸಿ ಸಬ್ಸಿಡಿಯನ್ನೂ ಕೊಡುತ್ತಿಲ್ಲ. ರಾಹುಲ್ ಗಾಂಧಿಯವರ ಮೇಲೆ ಕೇಸಿಲ್ಲದೆ 52 ಗಂಟೆ ವಿಚಾರಣೆ, ಅಮೃತ ಪಾಲ್ ಮೇಲೆ ಕೇಸಿದ್ದರೂ 2 ಗಂಟೆ ವಿಚಾರಣೆ. ಬಿಜೆಪಿಯ ಜನ ದ್ವೇಷದ ಸರ್ಕಾರವನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಖಾದರ್ ಹೇಳಿದರು.

ನಾವು ಸದ್ಯವೇ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಪ್ರಧಾನಿ ಹುದ್ದೆ ಬಿಟ್ಟುಕೊಟ್ಟ ಸೋನಿಯಾ ಗಾಂಧಿಯವರ ಮೇಲೂ ಎಫ್‌ಐಆರ್ ಇಲ್ಲದೆ ಯಾವ ತನಿಖೆ. ಬಿಜೆಪಿಯ ರಾಜಕೀಯ ದ್ವೇಷದ ವಿರುದ್ಧವೂ ಪ್ರತಿಭಟನೆ ಮಾಡುತ್ತೇವೆ. ಬಾಧಿತ ಜನರೂ ಭಾಗವಹಿಸಬೇಕು ಎಂದು ಖಾದರ್ ಕೇಳಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಶಕುಂತಲಾ ಶೆಟ್ಟಿ, ಮಿಥುನ್ ರೈ, ಸಾಹುಲ್ ಹಮೀದ್, ಪದ್ಮನಾಭ ನರಿಂಗಾಣ, ಸದಾಶಿವ ಉಲ್ಲಾಳ ಮೊದಲಾದವರು ಉಪಸ್ಥಿತರಿದ್ದರು.

ಜಿಎಸ್‌ಟಿ ಉತ್ತಮ ಯೋಜನೆ ಆದರೆ ಬಿಜೆಪಿಯಿಂದ ಕೆಟ್ಟದಾಗಿ ನಿರ್ವಹಣೆ ಆಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು