ಮಂಗಳೂರು, ಡಿ 28: ಸೌಹಾರ್ದದ ಮಂಗಳೂರನ್ನು ಕೊಲೆಗಾರರ ಮಂಗಳೂರು ಮಾಡಬೇಡಿ ಎಂದು ಮಂಗಳೂರಿನ ಗಡಿಯಾರ ಗೋಪುರದ ಬಳಿ ಸಿಪಿಐ ಮತ್ತು ಸಿಪಿಎಂನವರು ಒಗ್ಗಟ್ಟಿನ ಪ್ರತಿಭಟನೆಯನ್ನು ನಡೆಸಿದರು.
ಸುರತ್ಕಲ್‌ನ ಕೃಷ್ಣಾಪುರದಲ್ಲಿ ವ್ಯಾಪಾರಿ ಜಲೀಲ್ ಅವರನ್ನು ಕೊಲೆ ನಡೆಸಿದ ಸಂಘ ಪರಿವಾರದವರು ಜಿಲ್ಲೆಯಲ್ಲಿ ಅನೈತಿಕ ಪೋಲೀಸುಗಿರಿ ನಡೆಸುವುದನ್ನು ಪೋಲೀಸರು ನೇರ ಕ್ರಮ ತೆಗೆದುಕೊಳ್ಳುವುದನ್ನು ಕಲಿಯಬೇಕು. ಜಾತ್ಯಾತೀತ ದೇಶದಲ್ಲಿ ಜಾತಿಯ ಆಧಾರದಲ್ಲಿ ಪರಿಹಾರ ನೀಡುವುದನ್ನು ನಿಲ್ಲಿಸಬೇಕು ಎಂದು ಸಿಪಿಐನ ಸೀತಾರಾಮ ಬೇರಿಂಜೆ ಸ್ವಾಗತಿಸುತ್ತ ಹೇಳಿದರು.


ಸಿಪಿಎಂನ ಯಾದವ ಶೆಟ್ಟಿಯವರು ಮಾತನಾಡಿ ಕಳೆದ 30 ವರುಷಗಳಿಂದ ಸಂಘ ಪರಿವಾರದವರು ನಾನಾ ಸುಳ್ಳು ಪ್ರಚಾರ, ಹಲ್ಲೆ, ಕೊಲೆ ನಡೆಸಿದ್ದಾರೆ. ಪೋಲೀಸರು ಇವನ್ನೆಲ್ಲ ಸರಿಯಾಗಿ ಗಮನಿಸಿ ಕೆಲಸ ಮಾಡಬೇಕು. ಕೋಮುವಾದಿ ಗೂಂಡಾಗಳನ್ನು ಮಟ್ಟ ಹಾಕಬೇಕು. ಬಿಜೆಪಿ ಸರಕಾರವು ಮುಸ್ಲಿಮರ ಕೊಲೆಯಾದರೆ ಅದರಲ್ಲೂ ರಾಜಕೀಯ ಮಾಡುವುದು ಖಂಡನೀಯ, ನಾಚಿಕೆಗೇಡಿನದು ಎಂದು ಅವರು ಹೇಳಿದರು.
ಬಿ. ಶೇಖರ್, ಮುನೀರ್ ಕಾಟಿಪಳ್ಳ, ವಾಸುದೇವ ಉಚ್ಚಿಲ, ಸುಲೋಚನ ಮೊದಲಾದವರು ಉಪಸ್ಥಿತರಿದ್ದರು