ಮೂಡುಬಿದಿರೆ : ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರೀತಿ ಅಭಿಮಾನದ ಜೊತೆ ಸಂಘಟನಾತ್ಮಕವಾಗಿ ಒಂದುಗೂಡಿದರೆ ಯಾವುದೇ ಕಾರ್ಯದಲ್ಲಿಯೂ ಯಶಸ್ಸು ಪಡೆದುಕೊಳ್ಳಲು ಸಾಧ್ಯ ಎಂದು ಬಾಹುಬಲಿ ಪ್ರಸಾದ್ ನುಡಿದರು.

ಅಖಿಲ ಭಾರತ ತುಳು ಒಕ್ಕೂಟ(ರಿ.) ಮಂಗಳೂರು ಇದರ ನೇತೃತ್ವದಲ್ಲಿ ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ನಡೆದ ‘ಜಾನಪದ ಉಚ್ಛಯ – 2024 ನಮ್ಮ ತುಳುನಾಡ್ ಕಲಾ ಪಂಥ’ ಸ್ಪರ್ಧೆಯಲ್ಲಿ ಐವತ್ತು ಸಾವಿರ ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನವನ್ನು ಪಡೆದ ಮೂಡುಬಿದಿರೆ ತುಳುಕೂಟದ ಸದಸ್ಯರು ಮತ್ತು ಕಲಾವಿದರ ತಂಡಕ್ಕೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ತುಳುಕೂಟದ ಉಪಾಧ್ಯಕ್ಷರಾದ ಸಂಪತ್ ಸಾಮ್ರಾಜ್ಯ, ಒಟ್ಟು ಹದಿಮೂರು ತಂಡಗಳು ಭಾಗವಹಿಸಿದ್ದು ಮೂಡುಬಿದಿರೆ ತುಳುಕೂಟದ ತಂಡಕ್ಕೆ ಪ್ರಥಮ ಬಹುಮಾನ ಲಭಿಸಿದ್ದು, ಯಶಸ್ಸಿಗಾಗಿ ಶ್ರಮಿಸಿದ ಪ್ರಶಾಂತ್ ಕೈಕಂಬ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ತುಳುಕೂಟದ ಅಧ್ಯಕ್ಷರಾದ ತೋಡಾರುಗುತ್ತು ಧನಕೀರ್ತಿ ಬಲಿಪರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು ಒಗ್ಗಟ್ಟಿನಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಸದಸ್ಯರನ್ನು, ಸಹಕರಿಸಿದ ಸರ್ವರನ್ನೂ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು. ಸ್ಥಾಪಕಾಧ್ಯಕ್ಷರಾದ ಚಂದ್ರಹಾಸ ದೇವಾಡಿಗ, ಕಾರ್ಯದರ್ಶಿಗಳಾದ ಕೆ.ವೇಣುಗೋಪಾಲ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚೇತನಾ ಹೆಗ್ಡೆ ಅವರು ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿ ಜಿನೇಂದ್ರ ಹೆಗ್ಡೆ ವಂದಿಸಿದರು.