ಮಂಗಳೂರು:- ಸಿಕ್ಕ ಜಾಗ ಬಿಟ್ಟು ಕಂದಾಯ ಇಲಾಖೆಯ ಜಾಗದಲ್ಲಿ ಮೂರನೇ ಮಹಡಿ ಬಿಟ್ಟುಕೊಡುವ ಒಪ್ಪಂದ ಮಾಡಿಕೊಂಡ ಇಬ್ಬಂದಿತನದಿಂದಾಗಿ ಬ್ಯಾರಿ ಭವನದ ಶಂಕುಸ್ಥಾಪನೆಯನ್ನು ಮುಂದೂಡಲಾಗಿದೆ.
ಬಿಜೆಪಿ ಶಾಸಕರು ಮತ್ತು ಬ್ಯಾರಿ ಅಕಾಡೆಮಿ ಅಧ್ಯಕ್ಷರು ಈಗ ಮುಖ ಉಳಿಸಿಕೊಳ್ಳಲು ಸಾಕು ಪೋಕು ಕಾರಣ ಕೊಡುತ್ತಿದ್ದಾರೆ. ನನ್ನ ಒಂದು ಹೇಳಿಕೆಯಿಂದ ಶಂಕುಸ್ಥಾಪನೆ ನಿಲ್ಲುವುದೆಂದರೆ ನನ್ನ ಹೇಳಿಕೆ ಸರಕಾರಕ್ಕಿಂತಲೂ ಬಲಶಾಲಿಯೇ ಎಂದು ಹಾಲಿ ಶಾಸಕ ಮಾಜೀ ಮಂತ್ರಿ ಯು. ಟಿ. ಖಾದರ್ ಪ್ರಶ್ನಿಸಿದರು. ಅವರು ಸರ್ಕ್ಯೂಟ್ ಹೌಸ್ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಬ್ಯಾರಿ ಭವನಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಸರಿ ಆದರೆ ಬಿಜೆಪಿ ಶಾಸಕರ ಮಾತು ಕೇಳಿ ಎಡವಿದ್ದಾರೆ. ನನ್ನ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ಹೆಚ್ಚು ಗೆದ್ದಿದ್ದಾರೆ; ಇತರ ಕೆಲವರು ಕೂಡ ಗೆದ್ದಿದ್ದಾರೆ, ಎಲ್ಲರಿಗೂ ಅಭಿನಂದನೆಗಳು ಎಂದೂ ಖಾದರ್ ತಿಳಿಸಿದರು.
ಅಬ್ಬಕ್ಕ ಭವನಕ್ಕೆ ಜಾಗವನ್ನು ಹಿಂದೆಯೇ ನಿಕ್ಕಿ ಮಾಡಲಾಗಿದೆ. ಮೊದಲು ನೀಡಿದ ಅನುದಾನ ಸಾಲದಾದಾಗ ಸಿದ್ದರಾಮಯ್ಯನವರು ಮುಖ್ಯ ಮಂತ್ರಿ ಇದ್ದಾಗ ಅಬ್ಬಕ್ಕ ಭವನಕ್ಕೆ ಎಂಟು ಕೋಟಿ ರೂಪಾಯಿ ಮಂಜೂರು ಕೂಡ ಪಡೆದಿದ್ದೇನೆ. ಆದರೆ ಕಟ್ಟುವ ಹೌಸಿಂಗ್ ಬೋರ್ಡ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಡುವೆ ಒಪ್ಪಂದ ನನೆಗುದಿಗೆ ಬಿದ್ದು ಕೆಲಸ ತಡವಾಗಿದೆ. ಆದರೆ ಅಬ್ಬಕ್ಕ ಭವನದ ಒಂದಿಂಚು ಜಾಗ ಕೂಡ ಯಾರಿಗೂ ಹೋಗದು ಎಂದೂ ಯು. ಟಿ. ಖಾದರ್ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರಕಾರ ಈ ಗೊಂದಲಕ್ಕೆ ಉತ್ತರ ಕೊಡಬೇಕು, ಜನರಿಗೆ ಸತ್ಯ ತಿಳಿಸಬೇಕು. ಸಣ್ಣ ವಿಷಯವನ್ನು ದೊಡ್ಡದು ಮಾಡಿ ಯಾವುದೇ ಕೆಲಸ ಆಗದಂತೆ ಮಾಡುವುದು ಫ್ಯಾಸಿಸ್ಟ್ ಲಕ್ಷಣ. ಬಿಜೆಪಿ ಸರಕಾರ, ಅದರ ಕೆಲವರ ಕೆಲಸಗಳು ಕೊರೋನಾ ರೋಗಕ್ಕಿಂತಲೂ ದೊಡ್ಡ ಸಮಸ್ಯೆ ಆಗಿದೆ. ಪರಿಹಾರ ಹುಡುಕುವ ಬದಲು ಸಮಸ್ಯೆ ದೊಡ್ಡದು ಮಾಡುವ ಸರಕಾರದಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ ಎಂದು ಖಾದರ್ ಪ್ರಶ್ನಿಸಿದರು.