ಸಾವಿತ್ರಿಬಾಯಿ ಪುಲೆ ಇವರು 1831ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂನ್ ನಲ್ಲಿ ಹುಟ್ಟಿದರು. ತಂದೆ ಖಂಡೋಜಿ ತಾಯಿ ಲಕ್ಷ್ಮಿ ಬಾಯಿ.ಬದುಕಿನ ಬಂಡಿಯಲ್ಲಿ ಸಾಗುತ್ತಿರುವಾಗ ತುಂಬಾ ಕಷ್ಟಗಳು ಸಹಜ.ಅವು ಕೆಲವೊಮ್ಮೆ ಕಠೋರವಾಗಿರುತ್ತದೆ. ಅವೆಲ್ಲವನ್ನೂ ಮೆಟ್ಟಿನಿಂತು ಎದುರಿಸಿದಾಗ ಮಾತ್ರ ಸಾರ್ಥಕ್ಯಜೀವನ ಸಾದ್ಯ.ಕೆಲವೊಮ್ಮೆ  ಇಂತಹ ಕಾರ್ಯದಲ್ಲಿ ಟೀಕೆ ಟಿಪ್ಪಣಿಗಳು ಕೂಡಾ ಸಹಜ.ಎದುರಿಸಿ ಮುನ್ನುಗ್ಗುವುದೇ ಸಾಧನೆಲೋಕದ ಕಡೆ ಸ್ಫೂರ್ತಿ.

ಬಾಲ್ಯದಲ್ಲಿಯೇ ( 8 ನೇ ವಯಸ್ಸಿಗೆ )ಇವರು ಜ್ಯೋತಿ ಬಾಪುಲೆಯವರನ್ನು ವಿವಾಹವಾದರು. ಸಾವಿತ್ರಿಬಾಯಿ ಪುಲೆ ಯವರ ಬಹುತೇಕ ಯಶಸ್ಸು ಶ್ರೇಯಸ್ಸಿನ ವಿಕ್ರಮಪಾಲು ಜ್ಯೋತಿ ಬಾಪುಲೆಯಾವರದಾಗಿತ್ತು. ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿ ಬಾಪುಲೆಯವರಿಗೆ ಸಲ್ಲಬೇಕು. ಸಾವಿತ್ರಿಬಾಯಿ ಪುಲೆ ಯವರಿಗೆ ಮನೆಯೇ ಮೊದಲ ಪಾಠಶಾಲೆಯಾಗಿತ್ತು ಹಾಗೂ ಜ್ಯೋತಿ ಬಾಪುಲೆಯವರೇ ಮೊದಲ ಗುರುಗಳಾಗಿದ್ದರು. 1842 ರಲ್ಲಿ ಸಾವಿತ್ರಿಬಾಯಿ ತಮ್ಮ 13 ನೇ ವಯಸ್ಸಿನಲ್ಲಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದರು ಹಾಗೂ ಮಹಾರಾಷ್ಟ್ರದಲ್ಲಿ ತರಬೇತಿ ಪಡೆದ ಮೊದಲ ಶಿಕ್ಷಕಿ ಎಂಬ ಹಿರಿಮೆಗೆ ಪಾತ್ರರಾದರು. ಪ್ರಾಥಮಿಕದಲ್ಲಿ ಇವರು ಶ್ರೀ ಭೀಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾ ಶಾಲೆಯ ಪ್ರಧಾನ ಶಿಕ್ಷಕಿಯಾದರು.ಆ ಕಾಲದಲ್ಲಿ ಮಹಿಳೆಯೊಬ್ಬರು ಶಿಕ್ಷಕಿಯಾಗುವುದು ಧರ್ಮಕ್ಕೂ ಸಮಾಜಕ್ಕೂ ದ್ರೋಹ ಬಗೆದಂತೆ ಅನ್ನೊ ಗ್ರಹಿಕೆ ಜನರಲ್ಲಿ ಇತ್ತು. ಇವರು ಶಾಲೆಗೆ ಹೊರಟಾಗ ದಾರಿಯಲ್ಲಿ ಕೆಲವರು ಇವರ ಮೇಲೆ ಸೆಗಣಿ, ಕೆಸರು, ಕಲ್ಲುಗಳನ್ನು ಎಸೆದು ಗೇಲಿ ಮಾಡಿ ನಗುತ್ತಿದ್ದರು. ಇಂತಹ ಪರಿಸ್ಥಿತಿಯಿಂದ ಇವರು ಮನೆಯಿಂದ ಹೊರಗೆ ಹೋಗುವಾಗ ಒಂದು ಜೊತೆ ಸೀರೆಯನ್ನು ತನ್ನ ಬ್ಯಾಗ್ ನಲ್ಲಿ ಇಟ್ಟುಕೊಳ್ಳುತ್ತಿದ್ದರು. ಯಾರು ಎಷ್ಟೇ ಕಲ್ಲು ಕೆಸರು ಸೆಗಣಿ ಎರಚಿದರೂ ಕೋಪಿಸಿಕೊಳ್ಳದೆ ಅದನ್ನು ಹೂಗಳೆಂದು ಭಾವಿಸಿ ಶಾಲೆಯಲ್ಲಿ ಮಕ್ಕಳು ಬರುವ ಮೊದಲೇ ತಾನು ತಂದಿರುವ ಇನ್ನೊಂದು ಸೀರೆಯನ್ನು ಉಟ್ಟು ಪಾಠಕ್ಕೆ ಅಣಿ ಯಾಗುತ್ತಿದ್ದರು. ಬಲು ಶೀಘ್ರ ಅವಧಿಯಲಿ 18 ಪಾಠಶಾಲೆಗಳನ್ನು ಈ ದಂಪತಿಗಳು ತೆರೆದರು. ಈ ಶಾಲೆಗಳ ಜವಾಬ್ದಾರಿಗಳನ್ನು ಸ್ವತಃ ಸಾವಿತ್ರಿಬಾಯಿ ಯವರೇ ನಿರ್ವಹಿಸುತ್ತಿದ್ದರು. ಶಿಕ್ಷಕಿ,ಸಂಚಾಲಕಿ,ಮುಖ್ಯೋಪಾಧ್ಯಾಯಿನಿ ಮುಂತಾದ ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸುವುದನ್ನು ಕಂಡ ಬ್ರಿಟಿಷ್ ಗವರ್ನಮೆಂಟ್ ಇವರಿಗೆ ಮೆಚ್ಚುಗೆ ಸೂಚಿಸಿತ್ತು.

ಕೆಳವರ್ಗದ ಜನರು ನೀರನ್ನು ತರಲು ಕೆರೆಯ ಕಡೆ ಹೋದಾಗ  ಮೇಲ್ವರ್ಗದ ಜನರು ಅದನ್ನು ವಿರೋಧಿಸುತ್ತಿದ್ದರು.ಇದನ್ನು ಮನಗೊಂಡ ಸಾವಿತ್ರಿ ಬಾಯಿ ಯವರು ಕೆಳವರ್ಗದ ಜನರನ್ನು ಬೇರೆ ಇನ್ನೊಂದು ಕೆರೆಗೆ ಕರೆದುಕೊಂಡು ಹೋಗಿ ಬೇಕಾದಷ್ಟು ನೀರನ್ನು ಕೊಡಿಸಿದರು. ಶಿಶು ಹತ್ಯೆಯನ್ನು ಇವರು ವಿರೋಧಿಸುತ್ತಿದ್ದರು. ಸತ್ಯಶೋಧಕ ಮಂಡಲದ ಗತಿವಿಧಿಯಲ್ಲಿ ಇವರ ಪಾತ್ರವಿತ್ತು.

ಇವರು ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ಸತೀ ಸಹಗಮನ ಪದ್ಧತಿ ಕೇಶ ಮುಂಡನೆ ವಿರುದ್ಧ ಹೋರಾಟ ಮಾಡಿರುತ್ತಾರೆ.ಮಹಿಳೆಯರಿಗೋಸ್ಕರ ಪ್ರಪ್ರಥಮವಾಗಿ ಶಾಲೆಗಳು ಅಬಲಾಶ್ರಮ  ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಈ  ಎಲ್ಲಾ ಸಾಧನೆಗಳನ್ನು ಪರಿಗಣಿಸಿದ ಬ್ರಿಟಿಷ್ ಸರಕಾರ ಇವರಿಗೆ ' ಇಂಡಿಯನ್ ಫಸ್ಟ್ ಲೇಡಿ ಟೀಚರ್ ' (  ಅತ್ಯುತ್ತಮ ಮಹಿಳಾ ಪ್ರಥಮ ಶಿಕ್ಷಕಿ ) ಎಂಬ ಬಿರುದು ಕೊಟ್ಟು ಗೌರವಿಸಿದೆ.ಸ್ತ್ರೀಯರು ಕೂಡಾ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತನಗೊದಗಿದ ಕಷ್ಟ - ಕಾರ್ಪಣ್ಯಗಳನ್ನು ಲೆಕ್ಕಿಸದೆ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿಯನ್ನು ತೋರಿಸಿದರು.

1854 ರಲ್ಲಿ ಸಾವಿತ್ರಿ ಬಾಯಿಯವರು ಪ್ರಥಮವಾಗಿ ಕಾವ್ಯ ಪೂಲೆ (  ಕಾವ್ಯ ಅರಳಿದೆ  ) ಎನ್ನುವ ಕವನ ಸಂಕಲನವನ್ನು ಪ್ರಕಟಿಸಿದರು. ಈ ಕಾವ್ಯವು 19 ನೇ ಶತಮಾನದ ಸಮಾಜವನ್ನು ದಾಖಲಿಸುವಲ್ಲಿ ಮೈಲಿಗಲ್ಲಾಗಿದೆ. ಈ ಕೃತಿಯಿಂದಾಗಿ ಸಾವಿತ್ರಿಬಾಯಿ ಯವರು ಮರಾಠಿ ಕಾವ್ಯ ಪ್ರವರ್ಥಕಿ ಎಂದು ಕರೆಯಲ್ಪಟ್ಟರು. ಇವರ ಎರಡನೇ ಕೃತಿ ಭವನ ಕಾಶಿ ಸುಭೋದ ರತ್ನಾಕರ್  ( ಅಪ್ಪಟ ಮುತ್ತುಗಳ ಸಾಗರ ) ಇವರು ಕವನಸಂಕಲನದ ಜೊತೆಗೆ ಆತ್ಮಕಥೆ, ಪ್ರಬಂಧ ಗಳನ್ನು ಬರೆದಿರುತ್ತಾರೆ.

ಈ ದಂಪತಿಗಳಿಗೆ ಮಕ್ಕಳಿಲ್ಲವಾದರೂ ಇವರಿಬ್ಬರೂ ತುಂಬಾ ಅನ್ಯೋನ್ಯವಾಗಿ ಅವರವರ ವ್ಯಕ್ತಿತ್ವವನ್ನು ಗೌರವಿಸಿಕೊಂಡು ಜೀವನ ಸಾಗಿಸುತ್ತಿದ್ದರು . ಪೂಲೆ ದಂಪತಿಗಳು ವಿಧವೆಯ ಮಗುವನ್ನು ದತ್ತಕ್ಕೆ ತೆಗೆದುಕೊಂಡು ಆ ಮಗುವನ್ನು ಸಮಾಜದ ಸತ್ಪ್ರಜೆಯಾಗುವಂತೆ ಬೆಳೆಸಿರುತ್ತಾರೆ. 1863ರಲ್ಲಿ ಅನಾಥ ಮಕ್ಕಳಿಗಾಗಿ ಶಿಶುಕೇಂದ್ರವನ್ನು ತೆರೆದು ಆ ಮಕ್ಕಳೊಂದಿಗೆ ಪ್ರಾಂಜಲ ಮನಸ್ಸಿನಿಂದ ಬೆರೆತು ಆಸರೆಯಾಗಿದ್ದರು.

1860 ರ ದಶಕದಲ್ಲಿ ವಿಧವೆಯರ ತಲೆ ಬೋಳಿಸುವ ಪದ್ದತಿಯನ್ನು ಪ್ರಬಲವಾಗಿ ವಿರೋಧಿಸಿ, ವಿಧವೆಯರಿಗೆ,ವಿವಾಹ ಬಾಹಿರವಾಗಿ ಗರ್ಭಿಣಿಯರಾಗುವ ಮಹಿಳೆಯರಿಗಾಗಿ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿದರು.

ಈ ಬಗೆಯ ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ನೂರಾರು ಮಹಿಳೆಯರ ಮತ್ತು ಮಕ್ಕಳ ಬದುಕಿಗೊಂದು ನೆಲೆ ತಂದು ಕೊಟ್ಟರು. ಸಾವಿತ್ರಿ ಬಾಯಿ ಯವರು ಸಯೋಧಕ ಸಮಾಜದ ಅಧ್ಯಕ್ಷೆಯಾಗಿದ್ದರು.

19 ನೇ ಶತಮಾನದ ಇತಿಹಾಸದಲ್ಲಿ ಮದುವೆಗಳನ್ನು ಪೂಜಾರಿಗಳಿಲ್ಲದೆ ನೆರವೇರಿಸಿದ್ದು ಇವರ ಒಂದು ಕ್ರಾಂತಿಕಾರಿ ಹೋರಾಟವಾಗಿದೆ. ಇದಲ್ಲದೆ ಮೊಟ್ಟ ಮೊದಲ ಬಾರಿ ಕಾನೂನಿನ ನೆರವನ್ನು ಪಡೆದು ಮದುವೆ ನೆರವೇರಿಸಿದ್ದು ಎಂದಿಗೂ ಇತಿಹಾಸದಲ್ಲಿ ದಾಖಲಾಗದ ಹೋರಾಟವಾಗಿದೆ.

ಸಾವಿರಾರು ದೀಪಗಳನ್ನು ಹಚ್ಚಿದ ಆಧುನಿಕ ಶಿಕ್ಷಣದ ತಾಯಿ  ಹಾಗೂ ಇಂದಿನ ಪ್ರತಿಯೊಬ್ಬ ಭಾರತೀಯ ಅಕ್ಷರಸ್ತ ಮಹಿಳೆಯ ಮನದಲ್ಲೂ ಸಾವಿತ್ರಿ ಬಾಯಿ ಪೂಲೆ ನೆಲೆಸಿರುತ್ತಾರೆ.

ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ  ಶಾಲೆಗಳನ್ನು ಸ್ಥಾಪಿಸಿ ಕ್ರಾಂತಿಕಾರಿ ಚಳವಳಿ ಮಾಡಿದ ನಾಯಕಿ.

ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ ಅದನ್ನು ನನಸಾಗಿಸಲು ಸಾವಿತ್ರಿ ಬಾಯಿ ಯವರು ಶ್ರಮಿಸಿದ್ದಾರೆ.

ಪೂಲೆ ದಂಪತಿಯ ಪ್ರಕಾರ ಹುಟ್ಟುವ ಪ್ರತಿಯೊಂದು ಮಗುವೂ ವಿಶೇಷವಾದುದು ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು ಎಂದಿದ್ದಾರೆ. ಅವರ ಈ ಮಾತುಗಳಲ್ಲಿ ಎಷ್ಟೊಂದು ಸತ್ಯ ಅಡಗಿದೆ. ' ಮಕ್ಕಳು ದೇವರ ಸಮಾನ '.

ಇವೆಲ್ಲದರ ಜೊತೆಯಲ್ಲಿ ಮಹಿಳಾ ದೌರ್ಜನ್ಯವನ್ನು ತಡೆಯಲು ಮಹಿಳೆಯರೇ ಶಿಕ್ಷಕರಾದರೆ ಉತ್ತಮವೆಂದು  ಅರಿತು ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದರು. ಹೆಣ್ಣಿಗೆ ಶಿಕ್ಷಣ ನೀಡಿದರೆ ಆ ಕುಟುಂಬ ಸನ್ಮಾರ್ಗದತ್ತ ಸಾಗುವುದು. ಈ ಮೂಲಕ ಹೆಣ್ಣು ಮಕ್ಕಳ ದೌರ್ಜನ್ಯಕ್ಕೆ ತಿಲಾಂಜಲಿ ಇಡಬಹುದು ಎಂಬುದಾಗಿ ತಮ್ಮ ಕಾರ್ಯ ಸಾಧನೆಯ ಮೂಲಕ ತೋರಿಸಿಕೊಟ್ಟ ಅಕ್ಷರತಾಯಿ ಎಂಬುದಾಗಿ ಕರೆಯಲ್ಪಡುವ ಕೀರ್ತೀ ದಿಟ್ಟ ಮಹಿಳೆ 

" ಸಾವಿತ್ರಿ ಬಾಯಿ ಪೂಲೆ"ಯವರಿಗೆ ಸಲ್ಲುತ್ತದೆ.  ಅಜ್ಞಾನಕ್ಕೆ ಬೆಳಕಾಗಿ ಮೂಢನಂಬಿಕೆ ಕಟ್ಟುಪಾಡುಗಳಿಗೆ ತಿಲಾಂಜಲಿ ನೀಡಿ,ಅವನ್ನು ಮೆಟ್ಟಿ ನಿಂತ ಮಹಾ ಮಹಿಳೆ ಸಾವಿತ್ರಿಬಾಯಿ ಪೂಲೆ ಯವರು ತಾನೇ ಬಾಲ್ಯ ವಿವಾಹ ಪದ್ದತಿಗೆ ಒಳಗಾಗಿ ಆದರ್ಶ ಪತಿಯ ಸಹಕಾರ  ಆತ್ಮಸ್ಥೈರ್ಯದೊಂದಿಗೆ ಕ್ರಾಂತಿಕಾರಿ ಬದಲಾವಣೆ  ಪ್ರಯತ್ನಸಿದವರು.

ಒಟ್ಟಿನಲ್ಲಿ ಇವರು ಓರ್ವ ಮಹಿಳಾ ಶಿಕ್ಷಕಿಯಾಗಿ ಸಮಾಜವನ್ನು ಯಾವ ರೀತಿ ಬದಲಾವಣೆಯ ಕ್ರಾಂತಿ ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟ "ಮಾತೆ ಅಕ್ಕ ಮಹಾದೇವಿಯ " ಆದರ್ಶವನ್ನು ಪ್ರತಿಪಾದಿಸಿ ಅನುಸರಿಸಿ ತೋರಿಸಿದವರು. ಇಂದಿಗೂ ಇವರ ಹಾಕಿ ಕೊಟ್ಟ ದಾರಿ ನಮಗೆಲ್ಲರಿಗೂ ಮಾರ್ಗದರ್ಶಕ.

1893ರಲ್ಲಿ ಸಾವಿತ್ರಿ ಬಾಯಿ ಪೂಲೆ ಯವರು ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ಇಹಲೋಕ ತ್ಯಜಿಸಿದರು. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಹೋರಾಡಿದ ದಿಟ್ಟ ಧೀರ ಮಹಿಳೆಗೆ ನನ್ನ ಮನದಾಳದ ಅಂತಿಮ ನಮನಗಳು.

-ಸಂಗ್ರಹ

ಡಾ. ವಾಣಿಶ್ರೀ ಕಾಸರಗೋಡು