ಉಡುಪಿ: ಸ್ವ-ಉದ್ಯೋಗ ಪ್ರಾರಂಭಿಸಲು ಆತ್ಮ ವಿಶ್ವಾಸ, ಕಠಿಣ ಪರಿಶ್ರಮ, ಧನಾತ್ಮಕ ಚಿಂತನೆ ಹಾಗೂ ಶೃದ್ಧೆ ಬಹಳ ಮುಖ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್ ಹೇಳಿದರು.

     ಅವರು ನಗರದ ರಜತಾದ್ರಿಯ ಜಿಲ್ಲಾ ಸಂಪನ್ಮೂಲ ಕೇಂದ್ರದ ತರಬೇತಿ ಸಭಾಂಗಣದಲ್ಲಿ, ಜಿಲ್ಲಾ ಪಂಚಾಯತ್ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಕೋವಿಡ್ನಿಂದಾಗಿ ಕುಟುಂಬದ ಆಧಾರ ಸ್ತಂಭದತಿದ್ದ ಸದಸ್ಯರನ್ನು ಕಳೆದುಕೊಂಡು ಜೀವನೋಪಾಯದ ದಿಕ್ಕು ತೋಚದೇ ಸಂಕಷ್ಟದಲ್ಲಿದ್ದ ಕುಟುಂಬಗಳ ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆ ಕೈಗೊಳ್ಳುವ ಕುರಿತು ನಡೆದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

      ಮಹಿಳೆಯರು ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಆಸಕ್ತಿಯಿಂದ ಮುಂದೆ ಬಂದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿಯಲ್ಲಿ ಸ್ವ-ಸಹಾಯ ಗುಂಪುಗಳ ಮೂಲಕ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.    

     ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಾಬು ಎಂ, ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ, ಎನ್.ಆರ್.ಎಲ್.ಎಮ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ್ ಆಚಾರ್, ನಮ್ಮ ಭೂಮಿ ಸಂಸ್ಥೆಯ ಶ್ರೀನಿವಾಸ್ ಗಾಣಿಗ, ಕೃಪಾ ಹಾಗೂ ಎನ್.ಆರ್.ಎಲ್.ಎಮ್ ಜಿಲ್ಲಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು. 

     ನರೇಗಾ, ಸಂಜೀವಿನಿ ಹಾಗೂ ವಿವಿಧ ಉಚಿತ ಸ್ವ-ಉದ್ಯೋಗ ಕೌಶಲ್ಯ ತರಬೇತಿಗಳ ಕುರಿತು ಹಾಗೂ ಜಿಲ್ಲಾ ಮಕ್ಕಳ ರಕ್ಶಣಾಧಿಕಾರಿ ಕುಮಾರ್ ನಾಯ್ಕ್ ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಕುಟುಂಬಗಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

     ಎನ್.ಆರ್.ಎಲ್.ಎಮ್ ಜಿಲ್ಲಾ ವ್ಯವಸ್ಥಾಪಕಿ ನವ್ಯಾ ನಿರೂಪಿಸಿ, ಅವಿನಾಶ್ ವಂದಿಸಿದರು.