ಮಂಗಳೂರು:- ತಾನೇ ಕವಿಯಾದರೂ ಇತರ ಕವಿಗಳ ಹಾಡುಗಳನ್ನು ಹಾಡಿ ಪ್ರಸಿದ್ಧಿ ನೀಡಿದ ಬಿ. ಎಂ. ಇದಿನಬ್ಬ ಎಲ್ಲ ರಂಗದಲ್ಲಿ ಅದ್ಭುತ ಮಾದರಿ ಮತ್ತು ದಿವ್ಯ ಚೇತನ ಆಗಿದ್ದವರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭರಣ ಹೇಳಿದರು.


ನಾಗಾಭರಣರು ಬಿ. ಎಂ. ಇದಿನಬ್ಬರ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದಿನಬ್ಬರ ಬದುಕು ಸಾಮಾನ್ಯರಲ್ಲಿ ಜನಸಾಮಾನ್ಯವಾದುದು. ಇದಿನಬ್ಬರು ನಾಳಿನ ಬದುಕಿಗೆ ದಾರಿ ತೋರಿಸಿದವರು. ಇದಿನಬ್ಬರದು ದಾಖಲೆ ಆಗಬೇಕಾದ ಬದುಕು. ಅದನ್ನು ಮಾಡುವುದು ನಮ್ಮ ಅಕಾಡೆಮಿಯ ಭಾಗ್ಯ ಎಂದು ಅವರು ಹೇಳಿದರು.

ಮೊದಲ ಬಿ. ಎಂ. ಇದಿನಬ್ಬ ಪ್ರಶಸ್ತಿಯನ್ನು ಸೇರಿದವರ ಸಮ್ಮುಖ ನಾಗಾಭರಣ ಮತ್ತು ಸೇರಿದವರು ಡಾ. ಮೋಹನ ಆಳ್ವರಿಗೆ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋಹನ್ ಆಳ್ವರು ಇದಿನಬ್ಬರ ಪ್ರಶಸ್ತಿ ನನಗೆ ದೊರೆತಿರುವುದು ನನ್ನ ಗೌರವವನ್ನು ಹೆಚ್ಚು ಮಾಡಿದೆ. ಇದಿನಬ್ಬರ ಬದುಕು ತೆರೆದ ಪುಸ್ತಕ. ಕಾಲಿ ಕೈಯಲ್ಲಿ ಬಂದು ಕಾಲಿ ಕೈಯಲ್ಲಿ  ಹೋದ ಇದಿನಬ್ಬರ ಜೀವನ ಆದರಣೀಯ. ಸೌಹಾರ್ದಯುತವಾದ ಅವರ ಬದುಕು ಇಂದಿನ ಭಾರತಕ್ಕೆ ಅತ್ಯಗತ್ಯ ಎಂದು ಆಳ್ವ ಹೇಳಿದರು.

ಆರಂಭದಲ್ಲಿ ಪ್ರಾಸ್ತಾವಿಕ ಮಾತನಾಡಿದ ಬ್ಯಾರಿ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ಕೊರೋನಾ ಬೆದರಿಕೆಗೆ ಬಗ್ಗದೆ ಒಂದು ವರುಷದಲ್ಲಿ ಹಿಂದೆಂದೂ ನಡೆಯದಷ್ಟು ಕಾರ್ಯಕ್ರಮ ನಡೆಸಿರುವುದನ್ನು ವಿವರಿಸಿದರು.

ಇದರ ನಡುವೆ ಇದಿನಬ್ಬರ ಮೊದಲ ಮಗಳ ಮಗ ಶಬೀರ್ ಹಸನ್ ಅವರು ಮಾತನಾಡಿ ಸಾಮಾಜಿಕ ವ್ಯಕ್ತಿ ಆಗಿದ್ದ‌ ನನ್ನ ಅಜ್ಜ ಮನೆಯಲ್ಲಿ ಶಾಂತಿಯುತ ವಾತಾವರಣಕ್ಕೆ ಸದಾ ಶ್ರಮಿಸುತ್ತಿದ್ದರು. ಅವರ ತಾಯಿ ಮತ್ತು ಮಡದಿ ಅವರ ಸಾಮಾಜಿಕ ಬದುಕು ತಡೆಯಿಲ್ಲದೆ ನಡೆಯಲು‌ ನೆರವಾದವರು. ಇನ್ನೊಬ್ಬರ ಒಳಿತಿಗೆ ಬದುಕಿದ ಅಜ್ಜ ಮನೆಯನ್ನು ಕಡೆಗಣಿಸಿಲ್ಲ. ಆದರೆ ಆಸ್ತಿ ಪಾಸ್ತಿ ಮಾಡಿವರಲ್ಲ ಎಂದು ವಿವರಿಸಿದರು. ಆರಂಭದಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಎಲ್ಲರನ್ನೂ ಸ್ವಾಗತಿಸಿದರು.

ಅಂತಿಮವಾಗಿ ಅಧ್ಯಕ್ಷತೆ ವಹಿಸಿದ್ದವತೆ ಇದಿನಬ್ಬರನ್ನು ನೆನಪಿಸಿಕೊಂಡವರು ದ. ಕ. ಕಸಾಪ ಅಧ್ಯಕ್ಷರಾದ ಪ್ರದೀಪಕುಮಾರ ಕಲ್ಕೂರ. ನಮ್ಮ ಬದುಕಿನಲ್ಲಿ ಕನ್ನಡ ಬೀಜ ಬಿತ್ತಿದ ಕಡಲ ತಡಿಯ ನಿಜವಾದ ಬೀರ ಇದಿನಬ್ಬರು. ಸದಾ ಖಾದಿ ಶುಭ್ರ ಉಡುಗೆಯ ಇದಿನಬ್ಬರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಒಬ್ಬರೇ ಒಬ್ಬರು ಇದಿನಬ್ಬರು. ಅವರು ಕನ್ನಡ ಸಭೆ ಎಂದಲ್ಲ ಎಲ್ಲ ಸಭೆಗಳಲ್ಲಿ ಕನ್ನಡದ ಹಾಡು ಹಾಡಿದರೆ ಕೇಳುಗರ ಹೃದಯ ಅರಳುತ್ತಿತ್ತು. ಸಂತ ಅವದೂತ ಬದುಕು ಸಾಗಿಸಿದವರು ಇದಿನಬ್ಬ ಎಂದು ಕಲ್ಕೂರ ಹೇಳಿದರು.

ಸಭೆಯಲ್ಲಿ ಅತಿಥಿಯಾಗಿದ್ದ ಹರಿಕೃಷ್ಣ ಪುನರೂರು ಮಾತನಾಡಿ ಇದಿನಬ್ಬರೊಡನೆ ತನ್ನ ಒಡನಾಟವನ್ನು ನೆನಪಿಸಿಕೊಂಡರು. ಬೇಗನೆ ಇದಿನಬ್ಬರ ಬಗೆಗೆ ಪುಸ್ತಕ ತರುವುದು ನಮ್ಮೆಲ್ಲರ ಜವಾಬ್ದಾರಿ ಎಂದೂ ಅವರು  ಹೇಳಿದರು. ಉಳ್ಳಾಲ ದರ್ಗಾದ ಅಬ್ದುಲ್‌ ರಶೀದ್ ಅವರು ಕೂಡ ಮಾತನಾಡಿದರು.