ಉಜಿರೆ. ಜೂ.11: “ಪಾಶ್ಚಾತ್ಯ ದೇಶಗಳಲ್ಲಿ ಜನರು ಶೋಕಿಗಾಗಿ ಕುಡಿಯುತ್ತಾರೆ. ಆದರೆ ನಮ್ಮಲ್ಲಿ ಕುಡಿತದ ಚಟಕ್ಕೊಳಗಾದವನು ಹಿಡಿತವಿಲ್ಲದೆ ದಿನಾಲೂ ಕಂಠ ಪೂರ್ತಿ ಕುಡಿಯುತ್ತಾರೆ. ಸಾಂಸಾರಿಕ, ವ್ಯಾವಹಾರಿಕ, ಆರ್ಥಿಕ ಅಡಚಣೆಗಳು ಸ್ವಾಭಾವಿಕವಾಗಿ ಮನುಷ್ಯನನ್ನು ಬಹಳ ಗೊಂದಲಕ್ಕೀಡು ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಗಟ್ಟಿ ಮನಸ್ಸು ಮಾಡಿ ಮತಿ ಭ್ರಷ್ಠರಾಗದಂತೆ ವ್ಯಕ್ತಿತ್ವ ರೂಪಿಸುವುದು ಅತ್ಯವಶ್ಯವಾಗಿದೆ. ಹುಲಿಯು ಮನುಷ್ಯನ ರಕ್ತದ ರುಚಿ ಸವಿದ ನಂತರ ನರಭಕ್ಷಕನಾಗುತ್ತದೆ. ಅದೇರೀತಿ ನಾಲಿಗೆಗೆ ಒಂದು ಬಾರಿ ಮದ್ಯದ ರುಚಿ ಹಿಡಿದು ಮತ್ತೆಅದೇ ಬೇಕೆಂದು ಸೇವಿಸುವುದರಿಂದ ವ್ಯಸನಿಯು ಕುಡಿತದದಾಸನಾಗುತ್ತಾನೆ.
ಆಟದಲ್ಲಿ ಗೆಲುವು ಮತ್ತು ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು. ಸೋಲಿನ ದು:ಖವನ್ನು ಸಹಿಸಲು ವ್ಯಸನಕ್ಕೆ ಬಲಿ ಬೀಳಬಾರದು. ಯಾವುದೇ ಸಂದರ್ಭದಲ್ಲಿ ಕೃತಕವಾದ ಅಭ್ಯಾಸಗಳ ಅವಲಂಬನೆಯಿಂದ ತಪ್ಪಿಸಿಕೊಂಡರೆ ಜೀವನದಲ್ಲಿ ನೆಮ್ಮದಿ ಹೊಂದಲು ಸಾಧ್ಯ. ಪಂಚೇಂದ್ರಿಯಗಳ ಮೇಲೆ ಹಿಡಿತ ಸಾಧಿಸಿದವನು ಜೀವನದಲ್ಲಿ ಯಶಸ್ಸುಗಳಿಸುತ್ತಾನೆ. ಪರಿವರ್ತನೆಗೆ ಒಳಪಟ್ಟ ವ್ಯಸನಿಗಳು ಮುಂದಿನ ದಿನಗಳಲ್ಲಿ ಸ್ನೇಹಿತರ ಒತ್ತಡಕ್ಕೆ ಬಲಿಯಾಗದೆ ಕೀಳರಿಮೆಯನ್ನು ಬಿಟ್ಟು, ಸೇಡು ತೀರಿಸಿಕೊಳ್ಳದೆ, ಸಜ್ಜನರ ಸಹವಾಸದೊಂದಿಗೆ ದೃಢಸಂಕಲ್ಪದಿಂದ ಬದುಕು ರೂಪಿಸಬೇಕು” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು ಉಜಿರೆ, ಲಾೈಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖಲಾಗಿ ಮದ್ಯವರ್ಜನದ ಚಿಕಿತ್ಸೆ ಪಡೆದ 178ನೇ ವಿಶೇಷ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಶಿಬಿರದಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂದಿರುವ 106 ಮದ್ಯವ್ಯಸನಿಗಳಿಗೆ ಮನೋ ವೈದ್ಯಕೀಯ ಚಿಕಿತ್ಸೆ ಮತ್ತು ಆಪ್ತಸಲಹೆಯೊಂದಿಗೆ ಪ್ರೇರಣೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿ ಶ್ರೀ ಕೆ. ಮೋಹನ್, ಶಿಬಿರಾಧಿಕಾರಿ ದಿನೇಶ್ ಮರಾಠಿ, ಆರೋಗ್ಯ ಸಹಾಯಕಿ ರಂಜಿತಾ ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ದಿನಾಂಕ:20.06.2022 ರಿಂದ ಪ್ರಾರಂಭವಾಗಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.