ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಭದ್ರಾವತಿಯ ತುಳು ಕೂಟದ ಸಂಯೋಜನೆಯಲ್ಲಿ ತುಳು ಉತ್ಸವವು ಭದ್ರಾವತಿಯ ಬಂಟರ ಭವನದಲ್ಲಿ ಜರಗಿತು. ತುಳು ಉತ್ಸವವನ್ನು ಉದ್ಘಾಟಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಮಾತನಾಡಿ, ತುಳು ಭಾಷೆಯ ಅಭಿಮಾನದೊಂದಿಗೆ ಅಖಂಡ ಭಾರತಕ್ಕೆ ಪ್ರೇರಣೆಯಾಗುವ ಹಾಗೂ ಬ್ರಿಟೀಷರ ವಿರುದ್ಧ ಹೋರಾಟದ ಕಿಚ್ಚನ್ನು ಹಚ್ಚಿರುವ ಬಲಿದಾನಗೈದ ತುಳುನಾಡಿನ ವೀರರನ್ನು ಮರೆತಿದ್ದೇವೆ, ಇತಿಹಾಸದ ಪುಟದಲ್ಲಿ ದಾಖಲಿದ್ದರೂ ಅದಕ್ಕೆ ಮಾನ್ಯತೆ ಸಿಗುತ್ತಿಲ್ಲ ಅಕಾಡೆಮಿಯಿಂದ ಇದಕ್ಕೆ ವಿಶೇಷ ಮನ್ನಣೆ ಸಿಗುವಂತಹ ವಾತಾವರಣವನ್ನು ನಿರ್ಮಿಸುತ್ತಿದ್ದೇವೆ, ತುಳುನಾಡಿನ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಸಂಘಟನಾತ್ಮಕ ಪ್ರಯತ್ನವನ್ನು ಹೊರ ರಾಜ್ಯ, ಜಿಲ್ಲೆ, ರಾಷ್ಟ್ರದಲ್ಲಿಯೂ ನಿರಂತರವಾಗಿ ನಡೆಯುತ್ತಿರುವುದಕ್ಕೆ ಸರಕಾರದ ಮಾನ್ಯತೆಯನ್ನು ತುಳು ಅಕಾಡೆಮಿಯ ಮೂಲಕ ನೀಡುವ ಸಂಪ್ರದಾಯವನ್ನು ಈ ಬಾರಿ ಹಮ್ಮಿಕೊಂಡಿದ್ದೇವೆ ಎಂದರು.  ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ ಅವರು ಶುಭ ಹಾರೈಸಿದರು. ಭದ್ರಾವತಿ ತುಳು ಕೂಟದ ಅಧ್ಯಕ್ಷ ಪಿ. ಸುಧಾಕರ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. 

ಈ ಸಂದರ್ಭದಲ್ಲಿ ಭದ್ರಾವತಿ ತುಳು ಕೂಟವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ವಿಶೇಷವಾಗಿ ಗೌರವಿಸಲಾಯಿತು. ಅಧ್ಯಕ್ಷರಾದ ಪಿ.ಸುಧಾಕರ ಶೆಟ್ಟಿ ಅವರು ಸಂಸ್ಥೆಯ ಪರವಾಗಿ ಸನ್ಮಾನವನ್ನು ಸ್ವೀಕರಿಸಿದರು. ತುಳು ಕೂಟದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ನರೇಂದ್ರ ಕೆರೆಕಾಡು, ನಾಗೇಶ್ ಕುಲಾಲ್, ರವೀಂದ್ರ ಶೆಟ್ಟಿ ಬಳಂಜ, ಚೇತಕ್ ಪೂಜಾರಿ ಮಂಗಳೂರು, ಮಡಿಕೇರಿಯ ರವಿ ಪಿ.ಎಂ., ಸಂತೋಷ್ ಪೂಜಾರಿ ಕಾರ್ಕಳ ಮತ್ತಿತರರು ಉಪಸ್ಥಿತರಿದ್ದರು. 

ಭದ್ರಾವತಿ ತುಳು ಕೂಟದ ಉಪಾಧ್ಯಕ್ಷ ಧರ್ಮಗುರು ಪ್ರಕಾಶ್ ಪಿಂಟೋ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಡಾ.ಹರೀಶ ದೇಲಂತಬೆಟ್ಟು ಪ್ರಸ್ತಾವನೆಗೈದರು, ಕೋಶಾಧಿಕಾರಿ ಡಾ.ವೈ. ಆನಂದ್ ವಂದಿಸಿದರು, ಕಾರ್ಯದರ್ಶಿಗಳಾದ ನಾರಾಯಣ ಪೂಜಾರಿ ಮತ್ತು ಸುಬ್ಬಣ್ಣ ರೈ ಬಿ. ಕಾರ್ಯಕ್ರಮ ನಿರೂಪಿಸಿದರು.