ಉಜಿರೆ: ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಿರಿ ಗ್ರಾಮೋದ್ಯೋಗ ಸಂಸ್ಥೆಯಿಂದ ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಅವರ ಆಚಾರ-ವಿಚಾರ, ಆದಾಯ, ನಡೆ-ನುಡಿ, ಜೀವನಶೈಲಿ, ನಾಯಕತ್ವ ಸುಧಾರಣೆಯಾಗಿದೆ.ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ 25,000 ಕಾರ್ಯಕರ್ತರಲ್ಲಿ 19000 ಮಹಿಳೆಯರೇ ಇದ್ದಾರೆ ಎಂದು ಹೇಮಾವತಿ ವೀ. ಹೆಗ್ಗಡೆ ಹೇಳಿದರು.

    ಧರ್ಮಸ್ಥಳದಲ್ಲಿ ಮಂಗಳವಾರ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಅವರ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಸಾಹಿತ್ಯವು ಘಟ ದೀಪದಂತೆ ಒಳಗೆ ಬೆಳಕನ್ನು ಕೊಡುತ್ತದೆ, ಆದರೆ ಹೊರಗೆ ಕಾಣಿಸುವುದಿಲ್ಲ. ಸಾಹಿತ್ಯವೂ ಹಾಗೆ ಅಂತರಂಗದಲ್ಲಿ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಪ್ರೇರಕವಾಗಿದೆ. ಅಂಕಣ ಬರಹಗಳು ತನ್ನ ಮೇಲೆ ಗಾಢ ಪ್ರಭಾವ ಬೀರಿವೆ. ತನ್ನ ಕೃತಿಗಳಲ್ಲಿ ಪ್ರೌಢ ಪಾಂಡಿತ್ಯವಿಲ್ಲ. ಕಥೆ, ಘಟನೆಗಳು, ಹಾಗೂ ಅನುಭವದ ಹಿನ್ನೆಲೆಯಲ್ಲಿ ಸರಳವಾಗಿ ಲೇಖನಗಳು ಉತ್ತಮ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.

    ಯಾವಾಗಲೂ ಲೇಖಕರು, ನಾವು ಯಾಕಾಗಿ ಬರೆಯುತ್ತೇವೆ? ಯಾರಿಗಾಗಿ ಬರೆಯುತ್ತೇವೆ? ಎಂಬುದನ್ನು ತಿಳಿದುಕೊಂಡು ಬರೆಯಬೇಕು ಎಂದು ಹೇಳಿದರು.

    ಗ್ರಾಮಾಭಿವೃದ್ಧಿ ಯೋಜನೆಯ 4700 ಜ್ಞಾನವಿಕಾಸ ಕೇಂದ್ರಗಳಲ್ಲಿ 2200 ಗ್ರಂಥಾಲಯಗಳನ್ನು ಪ್ರಾರಂಭಿಸಿ ಮಹಿಳೆಯರಲ್ಲಿ ಓದುವ ಹವ್ಯಾಸ ಬೆಳೆಸಲಾಗುತ್ತಿದೆ. ಎಲ್ಲರೂ ಕನ್ನಡ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

    “ಮಂಜುವಾಣಿ”ಯಲ್ಲಿ ಪ್ರಕಟವಾಗುವ “ಮಗಳಿಗೊಂದು ಪತ್ರ” ಮತ್ತು “ನಿರಂತರ”ದಲ್ಲಿ ಪ್ರಕಟವಾಗುವ “ಗೆಳತಿ” ಅಂಕಣವನ್ನು ಎಲ್ಲರೂ ಆಸಕ್ತಿಯಿಂದ ಓದುತ್ತಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

    ತನ್ನ ಲೇಖನಗಳ ಮೊದಲ ಓದುಗರು ಡಿ. ವೀರೇಂದ್ರ ಹೆಗ್ಗಡೆಯವರು ಎಂದು ಹೇಳಿ ಸಕಾಲಿಕ ಮಾರ್ಗದರ್ಶನ ನೀಡುತ್ತಾರೆ ಎಂದರು. ಮಹಿಳೆಯರ ಪ್ರಗತಿಅಂದರೆ ಹರ್ಡಲ್ಸ್ ಓಟದ ಹಾಗೆ. ಮನೆಯಲ್ಲಿ, ಸಮಾಜದಲ್ಲಿ ಅನೇಕ ಅಡೆ-ತಡೆಗಳನ್ನು ಎದುರಿಸಿ ಮುಂದೆ ಸಾಗಬೇಕಾಗುತ್ತದೆ ಎಂದು ಹೇಳಿದರು.

    “ಪರಿವರ್ತನೆಯ ಪ್ರವರ್ತಕರು” ಎಂಬ ಬಿರುದನ್ನು ನೀಡಿ ಹೇಮಾವತಿ ಹೆಗ್ಗಡೆಯವರನ್ನು ಗೌರವಿಸಲಾಯಿತು.

    ಹೇಮಾವತಿ ವೀ. ಹೆಗ್ಗಡೆಯವರು ಬರೆದ ಲೇಖನಗಳ ಸಂಗ್ರಹ “ಗೆಳತಿ” ಮತ್ತು “ಮಗಳಿಗೊಂದು  ಪತ್ರ” ಕೃತಿಯನ್ನು ಲೋಕಾರ್ಪಣೆ ಮಾಡಿದ ಮಣಿಪಾಲದ “ತರಂಗ” ವಾರಪತ್ರಿಕೆ ಸಂಪಾದಕಿ ಡಾ. ಸಂಧ್ಯಾ ಪೈ ಮಾತನಾಡಿ, ಗಂಭೀರ ಸಾಹಿತ್ಯವಿಲ್ಲದೆ ಸರಳ ಶೈಲಿಯಲ್ಲಿ ಬರೆದ ಲೇಖನಗಳು ಸುಲಭ ಗ್ರಾಹ್ಯವಾಗಿವೆ. ಓದುಗರ ಮನಸ್ಸನ್ನು ಮುಟ್ಟುತ್ತವೆ. ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ-ಪೋಷಣೆ, ಪರಿಸರ ಸಂರಕ್ಷಣೆ, ಉಳಿತಾಯ, ಸ್ವಚ್ಛತೆ, ಆರೋಗ್ಯ ರಕ್ಷಣೆ ಇತ್ಯಾದಿ ವಿಷಯಗಳ ಬರೆದ ಲೇಖನಗಳು ಹೃದಯ ಸ್ಪರ್ಶಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

    ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಹೇಮಾವತಿ ಹೆಗ್ಗಡೆಯವರು ಸದಾ ಅಧ್ಯಯನಶೀಲರಾಗಿದ್ದು, ಸಾಹಿತ್ಯದಓದು, ಬರವಣಿಗೆಅವರ ಹವ್ಯಾಸವಾಗಿದೆ. ಸಂದರ್ಭೋಚಿತವಾಗಿ ಲೇಖನ, ಕಥೆ, ಕವನಗಳನ್ನು ಅರ್ಥಗರ್ಭಿತವಾಗಿ ರಚಿಸುತ್ತಾರೆ. ನಾಟಕ, ಯಕ್ಷಗಾನ, ನೃತ್ಯ ಮೊದಲದ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಹೊಸ ಪರಿಕಲ್ಪನೆಯೊಂದಿಗೆ, ಮಾರ್ಗದರ್ಶನ, ಪ್ರೇರಣೆ ನೀಡುತ್ತಾರೆ ಎಂದು ಶ್ಲಾಘಿಸಿದರು.

    ಮಹಿಳಾ ಸಬಲೀಕರಣಕ್ಕೆ ಅವರ ಕೊಡುಗೆ ಅಪಾರವಾಗಿದೆ. ಇಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ 70 ರಷ್ಟು ವಿದ್ಯಾರ್ಥಿನಿಯರು ಹಾಗೂ ಶೇ.30 ವಿದ್ಯಾರ್ಥಿಗಳು ಇದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿಯೂ ಶೇ.80 ರಷ್ಟು ಮಹಿಳಾ ಉದ್ಯೋಗಿಗಳು ಹಾಗೂ ಶೇ 20ರಷ್ಟು ಪುರುಷ ನೌಕರರು ಇದ್ದಾರೆ ಎಂದು ಹೇಳಿದರು. ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಲ್ಲಿ ಧೈರ್ಯ, ಆತ್ಮವಿಶ್ವಾಸ ಹೆಚ್ಚಾಗಿ ಎಲ್ಲರೂ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಹೆಗ್ಗಡೆಯವರು ಶ್ಲಾಘಿಸಿದರು.

    ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ಸ್ವಾಗತಿಸಿದರು. ಯೋಜನಾಧಿಕಾರಿ ಚೇತನಾ ಧನ್ಯವಾದವಿತ್ತರು.

    ಮಮತಾ ಹರೀಶ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.