ವ್ಯಕ್ತಿತ್ವಕ್ಕೆ ದೃಢತೆಯನ್ನು, ಸತ್ಯವನ್ನು, ಸೌಂದರ್ಯವನ್ನು ತಂದು ಕೊಟ್ಟು ಶಾಶ್ವತ ಜೀವನ ಮೌಲ್ಯಗಳನ್ನು ಯುವ ಜನತೆ ಅಳವಡಿಸಿಕೊಳ್ಳಬೇಕು ಎಂದು ದಿವ್ಯ ಚೇತನ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಡನೆ ಸೇರಿ ದೀಪ ಬೆಳಗಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಅಭಿಪ್ರಾಯಪಟ್ಟರು.

ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಡಾ. ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಇವರ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಜಗತ್ತಿನಲ್ಲಿ ಭಾರತೀಯತೆಯನ್ನು ಎತ್ತಿ ಹಿಡಿದ ಮೇರು ವ್ಯಕ್ತಿಯಾಗಿದ್ದವರು ಸ್ವಾಮಿ ವಿವೇಕಾನಂದರು. ಇಂದಿನ ಯುವ ಜನತೆ ದುಶ್ಚಟಗಳಿಗೆ ಬಲಿಯಾಗದೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಕಟಿಬದ್ಧರಾಗಬೇಕು ಹಾಗೂ ಇಂದಿನ ಯುವಜನತೆ ಭಾರತವು ಎಂದೂ ಮರೆಯದ ಭಾರತದ ರತ್ನಗಳಾಗಬೇಕು ಎಂದು ಅವರು ಕರೆಕೊಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ಅವರು ಯುವಜನತೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಿ ಸ್ಪಷ್ಟ ಗುರಿ ಹಾಗೂ ನಿರಂತರ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ಹೇಳಿದರು.

159ನೇ ವಿವೇಕಾನಂದ ಜಯಂತಿಯ ಬಗ್ಗೆ ನೆಹರು ಯುವಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ರಘುವೀರ್ ಸೂಟರ್‍ಪೇಟೆ ಪ್ರಸ್ತಾವನಾ ಮಾತುಗಳನ್ನು ಆಡಿದರು.

ಕಾಲೇಜು ಮುಖ್ಯ ಶೈಕ್ಷಣಿಕ ಸಲಹೆಗಾರರಾದ ಡಾ. ಪ್ರಕಾಶಚಂದ್ರ ಶಿಶಿಲ, ಹಿರಿಯ ಗ್ರಂಥಪಾಲಕಿ ಡಾ. ಶೈಲಾರಾಣಿ ಬಿ,  ಡಾ. ಶೇಷಪ್ಪ ಕೆ, ಪ್ರೊ, ಗೋಪಾಲ್ ಎಂ ಗೋಖಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಡಾ. ನವೀನ್ ಕೊಣಾಜೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು, ದ್ವಿತೀಯ ಬಿ.ಕಾಂ ಎ ತರಗತಿಯ ದೀಕ್ಷಾ ಮತ್ತು ಬಳಗದವರು ಆಶಯಗೀತೆ ಹಾಡಿದರು. ಪ್ರೊ. ಜೆಫ್ರಿ ರೊಡ್ರಿಗಸ್ ವಂದಿಸಿದರು.