ಇಂದು ಮಾತ್ರ ಪರಿಸರ ದಿನಾಚರಣೆ ಅಲ್ಲ. ವರ್ಷ ಇಡೀ ಪರಿಸರ ದಿನಾಚರಣೆ ಆದರೆ ಮಾತ್ರ ಪ್ರಕೃತಿಗೆ ನೆಮ್ಮದಿ ಲಭಿಸಬಹುದು. ಇಂದು ಮಾತ್ರ ಪರಿಸರ ದಿನಾಚರಣೆ ಮಾಡುವವರು ಅಪಾಯಕಾರಿ ಕೂಡಾ ಹೌದು. ಯಾಕೆಂದರೆ ಅವರಿಗೆ ಇಂದು ಗಿಡ ನೆಡುವ ಆತುರ. ಅದೂ ಹೇಗೆ ಬಟ್ಟೆ, ಟೈ ಮತ್ತು ಲೆದರ್ ಶೂ ಗೆ ಒಂದು ಚೂರು ಕೂಡಾ ಕೆಸರು, ಮಣ್ಣು ತಾಗದಂತೆ ಕ್ಯಾಮರಾಕ್ಕೆ ಫೋಸು ಕೊಡುತ್ತಾ ಗಿಡ ನೆಡಬೇಕು. ನೆಟ್ಟ ತಕ್ಷಣ ' ನಾವು ಪ್ರಕೃತಿ ರಕ್ಷಣೆ ಮಾಡಬೇಕು, ಗಿಡಗಳನ್ನು ಪ್ರೀತಿಸಬೇಕು ' ಎಂದು ಭಾಷಣ ಮಾಡಬೇಕು. ಆ ಕ್ಷಣದಿಂದಲೇ ನೆಟ್ಟ ಗಿಡವನ್ನು ಮರೆತು ಬಿಡುತ್ತಾರೆ. ಆಮೇಲೆ ಯಾವ ಟಿವಿ, ಯಾವ ಪತ್ರಿಕೆಯಲ್ಲಿ ಗಿಡ ನೆಟ್ಟ ಫೋಟೋ, ವರದಿ ಬಂದಿದೆ ಅಂತ ಹುಡುಕಿ ಅದನ್ನು ಫೈಲ್ ಗೆ ಹಾಕಿ ತಾನೊಬ್ಬ ಮಹಾನ್ ಪರಿಸರ ಪ್ರೇಮಿ ಅಂತ ಪಿಟೀಲು ಬಾರಿಸುತ್ತಾ ಇರುತ್ತಾನೆ. ಇಂತವರು ಗಿಡ ನೀಡುವುದಕ್ಕಿಂತ ಸುಮ್ಮನಿರುವುದು ಒಳಿತು. ಯಾಕೆಂದರೆ ಅವರು ಗಿಡ ನೆ ಡದೆ ಇದ್ದಿದ್ದರೆ ಆ ಗಿಡ ಎಲ್ಲಾದರೂ ನರ್ಸರಿಯಲ್ಲಿ ಜೀವಂತ ಆಗಿ ಇರುತಿತ್ತು

ಒಂದು ಕಡೆ ಆನೆಯನ್ನು ಗಣಪತಿ ಅಂತ ಆರಾಧಿಸುತ್ತಾರೆ ಇನ್ನೊಂದು ಕಡೆ ಅದೇ ಆನೆಗೆ ಅನನಾಸ್ ಹಣ್ಣಿನಲ್ಲಿ ಪಟಾಕಿ ಇತ್ತು ಹಿಂಸೆ ನೀಡಿ ಕೊಲ್ಲುತ್ತಾರೆ. ನಾಗರ ಪಂಚಮಿ ದಿನ ಹಾವಿಗೆ ಹಾಲು ಎರೆದು ಪೂಜಿಸುತ್ತಾರೆ ಅದೇ ಜೀವಂತ ಹಾವು ಮನೆ ಪಕ್ಕಕ್ಕೆ ಬಂದರೆ ಕೊಲ್ಲುತ್ತಾರೆ. ಹಂದಿ ವರಾಹ, ಅದು ದೈವ ಸ್ವರೂಪ ಅಂತಾರೆ, ನವಿಲು ವಿಷ್ಣುವಿನ ವಾಹನ ಅಂತಾರೆ, ಹಂದಿ, ನವಿಲನ್ನು ಕೊಂದು ತಿನ್ನುತ್ತಾರೆ. ಇಂತವರು ಗಿಡ ನೆಟ್ಟು ಪರಿಸರ ದಿನಾಚರಣೆ ಮಾಡುವುದು ಯಾವ ಕರ್ಮಕ್ಕೆ ? ಇನ್ನೂ ತುಂಬಾ ಹಾಸ್ಯಾಸ್ಪದ ಅಂದರೆ ಇಂದು ಕೆಲವು ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು ಗಿಡ ನೆಟ್ಟು ' ಸಸ್ಯ ಶ್ಯಾಮಲಾ....ಗಿಡ ಬೆಳೆಸಿ, ಕಾಡು ಉಳಿಸಿ ಅಂತ ಭಾಷಣ, ಘೋಷಣೆ ಮಾಡುತ್ತಾರೆ, ಇಂದು ರಾತ್ರಿ ಟಿಂಬರ್ ಮಾಫಿಯಾ ದವರ ಜೊತೆ ಚಿಯರ್ಸ್ ಅಂತ ಪಾರ್ಟಿ ಮಾಡಿ ಸಂಬ್ರಮಿಸುತ್ತಾರೆ. ಇಂದು ಹೆಚ್ಚಿನ ಎಲ್ಲಾ ಸಂಘ, ಸಂಸ್ಥೆಗಳು ಸಾವಿರಾರು, ಲಕ್ಷಾಂತರ, ಕೋಟಿ ವೃಕ್ಷ ಆಂದೋಲನ ಅಂತೆ....!!?? ಈ ರೀತಿ ಜೂನ್ 5 ರಂದು ಪ್ರತೀ ವರುಷ ಕೋಟಿ ಕೋಟಿ ಗಿಡ ನೆಟ್ಟ ಫಲಿತಾಂಶವಾಗಿ ಇಂದು ಕರ್ನಾಟಕ ಇಡೀ ದಟ್ಟ ಅರಣ್ಯ ವಾಗಿ ಬೆಳೆಯಬೇಕಿತ್ತು. ಎಲ್ಲಿವೆ ನೆಟ್ಟ ಗಿಡಗಳು ? ಎಲ್ಲಿವೆ ಮರಗಳು ? ಇಂದು ನೆಟ್ಟ ಗಿಡಗಳು ಒಂದು ವಾರದ ನಂತರ ಅದರ ಕುತ್ತಿ ಸಹಿತ ಇರುವುದಿಲ್ಲ. ಕೆಲವರು ನಮ್ಮದು10 ನೆಯ ವರುಷದ ವನ ಮಹೋತ್ಸವ ಅಂತ ಬ್ಯಾನರ್ ಹಾಕಿ ಗಿಡ ನೆಟ್ಟಿರುತ್ತಾರೆ, ಆದರೆ ಈ 10 ವರ್ಷಕ್ಕೂ ಹೊಂಡ ಮಾತ್ರ ಒಂದೇ ! .ಎಷ್ಟು ಲಕ್ಷ ಗಿಡ ನೆಟ್ಟಿದ್ದೇರಿ ಎಂಬುದು ಮುಖ್ಯವಲ್ಲ, ನೆಟ್ಟ ಗಿಡಗಳ ಬಗ್ಗೆ ಎಷ್ಟು ಲಕ್ಷ್ಯ ವಹಿಸಿದ್ದೀರಿ ಎಂಬುದು ಮುಖ್ಯ ಎಂದು ಹೇಳುವ ವೃಕ್ಷಮಾತೆ, ಪದ್ಮಶ್ರೀ ತುಳಸೀ ಗೌಡರ ಮಾತು ಇಂದಿನ ಫ್ಯಾಷನ್ ಪರಿಸರ ಪ್ರೇಮಿಗಳಿಗೆ ಕಲಿಯಬೇಕಾದ ಒಂದು  ಎಚ್ಚರಿಕೆ. ಇಂದು ಮಾತ್ರ ಅಲ್ಲ  ವರ್ಷ ಇಡೀ ಆಚರಿಸುವ ಪರಿಸರ ದಿನಾಚರಣೆಗೆ ಲಕ್ಷ ವೃಕ್ಷ ವಂದನೆಗಳು.


                                                                                                                                                                                                                                                                    By ದಿನೇಶ್ ಹೊಳ್ಳ