ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ವತಿಯಿಂದ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನವನ್ನು ಬುಧವಾರ ರೆಡ್ ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್‍ನಲ್ಲಿ ಆಚರಿಸಲಾಯಿತು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ನವದೆಹಲಿಯ ಮ್ಯಾನೆಜಿಂಗ್ ಕಮಿಟಿ ಸದಸ್ಯ ಬಸ್ರೂರು ರಾಜೀವ್ ಶೆಟ್ಟಿ, ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರಲ್ಲಿ ಮೋಹನ್ ದಾಸ್ ಕರಮಚಂದ ಗಾಂಧಿ ಅಗ್ರಗಣ್ಯರು. ಇದೇ ಕಾರಣಕ್ಕೆ ಅವರನ್ನು ರಾಷ್ಟ್ರಪಿತ, ಮಹಾತ್ಮಾ ಗಾಂಧಿ ಎಂದು ಕರೆಯಲಾಗುತ್ತದೆ.  ಈ ಜಯಂತಿಯನ್ನು ನಾವು ವಿಶ್ವ ಅಹಿಂಸಾ ದಿನವಾಗಿ ಆಚರಿಸುತ್ತಿದ್ದು, ಅವರ ಸತ್ಯ, ಅಹಿಂಸೆ, ಕಾಯಕ ನಿಷ್ಠೆ ಹಾಗೂ ಸ್ವಚ್ಚತೆ ಮೌಲ್ಯಗಳನ್ನು ಅನುಸರಿಸಲು ನಿತ್ಯ ಪ್ರಯತ್ನ ಮಾಡಬೇಕು.  ಶಾಂತಿ, ಸಾಮರಸ್ಯ ಹಾಗೂ ಸಹೋದರತ್ವಕ್ಕೆ ಗಾಂಧೀಜಿ ಬದ್ಧತೆ ಅಚಲವಾಗಿದ್ದು, ಬಡವರಲ್ಲಿ ಬಡವರಿಗೆ ಅಧಿಕಾರ ನೀಡುವ ಜಗತ್ತನ್ನು ಅವರು ಕಲ್ಪಿಸಿಕೊಂಡವರಾಗಿದ್ದರು. ಅವರ ಆದರ್ಶಗಳು ನಮಗೆ ಮಾರ್ಗದರ್ಶಕ ಹಾಗೂ ಬೆಳಕು. ರಕ್ತ ಮಾಂಸಗಳಿಂದ ತುಂಬಿದ ಇಂಥ ವ್ಯಕ್ತಿಯೊಬ್ಬರು ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ್ದರು ಎನ್ನುವುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ,” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಗೌರವ ಖಜಾಂಚಿ ಟಿ. ಚಂದ್ರಶೇಖರ್, ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ ಮತ್ತು ಕೆ. ಜಯರಾಮ್ ಆಚಾರ್ಯ, ಯುವರೆಡ್ ಕ್ರಾಸ್ ಡಿಸ್ಟ್ರಿಕ್ಟ್ ಕೋ-ಆರ್ಡಿನೇಟರ್ ಉಪಸ್ಥಿತರಿದ್ದು, ಮಹಾತ್ಮ ಗಾಂಧೀಜಿಯವರಿಗೆ ಪುಷ್ಪ ನಮನವನ್ನು ಸಲ್ಲಿಸಿದರು.