ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಮಹಾತ್ಮಾ ಗಾಂಧಿ ತತ್ವಪ್ರಣೀತ ವಾರ್ಷಿಕ ವಿಶೇಷ ಶಿಬಿರದಲ್ಲಿ ಬುಧವಾರ “ಗಾಂಧೀಜಿ: ಕೆಲವು ಟಿಪ್ಪಣಿಗಳು”ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಂಸ್ಕೃತಿ ಚಿಂತಕ ಪ್ರೊ. ಮುರಳೀಧರ ಉಪಾಧ್ಯ ಉಪನ್ಯಾಸದಲ್ಲಿ ಮಾತನಾಡಿ, ಇಂದು ಗಾಂಧೀಜಿಯವರನ್ನು ವೈಭವೀಕರಿಸುವುದು ಅಲ್ಲ; ಅವರು ಕೃಷ್ಣನ ಅವತಾರವೂ ಅಲ್ಲ ಎಂದು ತಿಳಿಸುತ್ತಾ ಗಾಂಧೀಜಿ-ಕೃಷ್ಣನ ಬದುಕಿನ ಸಮೀಕರಣದ ಮೂಲಕ ಗಾಂಧೀಜಿಯವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟರು. ಚರಕ ಸ್ವದೇಶಿ ಚಳವಳಿಯ ಅಸ್ತ್ರವಾಗಿದ್ದು, ಕೈಮಗ್ಗದ ನಾಶ ಬ್ರಿಟಿಷರಿಂದ ಆರಂಭವಾಯಿತು. ಇಂದು ಕೈಮಗ್ಗದ ನೇಕಾರರು ಸಂಕಷ್ಟದಲ್ಲಿದ್ದಾರೆ. ಜೊತೆಗೆ ಗಾಂಧಿಯ ನೆನಪಿನಲ್ಲಿ ಹೋರಾಟವನ್ನು ಮಾಡುತ್ತಿರುತ್ತಾರೆ. ಯಂತ್ರ ಬೇಕು ಸರಿ; ಆದರೆ ಅದು ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಬಾರದು ಎಂದು ಗಾಂಧೀಜಿಯವರು ಪ್ರತಿಪಾದಿಸಿ, ಯಾಂತ್ರೀಕರಣಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಸದಾನಂದ ಪ್ರಭು ಮಾತನಾಡಿ, ಇಂದು ನಾವು ಇತಿಹಾಸವನ್ನು ಮರೆಯುವ ಸಂದರ್ಭದಲ್ಲಿದ್ದೇವೆ. ಗಾಂಧಿ ಪ್ರಪಂಚ ಮೆಚ್ಚುವ ವ್ಯಕ್ತಿ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಮಾತನಾಡಿ, ಗಾಂಧೀಜಿ ಎಂದರೆ ಆದರ್ಶ ಎಂಬ ಕಾಲಘಟ್ಟ ಹಾಗೂ ವ್ಯಂಗ್ಯ ಎಂಬ ಕಾಲಘಟ್ಟವನ್ನು ಹಾದು ಬಿಕ್ಕಟ್ಟಿನ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾಗಿ ಗಾಂಧಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಪ್ರವೀಣ ಶೆಟ್ಟಿ, ಸುಭಾಷ್ ಹೆಚ್. ಕೆ., ಕಾಲೇಜಿನ ಎಲ್ಲಾ ಬೋಧಕರು, ಬೋಧಕೇತರು ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಎನ್.ಎಸ್.ಎಸ್. ಸ್ವಯಂಸೇವಕರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ಸ್ವಯಂಸೇವಕ ತಾದೇಶ್ ಸ್ವಾಗತಿಸಿದರು, ಸಂಗೀತಾ ಟಿ. ನಿರೂಪಿಸಿದರು. ಸುಚೀಂದ್ರ ವಂದಿಸಿದರು.