ಉಡುಪಿ (ಜೂನ್ 26):  ಉಡುಪಿ ಜಿಲ್ಲೆಯಲ್ಲಿ ರಕ್ತದಾನದ ಕೊರತೆ ಆಗದಂತೆ ಸಂಘ-ಸoಸ್ಥೆಗಳು, ರಕ್ತದಾನಿಗಳೆಲ್ಲ ಸೇರಿ ಕೊರೋನಾದ ಸಂದರ್ಭದಲ್ಲೂ ಹಲವಾರು  ರಕ್ತದಾನ ಶಿಬಿರಗಳನ್ನು ಮಾಡಿ  ಕೊರೋನಾ ಹೋರಾಟದಲ್ಲಿ ಸಾಥ್ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.

     ಅವರು ಶುಕ್ರವಾರ,  ಜಿಲ್ಲಾಡಳಿತ ಉಡುಪಿ, ಜಿಲ್ಲಾಪಂಚಾಯತ್ ಉಡುಪಿ, ಜಿಲ್ಲಾ ಪೊಲೀಸ್ ಇಲಾಖೆ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ) ಉಡುಪಿ, ಆರೋಗ್ಯ ಇಲಾಖೆ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ ಸಂಘ ಉಡುಪಿ, ಬಡಗಬೆಟ್ಟು ಕೊ ಆಪರೇಟಿವ್ ಸೊಸೈಟಿ ಉಡುಪಿ, ಹರ್ಷ ಪ್ರೈ.ಲಿ, ಪೂರ್ಣಪ್ರಜ್ಞ ಕಾಲೇಜು, ಎನ್.ಎಸ್.ಎಸ್ ವಿಭಾಗ ಉಡುಪಿ, ವೀರಕೇಸರಿ ಸಂಘಟನೆ ಸಾಸ್ತಾನ, ಕೋಡಿತಲೆ, ಕರಾವಳಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಘ ಗಂಗೊಳ್ಳಿ ಮತ್ತು ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆದ ,ವಿಶ್ವ ರಕ್ತದಾನಿಗಳ ದಿನಾಚರಣೆ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಮಹನೀಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ , ಅತೀ ಹೆಚ್ಚು ರಕ್ತದಾನ ಮಾಡಿದವರನ್ನು ಸನ್ಮಾನಿಸಿ ಮಾತನಾಡಿದರು

    ಜಿಲ್ಲಾಡಳಿತದ ಮುಖ್ಯ ಉದ್ದೇಶ ಸಮುದಾಕ್ಕೆ ಯಾವುದೇ ಕಾರಣಕ್ಕೂ ಕೊರೋನ ಹರಡಬಾರದು, ಸೋಂಕನ್ನು ತಡೆಯಬೇಕೆಂಬುದು ಮುಖ್ಯ ಗುರಿಯಾಗಿದೆ. ಈಗಾಗಲೇ ಜನರಲ್ಲಿ ಕೊರೋನಾ ಮುಗಿಯಿತೆಂಬ ಮನೋಭಾವನೆಯಲ್ಲಿದ್ದಾರೆ, ಕೊರೋನಾ ಮುಗಿದಿಲ್ಲ. ಕೆಲವು ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ತಿರುಗಾಡುತ್ತಿದ್ದಾರೆ ಅಂಥವರ ವಿರುದ್ಧ ಮುಂದಿನ ದಿನಗಳಲ್ಲಿ ದಂಡವನ್ನು ಮಾತ್ರವಲ್ಲದೇ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು, ಮಾಸ್ಕ್ ಹಾಕದೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದವರು ಸೋಂಕನ್ನು ಹರಡುವ ಏಜೆಂಟ್‌ಗಳಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಅತೀ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳಾದ , ರಯ್ಯನ್ ಫರ್ನಾಂಡೀಸ್ ಕುರ್‌ಕಲ್, ನಂದನ್ ಶೆಟ್ಟಿ ಅಮಾಸ್ಯೆಬೈಲು, ಮಣಿಕಂಠ ಖಾರ್ವಿ ಸಾಸ್ತಾನ, ಗಾಯತ್ರಿ ಉಪಾಧ್ಯಾಯ ಉಡುಪಿ, ಸುಧಾಕರ ನಾಯಕ್ ಕಬಿಯಾಡಿ, ಗಿರಿಜ ಸುವರ್ಣ ಸಾಲಿಗ್ರಾಮ ಅವರನ್ನು ಜಿಲ್ಲಾಧಿಕಾರಿ ಸನ್ಮಾನಿಸಿ ಗೌರವಿಸಿದರು.

      ಕಾರ್ಯಕ್ರಮದಲ್ಲಿ ಎಎಸ್ಪಿ ಕುಮಾರಚಂದ್ರ, ಡಿಹೆಚ್‌ಓ ಡಾ. ಸುಧೀರ್‌ಚಂದ್ರ ಸೂಡ , ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು ಎಸ್.ವಿ ಜಿಲ್ಲಾ ಸರ್ಜನ್ ಮಧುಸೂದನ ನಾಯಕ್ , ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಮಣ್ಯ ಶೇರೆಗಾರ್, ಬಡಗಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮತ್ತಿತರರು ಉಪಸ್ಥಿತರಿದ್ದರು.

    ಮಂಜುನಾಥ್ ನಿರೂಪಿಸಿ, ಮಹಾಬಲೇಶ್ವರ ಜಿಲ್ಲಾ ಮೇಲ್ವಿಚಾರಕರು ವಂದಿಸಿದರು.