ಉಡುಪಿ : ಕರಾವಳಿ ಪ್ರದೇಶಗಳಲ್ಲಿ ಮುಂಗಾರು ಆರಂಭವಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಮುಂದಿನ ಐದು ದಿನ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ.
ಹವಾಮಾನ ಇಲಾಖೆ, ಜೂನ್ 20 ರವರೆಗೂ ಬಿರುಸಿನ ಮಳೆಯಾಗುವ ಸೂಚನೆಯನ್ನು ನೀಡಿದೆ. ಹೀಗಾಗಿ ಜಿಲ್ಲೆಯಲ್ಲಿ ಇಂದು ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ವಾರದವರೆಗೂ ಧಾರಾಕಾರ ಮಳೆ ಸುರಿಯಲಿದೆ ಎಂದೂ ತಿಳಿಸಲಾಗಿದೆ.
ಐದು ದಿನಗಳ ಕಾಲ ಗುಡುಗು ಮಿಶ್ರಿತ ಬಿರುಸಿನ ಮಳೆ ಆಗಲಿದ್ದು, ಅಲೆಗಳ ಅಬ್ಬರವೂ ಜೋರು ಇರಲಿದೆ, ಮೀನುಗಾರಿಕೆ ನಡೆಸುವಾಗ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಸಮುದ್ರ ತೀರಕ್ಕೆ ಸಾರ್ವಜನಿಕರು ತೆರಳಬಾರದು ಎಂದು ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.