ಬೆಂಗಳೂರು : ಕೊರೊನಾ ವೈರಸ್ ಮಹಾಮಾರಿಗೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮೊದಲ ಪೊಲೀಸ್ ಅಧಿಕಾರಿ ಬಲಿಯಾಗಿದ್ದಾರೆ. ಹಾಗೂ ಮತ್ತೊಂದು ಎಎಸ್‌ಐಗೆ ಕೊರೊನಾ ಪಾಸಿಟಿವ್ ಬಂದಿದೆ.

ಬೆಂಗಳೂರಿನ ವಿವಿ ಪುರಂ ಪೊಲೀಸ್ ಠಾಣೆಯ ಸಂಚಾರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಎಸ್‌ಐ ಜೂನ್ 13 ರಂದು ಮೃತಪಟ್ಟಿದ್ದರು. ಡಯಾಬಿಟೀಸ್‌ನಿಂದ ಬಳಲುತ್ತಿದ್ದ ಎಎಸ್‌ಐ ಮನೆಯಲ್ಲೇ ಕೊನೆಯುಸಿರೆಳೆದಿದ್ದರು.

ಸಾವಿನ ಬಳಿಕ ಮರಣೋತ್ತರ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಅಧಿಕಾರಿಗೆ ಕೊರೊನಾ ತಗುಲಿರುವುದು ದೃಢವಾಗಿತ್ತು. ಇದೇ ಪೊಲೀಸ್ ಠಾಣೆಯ ಸಂಚಾರಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತೊಬ್ಬ ಎಎಸ್‌ಐ ಅಧಿಕಾರಿಗೂ ಕೊರೊನಾ ಪಾಸಿಟಿವ್ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಮೂರು ದಿನಗಳ ಹಿಂದೆ ರೋಗ ಲಕ್ಷಣ ಕಾಣಿಸಿಕೊಂಡಿದ್ದ ಹಿನ್ನೆಲೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ, ಪರೀಕ್ಷೆಯ ವರದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

ಇಬ್ಬರು ಎಎಸ್‌ಐಗೆ ಕೊವಿಡ್ ಖಚಿತವಾಗಿರುವ ಹಿನ್ನೆಲೆ ಇಡೀ ಪೊಲೀಸ್ ಠಾಣೆಯನ್ನು ಮುಚ್ಚಲಾಗಿದ್ದು, ಎಲ್ಲರನ್ನೂ ಕ್ವಾರಂಟೈನ್ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.