ಉಡುಪಿ ಮಾರ್ಚ್ 5 (ಕರ್ನಾಟಕ ವಾರ್ತೆ): ಈ ಬಾರಿಯ ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಮಂಗಳೂರು ಮತ್ತು ಉಡುಪಿಯಲ್ಲಿ ಎರಡು ಹೊಸ ಮೀನುಗಾರಿಕಾ ಬಂದರು ರಚನೆಗೆ ಅನುಮೋದನೆ ಮತ್ತು ಮಹಿಳಾ ಮೀನುಗಾರರಿಗೆ ಉಚಿತ ದ್ವಿಚಕ್ರ ವಾಹನ ವಿತರಿಸುವ ಯೋಜನೆ ಹಾಗೂ ಕುಡಿಯುವ ನೀರಿಗೆ ರೂ.700 ಕೋಟಿ ಮೀಸಲಿಟ್ಟಿರುವುದು,  ಕೃಷಿ ಅಭಿವೃದ್ಧಿಗೆ ರೂ.32.259 ಕೋಟಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯ ಅಭಿವೃದ್ಧಿಗೆ ರೂ.26.930 ಕೋಟಿ, ಗ್ರಾಮೀಣಾಭಿವೃದ್ಧಿಗೆ ರೂ.15.595 ಕೋಟಿ ಮೀಸಲಿಡಲಾಗಿದ್ದು, ಸರಕಾರಿ ನೌಕರರ ಆರೋಗ್ಯ ಹಿತದೃಷ್ಟಿಯಲ್ಲಿಟ್ಟುಕೊಂಡು ನಗದು ರಹಿತ ಆರೋಗ್ಯ ಸೇವೆಯನ್ನು ಒದಗಿಸಿಕೊಡಲಾಗಿರುವುದು ಸೇರಿದಂತೆ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಮೊತ್ತದ ಬಜೆಟ್ ನೀಡಿರುವುದು ಜನಸಾಮಾನ್ಯರಿಗೆ ಪೂರಕವಾದ ಬಜೆಟ್ ಆಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.