ಉಡುಪಿ :  2019-20 ನೇ ಸಾಲಿನಲ್ಲಿ ಸರ್ಕಾರದ ವತಿಯಿಂದ ಮುಂಗಾರು/ಹಿಂಗಾರು/ಬೇಸಿಗೆ ಹಂಗಾಮಿನಲ್ಲಿ ಬೆಳೆ ಸಮೀಕ್ಷಾ ಕಾರ್ಯವನ್ನು ಇ-ಆಡಳಿತ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಬಳಸಿ ಕೈಗೊಳ್ಳಲಾಗುತ್ತಿದೆ.

ಬೆಳೆ ಸಮೀಕ್ಷೆ ಕಾರ್ಯಕ್ಕೆ ಸರ್ಕಾರಿ ಅಧಿಕಾರಿಗಳ ಉಸ್ತುವಾರಿಯಲ್ಲಿ ಮಾಹಿತಿ ತಂತ್ರಾಜ್ಞಾನದ ಬಳಕೆಯ ಬಗ್ಗೆ ತಿಳುವಳಿಕೆಯಿರುವ ಸ್ಥಳೀಯ ಯುವಕರ ಸೇವೆಯನ್ನು (ಖಾಸಗಿ ನಿವಾಸಿಗಳು) ಬಳಸಿಕೊಳ್ಳಲು ಅವಕಾಶ ಕಲ್ಲಿಸಲಾಗಿದೆ. ಬೆಳೆ ಸಮೀಕ್ಷೆಯಲ್ಲಿ ಉಪಯೋಗಿಸುವ ಮೊಬೈಲ್ ಆಪ್‍ನ ಬಗ್ಗೆ ಜಿಲ್ಲಾಡಳಿತದ ವತಿಯಿಂದ ತರಬೇತಿ ನೀಡಲಿದ್ದು, ಸಮೀಕ್ಷಕರಿಗೆ ಪ್ರತಿ ತಾಕಿಗೆ 10 ರೂ. ನಂತೆ ಗೌರವಧನವನ್ನು ಒದಗಿಸಲಾಗುವುದು. ಬಹು ಬೆಳೆ ಹೊಂದಿದ ಪಕ್ಷದಲ್ಲಿ ಹೆಚ್ಚುವರಿ ಬೆಳೆಗೆ 2 ರೂ. ನಂತೆ ಪ್ರತಿ ತಾಕಿಗೆ ಗರಿಷ್ಟ 15 ರೂ. ಮಿತಿಯಲ್ಲಿ ಗೌರವಧನವನ್ನು ನೀಡಲಾಗುವುದು. ಬೆಳೆ ಸಮೀಕ್ಷೆಗೆ ನೊಂದಾಯಿಸಿಕೊಳ್ಳುವ ಖಾಸಗಿ ನಿವಾಸಿಗಳಿಗೆ ಆಧಾರ್ ಮೂಲಕವಾಗಿ ನೇರವಾಗಿ ಗೌರವಧನವನ್ನು ಬಿಡುಗಡೆ ಮಾಡಲಾಗುವುದು.

ಬೆಳೆ ಸಮೀಕ್ಷೆ ಕಾರ್ಯದಲ್ಲಿ ಸಮೀಕ್ಷಕರಾಗಿ ತೊಡಗಿಸಿಕೊಳ್ಳಲು ಆಸಕ್ತರಿರುವ ಮಾಹಿತಿ ತಂತ್ರಜ್ಞಾನದ ತಿಳುವಳಿಕೆಯಿರುವ ಸ್ಥಳೀಯ ಯುವಕರು ತಮ್ಮ ಹತ್ತಿರದ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಕೃಷಿ, ತೋಟಗಾರಿಕಾ ಇಲಾಖಾ ಕಚೇರಿ, ನಾಡಾ ಕಚೇರಿ ಅಥವಾ ತಾಲೂಕು ತಹಶೀಲ್ದಾರರನ್ನು ಸಂಪರ್ಕಿಸಿ ಆಧಾರ್ ಹಾಗೂ ಮೊಬೈಲ್ ಸಂಖ್ಯೆಯ ವಿವರವನ್ನು ಒದಗಿಸುವ ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.