ಉಡುಪಿ: ಉಡುಪಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು  ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ದಿ ಅಸೋಸಿಯೇಶನ್ಸ್ ಆಫ್ ಪೀಪಲ್ ವಿಧ್ ಡಿಸೆಬಿಲಿಟಿ(APD) ಬೆಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ , ಶಂಕರನಾರಾಯಣ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಕಲಚೇತನರಿಗೆ ಮೇ 20 ರಂದು  ನಡೆದ ಸಮುದಾಯ ಆಧಾರಿತ ಔದ್ಯೋಗಿಕ ತರಬೇತಿಯ ಉದ್ಘಾಟನೆಯನ್ನು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಚಂದ್ರ ನಾಯ್ಕ್ ಉದ್ಘಾಟಿಸಿದರು.

ಅಂಗವಿಕಲರಿಗೆ ಅನುಕಂಪ ಬೇಡ , ಅವಕಾಶವನ್ನು ಕಲ್ಪಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯ ಈ ನಿಟ್ಟಿನಲ್ಲಿ ಎಪಿಡಿ ಸಂಸ್ಥೆ ನಡೆಸುತ್ತಿರುವ ಈ ಕಾರ್ಯ ಶ್ಲಾಘನೀಯ, ಈ ಸಂಸ್ಥೆಯ ಮುಖಾಂತರ ಆಸಕ್ತ ಅರ್ಹ ಅಂಗವಿಕಲರಿಗೆ ಸುಮಾರು 15 ವಿಧದ ಔದ್ಯೋಗಿಕ ತರಬೇತಿಯನ್ನು ಉಡುಪಿ ಜಿಲ್ಲೆಯ ವಿಕಲಚೇತರಿಗೆ ನೀಡಲು ಕ್ರಮ ವಹಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ  ಶಂಕರನಾರಾಯಣ ಗ್ರಾಮ ಪಂಚಾಯತ್ ಅಧ್ಯಕ್ಷ ರವಿ ಕುಲಾಲ , ಅಂಗವಿಕಲರಿಗೆ ಗ್ರಾಮ ಪಂಚಾಯತ್ ವತಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಅವರೂ ಸಹಾ ಸಮಾಜದ ಮುಖ್ಯ ವಾಹಿನಿಗೆ ಬರಲು ತಮ್ಮ ನೆರವನ್ನು ನೀಡುವುದಾಗಿ ತಿಳಿಸಿದರು.

ಶಂಕರನಾರಾಯಣ ಗ್ರಾಮ ಪಂಚಾಯತ್ ವ್ಯಾಪ್ತಿಯ 10 ಜನ ಅಂಗವಿಕಲರಿಗೆ 1 ತಿಂಗಳ ಔದ್ಯೋಗಿಕ ತರಬೇತಿಯ ಬಗ್ಗೆ ಎಪಿಡಿ ಸಂಸ್ಥೆಯ ಉಡುಪಿ ಜಿಲ್ಲಾ ನೋಡಲ್ ಅಧಿಕಾರಿ   ಹರೀಶ್ ಶೆಟ್ಟಿರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಅಂಗವಿಕಲತೆ ಶಾಪವಲ್ಲ, ಸ್ವಾವಲಂಬಿ ಮತ್ತು ಸ್ವಾಭಿಮಾನದ ಜೀವನವನ್ನು ಅಂಗವಿಕಲರು ರೂಪಿಸಿಕೊಳ್ಳಲು ಎಪಿಡಿ ಸಂಸ್ಥೆ ಕಾರ್ಯಾಚರಿಸುತ್ತಿದೆ 1950ರಲ್ಲಿ ಸ್ವತಃ ವಿಕಲಚೇತನೆಯಾದ ಶ್ರೀಮತಿ ಎನ್.ಎಸ್.ಹೇಮಾರವರು ಪ್ರಾರಂಭಿಸಿ 5 ಲಕ್ಷಕ್ಕೂ ಹೆಚ್ಚು ವಿಕಲಚೇತನರ ಬಗ್ಗೆ ಶೀಘ್ರ ಪತ್ತೆ ಹಚ್ಚುವಿಕೆ, ಸಮನ್ವಯ ಶಿಕ್ಷಣ, ಮಾನಸಿಕ ಆರೋಗ್ಯ ಮತ್ತು ಜೀವನೋಪಾಯ ಕಾರ್ಯಕ್ರಮಗಳೊಂದಿಗೆ ನಿರುದ್ಯೋಗಿ ವಿಕಲಚೇತನರಿಗೆ ತರಬೇತಿ ಮತ್ತು ಉದ್ಯೋಗವನ್ನು ಉಚಿತವಾಗಿ ನೀಡಿ ಅವರ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಂಗವಿಕಲರಿಗೆ 1 ತಿಂಗಳಿಗಾಗುವಷ್ಟು ಆಹಾರ ಸಾಮಾಗ್ರಿಗಳನ್ನು ಎಪಿಡಿ ಸಂಸ್ಥೆಯ ವತಿಯಿಂದ ವಿತರಿಸಲಾಯಿತು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಜಲಜ ಹೆಗ್ಡೆ, ಪಿಡಿಒ ಶ್ರೀಮತಿ ಶ್ವೇತಲತಾ, ಗ್ರಾಮ ಪಂಚಾಯತ್‌ನ ಸದಸ್ಯರು, ಯೋಜನಾ ಸಹಾಯಕರಾದ   ಗಣೇಶ್ ಮರಾಠೆ, ವಿ.ಆರ್.ಡಬ್ಲ್ಯೂ ವನಿತಾ, ಶ್ರೀಮತಿ ಉಪಸ್ಥಿತರಿದ್ದರು.  ಎಂ.ಆರ್.ಡಬ್ಲ್ಯೂ ಮಂಜುನಾಥ್ ಹೆಬ್ಬಾರ್ ಸ್ವಾಗತಿಸಿ ,ನಿರೂಪಿಸಿದರು ಹರೀಶ್ ಶೆಟ್ಟಿ ವಂದಿಸಿದರು.