ಉಡುಪಿ: ಜಿಲ್ಲೆಯ ಎಲ್ಲಾ ಜನತೆಯು ಸಧೃಡ ಭಾರತ ಆಂದೋಲನದಲ್ಲಿ ಪಾಲ್ಗೊಳ್ಳಬೇಕು. ಜಿಲ್ಲೆಯಲ್ಲಿ ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳಿದ್ದು, ಉತ್ತಮ ರೀತಿಯಲ್ಲಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.

ಅವರು ಗುರುವಾರ, ಉಡುಪಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಕೇಂದ್ರ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲೆ, ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಉಡುಪಿ ಇವರ ಜಂಟಿ ಆಶ್ರಯದಲ್ಲಿ ಅಜ್ಜರಕಾಡು ಪುರಭವನದಲ್ಲಿ ನಡೆದ ಸಧೃಡ ಭಾರತ ಆಂದೋಲನ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಇಂದಿನ ಯುವಜನತೆ ಯಾವ ದಿಕ್ಕಿನೆಡೆ ಸಾಗುತ್ತಿದೆ ಎಂಬ ಕುರಿತು ಗಮನ ಹರಿಸಬೇಕು. ಯುವಜನತೆಯಲ್ಲಿ ದಿನೇ ದಿನೇ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು, ಇದರ ದುಷ್ಪರಿಣಾಮದ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು ಮತ್ತು ಮೊಬೈಲ್ ಬಳಕೆಯನ್ನು ಅಗತ್ಯ ಕೆಲಸಕ್ಕೆ ಮತ್ತು ಒಳ್ಳೆಯ ಕೆಲಸಕ್ಕಾಗಿ ಮಾತ್ರ ಬಳಸಬೇಕು ಎಂದು ಡಿಸಿ ಹೇಳಿದರು.

ಯುವಜನತೆ ಸಧೃಡರಾಗಬೇಕು, ಸರಿಯಾದ ಆಹಾರ ಕ್ರಮ, ಸರಿಯಾದ ಸಮಯದಲ್ಲಿ ಆಹಾರ ಸೇವನೆ ಸಧೃಡವಾಗಿರಲು ಬಹಳ ಮುಖ್ಯ. ಉತ್ತಮ ಜೀವನಕ್ಕೆ ಸಮಯಪಾಲನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ರಾಷ್ಟ್ರ ಮಟ್ಟದಲ್ಲಿ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ನಿಯತಿ ಶೆಟ್ಟಿ, ಅಭಿನ್ ದೇವಾಡಿಗ, ಪ್ರಜ್ಞಾ ಕೊಡವೂರು ಮತ್ತು ತರಬೇತಿದಾರ ಅನಂತರಾಮ್ ಅವರನ್ನು ಸನ್ಮಾನಿಸಲಾಯಿತು.ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವೃತ್ತ ನಿರೀಕ್ಷಕ ಸಂಪತ್ ಕುಮಾರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್‍ಫ್ರೆಡ್ ಡಿ ಸೋಜ ಉಪಸ್ಥಿತರಿದ್ದರು.