ಉಡುಪಿ : ಜಿಲ್ಲೆಯಲ್ಲಿ ಮಳೆಗಾಲವು ಈಗಾಗಲೇ ಆರಂಭವಾಗಿದ್ದು, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ತೊಂದರೆಯಾಗದoತೆ ಸಾಕಷ್ಟು ಮುಂಜಾಗೃತೆ ವಹಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.
ವ್ಯಾಪಾರಸ್ಥರು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಚರಂಡಿಗೆ ಕಸಕಡ್ಡಿಗಳನ್ನು/ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರೇ ಯಾವುದೇ ರೀತಿಯ ತ್ಯಾಜ್ಯಗಳನ್ನು ಬಿಸಾಡಬಾರದಾಗಿ ತಿಳಿಸಿದೆ. ಗೂಡಂಗಡಿ ಮಾಲೀಕರು ಉಪಯೋಗಿಸಿದ ಬೊಂಡವನ್ನು ಅದೇ ದಿನ ವಿಲೇವಾರಿ ಮಾಡಲು ಸೂಚಿಸಿದೆ.
ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವುದಲ್ಲದೇ ಸೊಳ್ಳೆಯಿಂದ ನಾನಾ ರೀತಿಯ ಕಾಯಿಲೆಗಳು ಉಂಟಾಗುತ್ತದೆ. ಈ ಬಗ್ಗೆ ಆರೋಗ್ಯ ಹಿತದೃಷ್ಟಿಯಿಂದ ಗೃಹೋಪಯೊಗಕ್ಕೆಂದು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿಗಳು ,ಡ್ರಂಗಳು, ಬ್ಯಾರಲ್ , ಮಡಕೆ ಮುಂತಾದ ನೀರಿನ ಶೇಖರಣೆಗಳಲ್ಲಿ ಉತ್ಪತ್ತಿಯಾಗುವುದರಿಂದ ಇವುಗಳ ಬಗ್ಗೆ ಹೆಚ್ಚಿನ ಗಮನವಿಟ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಈ ಬಗ್ಗೆ ಮುನ್ನೆಚ್ಚರಿಕೆಯಾಗಿ ನೀರು ಸಂಗ್ರಹವಾಗುವ ಓವರ್ ಹೆಡ್ ಟ್ಯಾಂಕ್ ಗಳನ್ನು ವಾರಕ್ಕೊಮ್ಮೆ ಪೂರ್ತಿ ನೀರು ಖಾಲಿ ಮಾಡಿ ಶುಚಿಗೊಳಿಸುವುದು. ಅಂಗಡಿ ಮುಂಗಟ್ಟು ಮನೆ ಪರಿಸರದಲ್ಲಿ ಮನೆಯ ಸಮೀಪ ಇರುವ ಅನುಪಯುಕ್ತ ಟಯರ್, ಎಳನೀರು ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸುವುದು. ಹಾಗೂ ಸ್ವಯಂ ರಕ್ಷಣಾ ವಿಧಾನಗಳಿಂದ ಸೊಳ್ಳೆ ನಿರೋಧಕಗಳನ್ನು ಹಾಗೂ ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸುವುದು. ಅದರಲ್ಲಿಯೂ ಕೀಟನಾಶಕ ಸಿಂಪಡಿಸಿದ ಸೊಳ್ಳೆಪರದೆಗಳು ಅತ್ಯತ್ತಮ. ಸಂಜೆ ಮತ್ತು ರಾತ್ರಿ ವೇಳೆ ಎಲ್ಲರೂ ಮೈ ತುಂಬಾ ಬಟ್ಟೆ ಧರಿಸುವುದು. ಸೊಳ್ಳೆಗಳ ಕಚ್ಚುವಿಕೆಯಿಂದ ದೂರವಿರುವುದು. ಯಾವುದೇ ರೀತಿಯಲ್ಲಿ ಸಾಂಕ್ರಾಮಿಕ ರೋಗವು ಉತ್ಪತ್ತಿಯಾಗದಂತೆ ಎಚ್ಚರ ವಹಿಸಲು ಪಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಿದೆ.
ಜ್ವರ/ತಲೆನೋವು.. ಇತ್ಯಾದಿಗಳು ಬಂದಲ್ಲಿ ಕೂಡಲೇ ಉದಾಶೀನ ಮಾಡದೇ ಕೂಡಲೇ ವೈದ್ಯರನ್ನು ಭೇಟಿ ಮಾಡಲು ತಿಳಿಸಿದೆ. ಕಾದಾರಿದ ನೀರನ್ನೇ ಉಪಯೋಗಿಸಲು ತಿಳಿಸಿದೆ. ಮಳೆಗಾಲದ ಸಮಯದಲ್ಲಿ ಸಾರ್ವಜನಿಕರು ನೈಸರ್ಗಿಕವಾಗಿ ಹರಿಯುವ ನೀರಿಗೆ ಅಡ್ಡಿ ಉಂಟುಮಾಡದೇ ಸರಾಗವಾಗಿ ನೀರು ಹರಿಯಲು ಅವಕಾಶ ಮಾಡಿಕೊಡಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆ ತಿಳಿಸಿದೆ.