ಉಡುಪಿ,(ಎಪ್ರಿಲ್ 19): ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವುದು ಸೇರಿದಂತೆ, ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ, ಜಿಲ್ಲಾಡಳಿತ ಮೂಲಕ ರೆಫರಲ್ ಮಾಡುವ ಕೋವಿಡ್ರೋ ಗಿಗಳಿಗೆ ಚಿಕಿತ್ಸೆ ನೀಡಲು ಶೇ.50 ರಷ್ಟು ಬೆಡ್‌ಗಳನ್ನು ಮೀಸಲಿಡುವಂತೆ ಎಲ್ಲ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯಲ್ಲಿ ಕೆಪಿಎಂಇ ಯಡಿ ನೊಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿನ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಬೆಡ್‌ಗಳ ಸಂಖ್ಯೆಯ ಸಂಪೂರ್ಣ ವಿವರಗಳನ್ನು ಆರೋಗ್ಯ ಇಲಾಖೆಗೆ ನೀಡಬೇಕು. ಆಸ್ಪತ್ರೆಯಲ್ಲಿ ಐಸಿಯು ಬೆಡ್, ಆಕ್ಸಿಜನ್ ಬೆಡ್, ಐಎಫ್‌ಎನ್ ಬೆಡ್‌ಗಳು ಸೇರಿದಂತೆ ಎಲ್ಲಾ ವರ್ಗದ ಬೆಡ್‌ಗಳಲ್ಲಿ ಶೇ.50 ರಷ್ಟು ಬೆಡ್‌ಗಳನ್ನು ಮೀಸಲಿಟ್ಟು, ಜಿಲ್ಲಾಡಳಿತದ ರೆಫರಲ್ ಮೂಲಕ ದಾಖಲಾಗುವ ರೋಗಿಗಳಿಗೆ ಸದ್ರಿ ಬೆಡ್‌ಗಳನ್ನು ನೀಡಬೇಕು. ಆಸ್ಪತ್ರೆಗಳಲ್ಲಿ ವೈದ್ಯಕೀಯ ಯಂತ್ರಗಳು, ಉಪಕರಣಗಳು ಸರಿ ಇಲ್ಲ ಎಂದು ಸಬೂಬು ಹೇಳದೆ, ಎಲ್ಲಾ ಯಂತ್ರಗಳು ಮತ್ತು ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಸುಸ್ಥಿತಿಯಲ್ಲಿ ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಡಿಸಿ ಹೇಳಿದರು.

ಬೆಡ್ ನಿರ್ವಹಣಾ ವ್ಯವಸ್ಥೆಯಡಿ ಎಲ್ಲಾ ಆಸ್ಪತ್ರೆಗಳು ತಮ್ಮಲ್ಲಿ ಲಭ್ಯವಿರುವ ಬೆಡ್‌ಗಳ ಸಂಖ್ಯೆ ಮತ್ತು ಪ್ರಸ್ತುತ ರೋಗಿಗಳು ಇರುವ ಬೆಡ್‌ಗಳ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸಬೇಕು. ಯಾವುದೇ ರೋಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಅದಲ್ಲಿ ಅಥವಾ ಹೊಸ ರೋಗಿ ದಾಖಲಾದಲ್ಲಿ ಕೂಡಲೇ ಸಾಫ್ಟ್ವೇರ್‌ನಲ್ಲಿ ದಾಖಲು ಮಾಡಬೇಕು ಎಂದರು.

ರೆಮಿಡಿಸಿವರ್ ಮತ್ತು ಆಕ್ಷಿಜನ್ ಕೊರತೆಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿರುವ ರೋಗಿಗಳಿಗೆ ಅಗತ್ಯ ಪ್ರಮಾಣದಲ್ಲಿ ಮಾತ್ರ ರೆಮಿಡಿಸಿವರ್ ಮತ್ತು ಆಕ್ಸಿಜನ್ ನೀಡುವ ಮೂಲಕ ಅನಗತ್ಯವಾಗಿ ಪೋಲಾಗದಂತೆ ತಡೆಯಬೇಕು. ಆಕ್ಷಿಜನ್‌ನ್ನು ಸರಿಯಾದ ಪ್ರಮಾಣದಲ್ಲಿ ಬಳಸುವ ಕುರಿತಂತೆ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗೆ ತರಬೇತಿ ಆಯೋಜಿಸಿ, ಯಾವುದೇ ವೈದ್ಯಕೀಯ ಸಿಬ್ಬಂದಿ ಸೋಂಕಿಗೆ ಒಳಗಾಗದಂತೆ ಪಾಲಿಸಬೇಕಾದ ಕ್ರಮಗಳ ಕುರಿತು ಸಹಾ ತರಬೇತಿ ನೀಡುವಂತೆ ಜಿ.ಜಗದೀಶ್ ಸೂಚಿಸಿದರು.

ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿಗೆ ಬರುವ ಐಎಲ್‌ಐ ಮತ್ತು ಸಾರಿ ಪ್ರಕರಣದ ರೋಗಿಗಳ ಸ್ವಾಬ್ಸಂ ಗ್ರಹಿಸಿ, ಜಿಲ್ಲಾಸ್ಪತ್ರೆಯ ಲ್ಯಾಬ್‌ಗೆ ಪರೀಕ್ಷೆಗೆ ಕಳುಹಿಸಬೇಕು. ಈ ಬಗ್ಗೆ ಯಾವುದೇ ಆಸ್ಪತ್ರೆಗಳ ನಿರ್ಲಕ್ಷತನವನ್ನು ಸಹಿಸುವುದಿಲ್ಲ. ಪ್ರಕರಣಗಳ ಕುರಿತು ವರದಿ ನೀಡದ ಆಸ್ಪತ್ರೆಗಳ ಲೈಸೆನ್ಸ್ ರದ್ದುಗೊಳಿಸುವುದರೊಂದಿಗೆ ಸಂಬoದಪಟ್ಟ ಆಸ್ಪತ್ರೆಗಳ ಅಧಿಕಾರಿಗಳ ವಿರುದ್ಧ ಎಪಿಡಮಿಕ್ ಕಾಯ್ದೆಯನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದರು.

ವೈದ್ಯಕೀಯ ತರಗತಿ ಹೊರತುಪಡಿಸಿ ಉಳಿದ ಎಲ್ಲಾ ತರಗತಿಗಳನ್ನು ನಡೆಸುವುದನ್ನು ಸರ್ಕಾರ ನಿರ್ಭಂದಿಸಿದ್ದು, ಯಾವುದೇ ಆಸ್ಪತ್ರೆಗಳು ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ತರಗತಿಗಳನ್ನು ನಡೆಸುವಂತಿಲ್ಲ. ಅಗತ್ಯವಿದ್ದಲ್ಲಿ ಆನ್‌ಲೈನ್ ಮೂಲಕ ತರಗತಿ ನಡೆಸಬಹುದು. ನರ್ಸಿಂಗ್ ವಿದ್ಯಾರ್ಥಿಗಳು ಕೇರಳಕ್ಕೆ ಹೋಗಿ ಬರುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಡಿಸಿ ಸೂಚಿಸಿದರು.

ಜಿಲ್ಲೆಯಲ್ಲಿ ಯಾವುದೇ ರೋಗಿಯೂ ಕೋವಿಡ್‌ನಿಂದ ಮೃತಪಡದಂತೆ ಎಲ್ಲಾ ವೈದ್ಯರು ತಮ್ಮ ಶ್ರಮ ಮೀರಿ ಕಾರ್ಯನಿರ್ವಹಿಸುವ ಮೂಲಕ, ಜಿಲ್ಲೆಯಲ್ಲಿ ಆದಷ್ಟು ಸಾವುಗಳಾಗುವುದನ್ನು ತಡೆಯಬೇಕು. ಮೃತದೇಹಗಳ ವಿಲೇವಾರಿಯಲ್ಲಿ ಯಾವುದೇ ಗೊಂದಲಗಳಾಗದoತೆ ಎಚ್ಚರವಹಿಸುವಂತೆ ಡಿಸಿ ಹೇಳಿದರು

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‌ಓ ಡಾ. ಸುದೀರ್ ಚಂದ್ರ ಸೂಡಾ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ ಭಟ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕೆಪಿಎಂಇ ನೊಂದಾಯಿತ ಆಸ್ಪತ್ರೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.