ಮಂಗಳೂರು: "ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ವ್ಯಾಪಕ ಲೋಪದೋಷ ಕಂಡುಬಂದಿದೆ. ಈ ಹಿಂದೆ ಕೆಲವೊಂದು ಪ್ರಕರಣಗಳಲ್ಲಿ ತಪ್ಪುಗಳಾಗಿದ್ದವು. ಆದರೆ ಈ ಬಾರಿ ತೀವ್ರತರದ ಲೋಪದೋಷಗಳು ಕಂಡುಬಂದಿವೆ. ಆದ್ದರಿಂದ ಈ ಬಗ್ಗೆ ಲೋಕಾಯುಕ್ತ, ಎಸಿಬಿ ಅಥವಾ ಸಮರ್ಥ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕು" ಎಂದು ಎನ್ನೆಸ್‌ಯುವ ರಾಜ್ಯ ಕಾರ್ಯದರ್ಶಿ ಫಾರೂಕ್ ಬಾಯಬೆ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ರಾಜ್ಯ ಸರಕಾರವು ಕೊರೋನ ಸಂದರ್ಭದಲ್ಲೂ ಹಠಕ್ಕೆ ಬಿದ್ದು ಪರೀಕ್ಷೆ ನಡೆಸಿದೆ. ಬಳಿಕ ಉತ್ತರಪತ್ರಿಕೆಯ ಮೌಲ್ಯಮಾಪನದಲ್ಲಿ ಶಿಕ್ಷಣ ಇಲಾಖೆ ಮಾಡಿರುವ ಎಡವಟ್ಟಿನಿಂದ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಮರು ಮೌಲ್ಯ ಮಾಪನಕ್ಕೆ ಹಣಕಾಸಿನ ತೊಂದರೆಯಿಂದ ಸಾಕಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಮುಂದಾಗಿಲ್ಲ. ಅವರ ಭವಿಷ್ಯ ಅತಂತ್ರವಾಗಿದೆ" ಎಂದವರು ದೂರಿದರು.

"ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಸೆಸೆಲ್ಸಿ ಮರು ಮೌಲ್ಯಮಾಪನದಲ್ಲಿ ಈ ಬಾರಿ 748 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ" ಎಂದವರು ಮಾಹಿತಿ ನೀಡಿದರು.

"ಪರೀಕ್ಷಾ ಫಲಿತಾಂಶಕ್ಕೆ ಮುನ್ನ ಫೇಸ್ಬುಕ್ ಲೈವ್ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಾಲಾ ಇಲಾಖೆಯ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದ್ದಾರೆ. ಆದರೆ ಮರು ಮೌಲ್ಯಮಾಪನಕ್ಕೆ ಸಂಬಂಧಿಸಿದ ಲೋಪದೋಷಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ" ಎಂದು ಫಾರೂಕ್ ಬಾಯಬೆ ಆರೋಪಿಸಿದ್ದಾರೆ.

ಎನ್‌ಎಸ್‌ಯುಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಮಾತನಾಡಿ, "ಅಕ್ಟೋಬರ್ 1ರಿಂದ ಎನ್‌ಎಸ್ ಯುಐನಿಂದ ಡ್ರಗ್ಸ್ ಹಾಗೂ ರ್ಯಾಗಿಂಗ್ ವಿರೋಧಿ ಅಭಿಯಾನ ನಡೆಸಲಿದೆ" ಎಂದು ತಿಳಿಸಿದರು.

 ಬೇಡಿಕೆಗಳುಃ

  • ಲೋಕಾಯುಕ್ತ ಅಥವ ಎಸಿಬಿ ಅಥವ ಇನ್ಯಾವುದೇ ಸಮರ್ಥ ಸಂಸ್ಥೆ ಮೂಲಕ ಸಮಗ್ರ ತನಿಖೆ ನಡೆಸಬೇಕು.
  • ತಪ್ಪಿತಸ್ಥ ಅಧಿಕಾರಿಗಳನ್ನು ಮತ್ತು ಮೌಲ್ಯಮಾಪಕರನ್ನು ತಕ್ಷಣ ಸೇವೆಯಿಂದ ವಜಾ ಮಾಡಬೇಕು.
  • ಲೋಪ ದೋಷ ಆಗಿರುವ ಸಮಗ್ರ ಮಾಹಿತಿಯನ್ನು ಸರಕಾರ ಬಹಿರಂಗ ಮಾಡಬೇಕು. ಮೌಲ್ಯಮಾಪನದಿಂದ ನೊಂದವರಿಗೆ ಸಾಂತ್ವನ ಹೇಳಬೇಕು ಮತ್ತು ಅಗತ್ಯವಿದ್ದರೆ ಅವರಿಗೆ ಕೌನ್ಸೆಲಿಂಗ್ ಸೌಲಭ್ಯ ಒದಗಿಸಬೇಕು. ಮೌಲ್ಯಮಾಪನದ ಲೋಪ ದೋಷಗಳನ್ನು ನಿವಾರಿಸಲು ನೀತಿ ನಿಯಮನಗಳನ್ನು ಕಠಿಣಗೊಳಿಸಬೇಕು.
  • ಮಾತ್ರವಲ್ಲದೆ, ಶಿಕ್ಷಣ ಕ್ಷೇತ್ರದಿಂದ ಚುನಾಯಿತರಾದ ಶಾಸಕರು ಈ ಬಗ್ಗೆ ಸದನ ಒಳಗೆ ಮತ್ತು ಹೊರಗೆ ಧ್ವನಿ ಎತ್ತಿ ನ್ಯಾಯ ಒದಗಿಸಬೇಕು.

ಎನ್ಎಸ್ ಯುಐ ದ.ಕ. ಜಿಲ್ಲಾ ಕಾರ್ಯದರ್ಶಿ ಸವಾದ್ ಸುಳ್ಯ, ಎನ್ಎಸ್ ಯುಐ ಆರ್.ಟಿ.ಐ. ರಾಷ್ಟ್ರೀಯ ಕೋಡಿನೇಟರ್ ಅನ್ವೀತ್ ಕಟೀಲ್, ಮಂಗಳೂರು ನಗರ ಅಧ್ಯಕ್ಷ ಶೌನಕ್ ರೈ, ಬಂಟ್ವಾಳ ಅಧ್ಯಕ್ಷ ವಿನಯ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಬಾತಿಶ್  ಅಳಕೆಮಜಲು, ಬಂಟ್ವಾಳ ಕಾರ್ಯದರ್ಶಿ ಶಫೀಕ್  ಮತ್ತಿತರರು ಉಪಸ್ಥಿತರಿದ್ದರು.