ಉಡುಪಿ ನವೆಂಬರ್ 19: ಜಾನುವಾರುಗಳಿಗೆ ಮಾರಣಾಂತಿಕ ಕಾಯಿಲೆಯಾಗಿರುವ ಕಾಲುಬಾಯಿ ರೋಗದ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಎಂಟನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದ್ದು, ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಅವುಗಳ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಾನುವಾರುಗಳಿಗೆ ಕಾಲು ಬಾಯಿ ಜ್ವರ ರೋಗ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ನವೆಂಬರ್ 3 ರಿಂದ ಡಿಸೆಂಬರ್ 2 ರವರೆಗೆ ಜಾನುವಾರುಗಳಿಗೆ ಎಂಟನೇ ಸುತ್ತಿನ ಕಾಲುಬಾಯಿ ಜ್ವರ ರೋಗದ ಲಸಿಕೆ ನೀಡಲಾಗುತ್ತಿದ್ದು, ಲಸಿಕಾ ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಕಟ್ಟೆಚ್ಚರ ವಹಿಸುವುದರೊಂದಿಗೆ ಯಾವುದೇ ಜಾನುವಾರುಗಳು ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು. 

ಕಳೆದ ಏಳನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಯ 2,05,518 ಜಾನುವಾರುಗಳ ಗುರಿ ನಿಗಧಿಪಡಿಸಿ, 1,93,496 ಜಾನುವಾರುಗಳಿಗೆ ಲಸಿಕೆ ಹಾಕಿಸಿ ಶೇ. 96 ರಷ್ಟು ಪ್ರಗತಿ ಸಾಧಿಸಲಾಗಿದೆ. ಎಂಟನೇ ಸುತ್ತಿಗೆ 1,93,496 ಗುರಿ ನಿಗಧಿಪಡಿಸಿ, ಈವರೆಗೆ 88,556 ಜಾನುವಾರುಗಳಿಗೆ ಲಸಿಕೆ ಹಾಕಿಸಲಾಗಿದೆ. ಇದು ಪ್ರತಿಶತಃ ನೂರರಷ್ಟು ಪ್ರಗತಿಯಾಗಬೇಕು ಎಂದರು.

ಲಸಿಕಾ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 2,28,350 ಡೋಸ್ ಲಸಿಕೆ ಲಭ್ಯವಿದೆ. ಲಸಿಕಾ ಕಾರ್ಯದ ಸಂದರ್ಭದಲ್ಲಿ ಉತ್ಪತ್ತಿಯಾಗುವ ಜೀವವೈದ್ಯ ತ್ಯಾಜ್ಯಗಳನ್ನು ನಿಯಮಾನುಸಾರ ವೈಜ್ಞಾನಿಕ ವಿಲೇವಾರಿ ಮಾಡಬೇಕು ಎಂದ ಅವರು, ಜಿಲ್ಲೆಯ ಎಲ್ಲಾ ಗ್ರಾಮಗಳ ಜಾನುವಾರುಗಳಿಗೆ ಲಸಿಕಾ ಚುಚ್ಚುಮದ್ದು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು. 

 ಪಶುವೈದ್ಯರು, ತಾಂತ್ರಿಕ ಸಿಬ್ಬಂದಿ, ಕೆ.ಎಂ.ಎಫ್ ಸಿಬ್ಬಂದಿ, ಮೈತ್ರಿ ಕಾರ್ಯಕರ್ತರು, ಪಶು ಸಖಿಯರು  ಹಾಗೂ ಇತರೆ ತರಬೇತಿ ಹೊಂದಿದ ಒಟ್ಟು 268 ಸಿಬ್ಬಂದಿಗಳನ್ನು ಲಸಿಕಾ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ಇವರುಗಳು ಮನೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರುಗಳು ಮಾಹಿತಿ ನೀಡಿ ಸಹಕರಿಸುವಂತೆ ತಿಳಿಸಿದ ಅವರು, ಹೆಚ್ಚಿನ ಸಂಖ್ಯೆಯ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು ಎಂದರು.

ಜಿಲ್ಲೆಯ ಕಾಪು, ಉಡುಪಿ, ಬೈಂದೂರು, ಹೆಬ್ರಿ, ಕುಂದಾಪುರ, ಕಾರ್ಕಳ ಹಾಗೂ ಬ್ರಹ್ಮಾವರ ತಾಲೂಕು ಮತ್ತು ಉಡುಪಿ ಪಾಲಿಕ್ಲಿನಿಕ್ ನಲ್ಲಿ ತಲಾ ಒಂದರಂತೆ ಒಟ್ಟು 8 ಪಶು ಸಂಜೀವಿನಿ ಆಂಬುಲೆನ್ಸ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತೀ ಚಿಕಿತ್ಸಾ ಘಟಕದ ವಾಹನದಲ್ಲಿ ಪಶುವೈದ್ಯರು, ಪಶುವೈದ್ಯ ಸಹಾಯಕ ಹಾಗೂ ವಾಹನ ಚಾಲಕರು ನೇಮಕಗೊಂಡಿದ್ದು, ಈ ವಾಹನಗಳ ಮೂಲಕ 2025 ರ ಜುಲೈ ನಿಂದ ಸೆಪ್ಟಂಬರ್ ವರೆಗೆ ಒಟ್ಟು 4611 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿರುತ್ತದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಪಶುವೈದ್ಯಕೀಯ ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ. ಬಾಬಣ್ಣ, ಮಂಗಳೂರು ಕೆ.ಎಂ.ಎಫ್ ಉಪ ವ್ಯವಸ್ಥಾಪಕ ಡಾ.ಮಾಧವ ಐತಾಳ್, ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.