ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಆಳ್ವಾಸ್ ಕಾನೂನು ಕಾಲೇಜು ಹಾಗೂ ಆಳ್ವಾಸ್ ಮಾನವಿಕ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕ್ಯಾಂಪಸ್ ಪಾರ್ಲಿಮೆಂಟ್- 2025 (ಸಂಸತ್‍ಶೈಲಿಯಲ್ಲಿ ಚರ್ಚಿಸುವ ಪ್ರಜಾತಾಂತ್ರಿಕ ವ್ಯವಸ್ಥೆಯ ಚಟುವಟಿಕೆ) ಕಾರ್ಯಕ್ರಮ ಆಳ್ವಾಸ್ ಆವರಣದ ವಿಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಿತು.





ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್. ಸಿಂಧಿಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಕ್ಕು ಮತ್ತು ಕರ್ತವ್ಯಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಕ್ಕುಗಳನ್ನು ಅನುಭವಿಸಲು ಅವಕಾಶ ದೊರಕುವಾಗ, ಸಮಾಜದ ಹಿತ
ಕ್ಕಾಗಿ ಕರ್ತವ್ಯ ನಿರ್ವಹಿಸುವ ಹೊಣೆಗಾರಿಕೆಯೂ ನಮ್ಮ ಮೇಲಿದೆ. ಹಕ್ಕುಗಳನ್ನು ಮಾತ್ರ ಒತ್ತಾಯಿಸಿ, ಕರ್ತವ್ಯಗಳನ್ನು ನಿರ್ಲಕ್ಷಿಸಿದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದಲೇ ಹಕ್ಕು ಮತ್ತು ಕರ್ತವ್ಯಗಳು ಜೊತೆ ಜೊತೆಗೆ ಸಾಗಬೇಕು. ಹಕ್ಕಿನಿಂದಾಗಿ ನಾವು ಏನು ಪಡೆಯುತ್ತೇವೋ, ಕರ್ತವ್ಯಗಳಿಂದಾಗಿ ದೇಶ ಏನು ಪಡೆಯುತ್ತದೆ ಎಂಬ ಅರಿವು ಮೂಡಿದಾಗ ನಾವು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳುತ್ತೇವೆ ಎಂದರು.
ನಮ್ಮ ದೇಶ ಅಭಿವೃದ್ಧಿಯ ಪಥದಲ್ಲೇ ಸಾಗುತ್ತಿದೆ. ಈ ಪಯಣದಲ್ಲಿ ಪ್ರಜಾಪ್ರಭುತ್ವವು ನಮ್ಮನ್ನು ಒಗ್ಗೂಡಿಸಿ, ಮುಂದಕ್ಕೆ ಕೊಂಡೊಯ್ಯುತ್ತಿರುವ ಅತ್ಯುತ್ತಮ ಆಡಳಿತ ವ್ಯವಸ್ಥೆಯಾಗಿದೆ. ಲೋಕದಲ್ಲಿ ಹಲವು ಪರ್ಯಾಯ ಆಡಳಿತ ವ್ಯವಸ್ಥೆಗಳು ಇದ್ದರೂ ಜನಸಾಮಾನ್ಯರ ಪಾಲ್ಗೊಳ್ಳುವಿಕೆಗೆ ಸಮಾನ ಅವಕಾಶಗಳನ್ನೂ ನೀಡುವ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಂಸತ್ತು ಕಾನೂನು ರಚನೆಗೆ ಇರುವ ವೇದಿಕೆಯೇ ಹೊರತು, ಸಂಘರ್ಷದ ವೇದಿಕೆಯಾಗಬಾರದು ಎಂದರು. ತಾಂತ್ರಿಕ ವೈಯಕ್ತಿಕ ದತ್ತಾಂಶ ಸಂರಕ್ಷಣಾ ನಿಯಮಗಳು–2025 ವಿದೇಯಕವನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು.
ಕಾರ್ಯಕ್ರಮದಲ್ಲಿ ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಳ್ವಾಸ್ ಕಾನೂನು ಕಾಲೇಜಿನ ಪ್ರಾಂಶುಪಾಲ ಮಹಾಂತೇಶ ಜಿ. ಎಸ್. ಇದ್ದರು. ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಪ್ನಾ ಕಾರ್ಯಕ್ರಮ ನಿರೂಪಿಸಿದರು.
ಕ್ಯಾಂಪಸ್ ಪಾರ್ಲಿಮೆಂಟ್ ಶೈಕ್ಷಣಿಕ ವ್ಯವಸ್ಥೆಯಲ್ಲಿ ನಡೆಸಲಾಗುವ ಒಂದು ಸೃಜನಾತ್ಮಕ ಮತ್ತು ಅನುಭವಾಧಾರಿತ ಚಟುವಟಿಕೆ. ಇಲ್ಲಿ ವಿದ್ಯಾರ್ಥಿಗಳು ಆಡಳಿತ ಪಕ್ಷದ ಸದಸ್ಯರು, ಮಂತ್ರಿಗಳು, ವಿರೋಧ ಪಕ್ಷದ ನಾಯಕರ ಜವಾಬ್ದಾರಿವಹಿಸಿ, ನಿಜವಾದ ಸಂಸತ್ತಿನ ಕಾರ್ಯನಿರ್ವಹಣೆಯಂತೆ ಚರ್ಚೆ ಮತ್ತು ನಿರ್ಣಯಗಳ ಅನುಭವವನ್ನು ಪಡೆಯುತ್ತಾರೆ. ಈ ವೇದಿಕೆಯ ಉದ್ದೇಶ, ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ, ನಾಯಕತ್ವ, ಜವಾಬ್ದಾರಿ ಮತ್ತು ಸಾಮಾಜಿಕ ಜಾಗೃತಿಯ ಮನೋಭಾವ ಬೆಳೆಸುವುದಾಗಿದೆ ಎಂದು ವಿವೇಕ್ ಆಳ್ವ ಹೇಳಿದರು.