ಕಟೀಲು:  ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದ ಹರಕೆ ಯಕ್ಷಗಾನ ಮೇಳದ ವಿವಾದ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಮೊನ್ನೆಯವರೆಗೂ ಯಕ್ಷಗಾನವನ್ನು ಸರ್ಕಾರಕ್ಕೆ ಒಪ್ಪಿಸಬೇಕು ಅನ್ನುವ ವಿಚಾರದಲ್ಲಿ ಕಾನೂನು ಸಂಘರ್ಷಗಳು ನಡೆದಿದ್ದವು. ಹೈ ಕೋರ್ಟ್ ಡಿಸಿ ಉಸ್ತುವಾರಿಯಲ್ಲೇ ಮೇಳ ನಡೆಸಲು ಮಧ್ಯಂತರ ಆದೇಶ ನೀಡುವ ಮೂಲಕ ಒಂದು ಹಂತಕ್ಕೆ ಪ್ರಕರಣ ತಣ್ಣಗಾಗಿತ್ತು.

ಆದರೆ ಈ ಮೇಳಗಳು ಹೊರಡುವ ಹೊತ್ತಿನಲ್ಲಿ ಒಂದೇ ಮೇಳದ ಪ್ರಧಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರನ್ನು ರಂಗಸ್ಥಳದಿಂದ ಏಕಾಏಕಿ ಕೆಳಗಿಳಿಸಿದ್ದು ಸದ್ಯ ಭಾರೀ ವಿವಾದವನ್ನೇ ಹುಟ್ಟು ಹಾಕಿದೆ. ಕಲಾವಿದನಿಗೆ ಅವಮಾನ ಮಾಡಲಾಗಿದೆ ಎಂದು ಸಾಮಾಜಿಕ ತಾಣಗಳಲ್ಲೂ ಭಾರೀ ಟೀಕೆಗಳು ವ್ಯಕ್ತವಾಗಿದೆ.

ಮೇಳದಿಂದ ಭಾಗವತ ಪಟ್ಲ ಸತೀಶ್ ಶೆಟ್ಟಿ ಔಟ್

ವಿವಾದದ ಬೆನ್ನಲ್ಲೇ ಕಟೀಲು ದೇವಸ್ಥಾನದ ಆಡಳಿತ ಮಂಡಳಿ, ಯಕ್ಷಗಾನ ಟ್ರಸ್ಟ್ ಮತ್ತು ಅಲ್ಲಿನ ಅರ್ಚಕ ವೃಂದ ಪತ್ರಿಕಾಗೋಷ್ಠಿ ನಡೆಸಿ ಎಲ್ಲಕ್ಕೂ ಸ್ಪಷ್ಟನೆ ಕೊಟ್ಟಿದೆ. "ಕಟೀಲು ಮೇಳದ ನೀತಿ ನಿಯಮಗಳ ವಿರುದ್ಧ ಪಟ್ಲ ಸತೀಶ್ ಶೆಟ್ಟಿ ನಡೆದುಕೊಂಡಿದ್ದಾರೆ. ಕಟೀಲು ಮೇಳದಲ್ಲಿ ಇದ್ದುಕೊಂಡೇ ಮೇಳದ ವಿರುದ್ಧ ನಡೆದ ಕಾನೂನು ಹೋರಾಟವನ್ನು ಬೆಂಬಲಿಸಿದ್ದಾರೆ. ಅಲ್ಲದೇ ಇಲ್ಲಿನ ಶಿಸ್ತು ಉಲ್ಲಂಘಿಸಿದ್ದಾರೆ. ಹೀಗಾಗಿಯೇ ಅವರನ್ನು ಮೊದಲೇ ನಿರ್ಧರಿಸಿದಂತೆ ಮೇಳದಿಂದ ಕೈ ಬಿಡಲಾಗಿದೆ" ಎಂದು ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಪಟ್ಲ ಸತೀಶ್ ಶೆಟ್ಟಿಗೂ ಈ ವಿಚಾರನ್ನ ಮೊದಲೇ ಹೇಳಿದ್ದು, ಭಾಗವತಿಕೆ ಮಾಡಲು ಬರಬಾರದು ಅಂತ ಹೇಳಿದ್ದೇವೆ. ಆದರೂ ಅವರು ಬಂದ ಕಾರಣ ಕೆಳಗಿಳಿಸಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಯಾವ ಜಾಗದಲ್ಲೂ ಆಣೆ ಪ್ರಮಾಣಕ್ಕೆ ಸಿದ್ಧ ಎಂದು ಸತೀಶ್ ಪಟ್ಲಗೆ ಸವಾಲು ಎಸೆದಿದ್ದಾರೆ. ಕಟೀಲು ದೇವಸ್ಥಾನದ ಅರ್ಚಕ ವರ್ಗವೂ ಇವರ ಈ ನಿಲುವಿಗೆ ಬೆಂಬಲ ಸೂಚಿಸಿದೆ. ಸದ್ಯ ಕಟೀಲು ಮೇಳದ ಯಜಮಾನ ಮತ್ತು ಅಲ್ಲಿನ ಅರ್ಚಕ ವರ್ಗ ಹೇಳುವಂತೆ ಪಟ್ಲ ಸತೀಶ್ ಶೆಟ್ಟಿ ಮೇಳದ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅಲ್ಲದೇ ಈ ಹಿಂದೆ ಅವರೇ ಮನವಿ ಕೊಟ್ಟು ಪ್ರಧಾನ ಭಾಗವತಿಕೆಯಿಂದ ಸಹಾಯಕ ಭಾಗವತನ ಜಾಗಕ್ಕೆ ಬಂದಿದ್ದಾರಂತೆ. ಮೇಳದಿಂದ ಹೊರಗೆ ಹಾಕಲ್ಪಟ್ಟ ಕಲಾವಿದರ ಪರ ನಿಂತು ಅವರ ಕಾನೂನು ಹೋರಾಟಕ್ಕೆ ಬೆಂಬಲ ನೀಡಿ ಪಟ್ಲ ಮೇಳದ ನಿಯಮದ ವಿರುದ್ಧ ಕೆಲಸ ಮಾಡಿದ್ದಾರೆ. ಹೀಗಾಗಿ ಅವರನ್ನು ಹೊರ ಹಾಕಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.ಇತ್ತ ಪಟ್ಲರನ್ನ ರಂಗಸ್ಥಳದಿಂದ ಕೆಳಗಿಳಿಸಿದ್ದು ಅವರ ಅಭಿಮಾನಿಗಳನ್ನು ಕೆರಳಿಸಿದೆ. ಪಟ್ಲ ಸತೀಶ್ ಶೆಟ್ಟಿ ಕಟ್ಟಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಈ ನಡೆಯನ್ನು ವಿರೋಧಿಸಿದೆ. ಹೀಗಾಗಿ ಇಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಸಾವಿರಾರು ಪಟ್ಲ ಅಭಿಮಾನಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ನೀಡಿದ್ದಾರೆ. ಕಲಾವಿದನಿಗೆ ಅವಿಮಾನಿಸಿದ ಕಟೀಲು ಮೇಳದ ಯಜಮಾನ ಕ್ಷಮೆ ಯಾಚಿಸಬೇಕು ಅಂತ ಆಗ್ರಹಿಸಿದ್ದಾರೆ.

ಯಕ್ಷಗಾನ ಕಲೆಯ ತಪ್ಪಾದ ಬಳಕೆ; "ರಂಗನಾಯಕ"ನ ವಿರುದ್ಧ ಕರಾವಳಿಗರು ಗರಂ

ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿ ಪಟ್ಲ ಸತೀಶ್ ಶೆಟ್ಟಿ ಕೂಡ ಮೌನ ಮುರಿದಿದ್ದು, ಆಡಳಿತ ಮಂಡಳಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ತನಗೆ ಮೇಳದಿಂದ ಗೇಟ್ ಪಾಸ್ ನೀಡಿದ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಮ್ಯಾನೇಜರ್ ಆಗಲೀ ಮೇಳದ ಯಜಮಾನನಾಗಲೀ ಯಾವುದೇ ಮಾಹಿತಿ ನೀಡಿಲ್ಲ. ಆದ್ರೆ ರಂಗಸ್ಥಳಕ್ಕೆ ಹೋದ ಮೇಲೆ ಅಲ್ಲಿಂದ ಏಕಾಏಕಿ ಕೆಳಗಿಳಿಸಿದ್ದಾರೆ. ಈ ಬಗ್ಗೆ ಎಲ್ಲಿ ಬೇಕಾದರೂ ಪ್ರಮಾಣಕ್ಕೆ ಸಿದ್ಧ ಎಂದಿದ್ದಾರೆ. ಮೇಳದ ಯಜಮಾನನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಜೊತೆಗೆ ಹೈಕೋರ್ಟ್ ನಲ್ಲೂ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.

ಸದ್ಯ ಕಟೀಲು ಮೇಳ ತಿರುಗಾಟ ಆರಂಭಿಸಿದೆ. ಪ್ರತೀ ರಾತ್ರಿ ಆರು ಮೇಳಗಳು ಕರಾವಳಿ ಭಾಗದಲ್ಲಿ ಯಕ್ಷಗಾನ ನಡೆಸುತ್ತಿವೆ. ಈ ನಡುವೆಯೇ ಇಂಥದ್ದೊಂದು ವಿವಾದ ಯಕ್ಷಗಾನ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದ್ದು, ಪಟ್ಲ ಸತೀಶ್ ಶೆಟ್ಟಿ ಪರವಾಗಿ ಒಂದು ವರ್ಗ ಧ್ವನಿಯೆತ್ತಿದ್ದರೆ ಇನ್ನೊಂದು ವರ್ಗ ಮೇಳದ ಯಜಮಾನರ ಪರವಾಗಿ ನಿಂತಿದೆ. ಆದರೆ ಇದರಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ಅನ್ನೋದನ್ನು ಸ್ವತಃ ಕಟೀಲು ಶ್ರೀದುರ್ಗಾಪರಮೇಶ್ವರಿ ತಾಯಿಯೇ ನಿರ್ಧರಿಸಬೇಕು.